Advertisement

ವಾಹನಗಳ ವಿಷಾನಿಲದಿಂದಲೇ ಪರಿಸರ ಹಾಳು: ಕೊಟ್ರೇಶ್‌

08:21 PM Nov 09, 2020 | Suhan S |

ದಾವಣಗೆರೆ: ದೇಶದಲ್ಲಿ ಕೈಗಾರಿಕೆಗಳಿಂದ ಉಂಟಾಗುವ ಪರಿಸರ ಮಾಲಿನ್ಯದ ಪ್ರಮಾಣಕ್ಕಿಂತಲೂ ವಾಹನಗಳು ಹೊರಸೂಸುವ ವಿಷಾನಿಲದಿಂದಲೇ ಹೆಚ್ಚು ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಕೊಟ್ರೇಶ್‌ ಹೇಳಿದರು.

Advertisement

ಸಾರಿಗೆ ಇಲಾಖೆ ವತಿಯಿಂದ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯದ ಶೇ.65ರಷ್ಟು ವಾಹನಗಳಿಂದಲೇ ಆಗುತ್ತಿದೆ. ವಾಹನಗಳನ್ನು ಖರೀದಿಸುವವರು ಕಾಲಕಾಲಕ್ಕೆ ಆಯಿಲ್‌ ಬದಲಾವಣೆ, ಸರ್ವೀಸಿಂಗ್‌ ಮಾಡಿಸುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ.

ಹೀಗಾಗಿ ಅಂತಹ ವಾಹನಗಳಿಂದ ಹೆಚ್ಚು ಹೊಗೆ ಹೊರಸೂಸಿ ಪರಿಸರ ಮಾಲಿನ್ಯವಾಗುತ್ತಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ್ದರೂ, ಸಾರ್ವಜನಿಕರಿಂದ ಇನ್ನೂ ಪ್ಲಾಸ್ಟಿಕ್‌ ವಸ್ತು ಹಾಗೂ ಸಾಮಗ್ರಿಗಳ ಬಳಕೆ ನಿಂತಿಲ್ಲ. ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನರಿತು ನಡೆದುಕೊಳ್ಳದೇ ಹೋದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವುದು ಕಷ್ಟಕರ ಎಂದು ಕೊಟ್ರೇಶ್‌ ಆತಂಕ ವ್ಯಕ್ತಪಡಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್‌ ಕೆ. ಮಲ್ಲಾಡ ಮಾತನಾಡಿ, ಪ್ರತಿವರ್ಷ ನವೆಂಬರ್‌ ತಿಂಗಳಲ್ಲಿ ಮಾಲಿನ್ಯ ನಿಯಂತ್ರಣ ಮಾಸಾಚರಣೆ ಆಚರಿಸಲಾಗುತ್ತಿದೆ. ಈ ವರ್ಷ “ಮಾಲಿನ್ಯದಿಂದ ಮರಣ, ಮಾಡೋಣ ನಿಯಂತ್ರಣ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ದೇಶದಆರ್ಥಿಕತೆ ಸಾರಿಗೆ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಸಾರಿಗೆ ವ್ಯವಸ್ಥೆ ಸದೃಢವಾಗಿದ್ದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಕೋವಿಡ್‌ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡಿದ ಕಾರಣದಿಂದಾಗಿ

ಸಮೂಹ ಸಾರಿಗೆ ವ್ಯವಸ್ಥೆ ಕುಸಿದಿದೆ. ಸುರಕ್ಷತಾ ಕ್ರಮ ಅನುಸರಿಸಿಕೊಂಡು ಸಮೂಹ ಸಾರಿಗೆ ವ್ಯವಸ್ಥೆ ಸುಧಾರಿಸುವ ಅಗತ್ಯವಿದೆ. ಕೋವಿಡ್ ಕಾರಣದಿಂದಾಗಿ ಕಳೆದ ವರ್ಷಕ್ಕಿಂತಲೂ ಈ ವರ್ಷ ವಾಹನಗಳ ನೋಂದಣಿ ಹೆಚ್ಚಾಗಿದೆ. ಹೀಗಾಗಿ ವೈಯಕ್ತಿಕ ವಾಹನಗಳ ಓಡಾಟ ಹೆಚ್ಚಿರುವ ಕಾರಣದಿಂದ ವಾಯುಮಾಲಿನ್ಯವೂ ಹೆಚ್ಚಾಗಿದ್ದು, ಸಮಾಜದಲ್ಲಿ ಕಾಲ್ನಡಿಗೆ, ಸೈಕಲ್‌ ಬಳಕೆಗೆ ಉತ್ತೇಜನ ನೀಡುವಂತಾಗಬೇಕು. ಪ್ರತಿಯೊಬ್ಬರೂ ತಮ್ಮ ವಾಹನಗಳನ್ನು ಕಾಲಕಾಲಕ್ಕೆ ಸರ್ವೀಸಿಂಗ್‌ ಮಾಡಿಸಿಕೊಂಡು, ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಪ್ರತಿ ಆರು ತಿಂಗಳಿಗೊಮ್ಮೆ ವಾಹನದ ಎಮಿಷನ್‌ ಟೆಸ್ಟ್‌ ಮಾಡಿಸುವುದು ಕಡ್ಡಾಯವಾಗಿದ್ದು, ಇದರ ದಾಖಲೆಯನ್ನು ತಪ್ಪದೆ ಇಟ್ಟುಕೊಳ್ಳಬೇಕು, ತಪ್ಪಿದಲ್ಲಿ 1000 ರೂ. ದಂಡ ತೆರಬೇಕಾಗುತ್ತದೆ ಎಂದರು.

Advertisement

ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್‌ ಸೈಫುಲ್ಲಾ ಮಾತನಾಡಿ, ಸರಕು ಸಾಗಾಣಿಕೆ ವಾಹನಗಳು ನಿಗದಿತ ಪ್ರಮಾಣಕ್ಕಿಂತಲೂ ಅಧಿಕ ಭಾರ ಹೊತ್ತು ಸಂಚರಿಸಿದರೆ, ವಾಹನದ ಇಂಜಿನ್‌ ಮೇಲೆ ಹೆಚ್ಚಿನ ಒತ್ತಡವುಂಟಾಗಿ ವಾಹನ ಹೆಚ್ಚು ಹೆಚ್ಚು ಹೊಗೆ ಹೊರಸೂಸುತ್ತದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಅಧಿಕಾರಿಗಳು ಇದನ್ನು ತಡೆಗಟ್ಟಬೇಕು ಎಂದರು.

ಹಿರಿಯ ಮೋಟಾರು ವಾಹನ ನಿರೀಕ್ಷಕ ಪ್ರಮುದೇಶ್‌, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂ ರಾವ್‌ ಬಿ.ವಿ., ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಶಶಿಧರ್‌, ವಾಸುದೇವ್‌ ಮತ್ತಿತರರು ಇದ್ದರು. ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿರುವ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯ ಅಂಗವಾಗಿ ಪ್ರತಿನಿತ್ಯ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದ್ದು, ನ.30ಕ್ಕೆ ಮಾಸಾಚರಣೆಯ ಸಮಾರೋಪಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next