Advertisement

ಧೂಳೆಬ್ಬಿಸಲಿವೆ ಪೋಕೋ ಎಫ್1 ಮತ್ತು ಆನರ್‌ ಪ್ಲೇ

01:49 PM Sep 03, 2018 | |

ಕಂಪೆನಿಗಳು ಪೈಪೋಟಿಗಳಿದರೆ ಅದರ ಲಾಭ ಗ್ರಾಹಕನಿಗೆ!  ಮೂರು ವರ್ಷಗಳ ಹಿಂದೆ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ ಫೋನ್‌ಗಳನ್ನು ಮನಸ್ಸಿಗೆ ಬಂದ ದರ ಇಟ್ಟು ಮಾರಾಟ ಮಾಡುತ್ತಿತ್ತು.  ಬೇರೆ ಮಾರ್ಗವಿಲ್ಲದೇ ದುಡ್ಡಿರುವ ಜನರು ಕಡಿಮೆ ಫೀಚರ್ ಉಳ್ಳ ಮೊಬೈಲ್‌ಗ‌ಳಿಗೆ ಅಧಿಕ ದರ ಕೊಟ್ಟು ಕೊಳ್ಳುತ್ತಿದ್ದರು. 

Advertisement

ಮೂರು ವರ್ಷಗಳ ಹಿಂದೆ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಚೀನಾದ ಶಿಯೋಮಿ, ಆನರ್‌, ಒನ್‌ಪ್ಲಸ್‌, ಆಸುಸ್‌ ಹಾಗೂ ಇತ್ತೀಚಿಗೆ ಬಂದ ರಿಯಲ್‌ಮಿ,  ಮತ್ತಿತರ ಕಂಪೆನಿಗಳು ಮಧ್ಯಮ ವರ್ಗದ ಗ್ರಾಹಕನ ಕೈಗೆಟುಕುವ ದರದಲ್ಲಿ ಅತ್ಯುನ್ನತ ದರ್ಜೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಅದರ ಪರಿಣಾಮವೇ ಭಾರತದಲ್ಲಿ ಶಿಯೋಮಿ ಕಂಪೆನಿ ಸ್ಯಾಮ್‌ ಸಂಗ್‌ ಅನ್ನು ಹಿಂದಿಕ್ಕಿ ನಂ. 1 ಸ್ಥಾನಕ್ಕೇರಿದೆ. ಭಾರತದಲ್ಲಿ ಅದರ ಮಾರುಕಟ್ಟೆ ಪಾಲು ಶೇ. 29.7, ಎರಡನೇ ಸ್ಥಾನಕ್ಕಿಳಿದ ಸ್ಯಾಮ್‌ ಸಂಗ್‌ ಪಾಲು ಶೇ. 23.9. ಗ್ರಾಹಕ ಕೊಡುವ ದುಡ್ಡಿಗೆ ತಕ್ಕುದಾದ ಪದಾರ್ಥವನ್ನು ಆತ ಪಡೆಯಬೇಕು. ಆತ 1 ಲಕ್ಷ ರೂ. ಕೊಟ್ಟರೆ 150 ಸಿಸಿಯ ಅಪಾಚೆ ಅಥವಾ ಪಲ್ಸರ್‌ ಬೈಕ್‌ ದೊರಕಬೇಕು. 1 ಲಕ್ಷ ರೂ. ಕೊಟ್ಟು ಟಿವಿಎಸ್‌ ಎಕ್ಸೆಲ್‌ ಮೊಪೆಡ್‌ ಯಾಕೆ ಕೊಳ್ಳಬೇಕು?! ಈಗ ಅನೇಕ ಜನರು ಬ್ರಾಂಡ್‌ ಹೆಸರಿನ ಅಂಧಾನುಕರಣೆಗೆ ಬಿದ್ದು ಮಾಡುತ್ತಿರುವುದು ಇದನ್ನೇ! ಬ್ರಾಂಡ್‌ ಮೋಹಕ್ಕೆ ಬಿದ್ದು ದುಬಾರಿ ಬೆಲೆಯ ಮೊಬೈಲ್‌ ಕೊಳ್ಳುವಾಗ ಹೆಚ್ಚಿನವರು ಇದೇ ಕೆಲಸ ಮಾಡುತ್ತಿದ್ದಾರೆ. 25 ಸಾವಿರ ಬೆಲೆಯ ನಂ. 1ಬ್ರಾಂಡ್‌ ಫೋನ್‌ನಲ್ಲಿ 10-13 ಸಾವಿರ ಬೆಲೆಯ ಶಿಯೋಮಿ ಅಥವಾ ಆನರ್‌ ಫೋನ್‌ನಲ್ಲಿರುವ ಪ್ರೊಸೆಸರ್‌, ರ್ಯಾಮ್‌, ಕ್ಯಾಮರಾ ಇರುತ್ತದೆ. ಸ್ನಾಪ್‌ಡ್ರಾಗನ್‌ 450 ಎಂಬ ಎಂಟ್ರಿ ಲೆವೆಲ್‌ ಪ್ರೊಸೆಸರ್‌ ಅನ್ನು ನಂ. 1 ಬ್ರಾಂಡ್‌ ತನ್ನ 23 ಸಾವಿರ ಬೆಲೆಯ ಮೊಬೈಲಿಗಿಟ್ಟು ಮಾರುತ್ತಿದೆ! ಆನರ್‌ ಶಿಯೋಮಿ 27-30 ಸಾವಿರಕ್ಕೆ ಫ್ಲಾಗ್‌ಶಿಪ್‌ ಪ್ರೊಸೆಸರ್‌ (ಇದಕ್ಕಿಂತ ಹೆಚ್ಚಿನ ಶಕ್ತಿಶಾಲಿ ಪ್ರೊಸೆಸರ್‌ ಇನ್ನೂ ಬಂದಿಲ್ಲ) ಸ್ನಾಪ್‌ಡ್ರಾಗನ್‌ 845 ಅಥವಾ ಕಿರಿನ್‌ 970 ಪ್ರೊಸೆಸರ್‌ ಇರುವ ಮೊಬೈಲ್‌ ಮಾರುತ್ತಿದ್ದರೆ, ಮೊನ್ನೆ ತಾನೇ ಸ್ಯಾಮ್‌ ಸಂಗ್‌ ಗ್ಯಾಲಕ್ಸಿ ಎ8 ಸ್ಟಾರ್‌ ಎಂಬ ಮೊಬೈಲಿಗೆ ಸ್ನಾಪ್‌ಡ್ರಾಗನ್‌ 660 (ಮಧ್ಯಮ ದರ್ಜೆಯ) ಪ್ರೊಸೆಸರ್‌  ಇಟ್ಟು 35 ಸಾವಿರಕ್ಕೆ ಬಿಡುಗಡೆ ಮಾಡಿದೆ! ಸ್ನಾ.ಡ್ರಾ. 660 ಪ್ರೊಸೆಸರ್‌ ಇರುವ ಮೊಬೈಲ್‌ ಆನರ್‌, ಶಿಯೋಮಿಯಲ್ಲಿ  15 ಸಾವಿರದ ಮೊಬೈಲ್‌ಗ‌ಳಿಗೇ ದೊರಕುತ್ತಿದೆ! ಕೇವಲ ಪ್ರೊಸೆಸರ್‌ ಮಾತ್ರವಲ್ಲ, ಕ್ಯಾಮರಾ ಇರಲಿ, ನಿರ್ಮಾಣದ ಗುಣಮಟ್ಟ ಇರಲಿ, ಸ್ಟೈಲ್‌ ಇರಲಿ ಎಲ್ಲದರಲ್ಲೂ ಮಿತವ್ಯಯ ದರದ ಫೋನ್‌ಗಳು ಒಂದು ಕೈ ಮುಂದೇನೇ ಇವೆ.  ಇದನ್ನೇ ನಾನು 1 ಲಕ್ಷ ರೂ. ಕೊಟ್ಟು ಟಿವಿಎಸ್‌ ಮೊಪೆಡ್‌ ಕೊಂಡಂತೆ ಎಂಬ ಉದಾಹರಣೆ ಕೊಟ್ಟು ಹೇಳಿದ್ದು.

20 ಸಾವಿರಕ್ಕೆ ಫ್ಲಾಗ್‌ಶಿಪ್‌ ಪ್ರೊಸೆಸರ್‌!
ಸ್ಪರ್ಧೆ ಅಂದರೆ ಇದು! 15 ದಿನಗಳ ಹಿಂದಷ್ಟೇ ಆನರ್‌ ಕಂಪೆನಿ ಫ್ಲಾಗ್‌ಶಿಪ್‌ (ಅತ್ಯುನ್ನತ ದರ್ಜೆಯ) ಪ್ರೊಸೆಸರ್‌ ಕಿರಿನ್‌ 970 ಇರುವ ಆನರ್‌ ಪ್ಲೇ ಎಂಬ ಮೊಬೈಲನ್ನು ಕೇವಲ 20 ಸಾವಿರಕ್ಕೆ ಮಾರುಕಟ್ಟೆಗೆ ಬಿಟ್ಟಿತು. ಈಗ ಚೀನಾದ ಇನ್ನೊಂದು ಪ್ರಮುಖ ಕಂಪೆನಿ ಶಿಯೋಮಿ, ಪೋಕೋ ಎಂಬ ತನ್ನ ಹೊಸ ಸಬ್‌ ಬ್ರಾಂಡ್‌ ಹೆಸರಿನಲ್ಲಿ ಪೋಕೋ ಎಫ್1 ಎಂಬ ಮೊಬೈಲನ್ನು 21 ಸಾವಿರಕ್ಕೆ ಸ್ನಾಪ್‌ಡ್ರಾಗನ್‌ 845 ಅತ್ಯುನ್ನತ ದರ್ಜೆಯ ಪ್ರೊಸೆಸರ್‌ ಹಾಕಿ ಮಾರುಕಟ್ಟೆಗೆ ಬಿಟ್ಟಿದೆ!

ಆನರ್‌ ಪ್ಲೇ: 20 ಸಾವಿರ ರೂ. ಬೆಲೆಯ ಆನರ್‌ ಪ್ಲೇ ನಲ್ಲಿ ಹುವಾವೇ ಕಂಪೆನಿಯ 60-70 ಸಾವಿರ ಬೆಲೆಯ ಮೊಬೈಲ್‌ಗ‌ಳಲ್ಲಿ ಹಾಕುವ ವೇಗದ ಪ್ರೊಸೆಸರ್‌ ಕಿರಿನ್‌ 970 ಎಐ ಅಳವಡಿಸಲಾಗಿದೆ. ಗೇಮ್‌ಗಳನ್ನು ಅಡೆತಡೆಯಿಲ್ಲದೇ ಆಡಲು, ಜಿಪಿಯು ಟಬೊ ಎಂಬ ತಂತ್ರಜ್ಞಾನ ರೂಪಿಸಲಾಗಿದೆ. ಮೊಬೈಲ್‌ ಮಾರುಕಟ್ಟೆ ಬಲ್ಲವರಿಗೆ ಚೆನ್ನಾಗಿ ಗೊತ್ತಿರುತ್ತದೆ ಇಂಥ ಪ್ರೊಸೆಸರ್‌ಗಳನ್ನು ಕನಿಷ್ಟ 30-35 ಸಾವಿರ ಬೆಲೆಯ ಮೊಬೈಲ್‌ ಗಳಲ್ಲಿ ಮಾತ್ರ ಹಾಕಲಾಗುತ್ತದೆ. 6.29 ಇಂಚಿನ ಫ‌ುಲ್‌ ಎಚ್‌ಡಿ ಪ್ಲಸ್‌ ಸ್ಕೀನ್‌, 3750 ಎಂಎಎಚ್‌ ಬ್ಯಾಟರಿ, 16 ಮತ್ತು 2 ಮೆಗಾಪಿಕ್ಸಲ್‌ ಹಿಂದಿನ ಕ್ಯಾಮರಾ, 16 ಮೆ.ಪಿ. ಮುಂದಿನ ಕ್ಯಾಮರಾ ಇದೆ. 4 ಜಿಬಿ ಮತ್ತು 6 ಜಿಬಿ ಎರಡು ವರ್ಷನ್‌ ರ್ಯಾಮ್‌ ಮತ್ತು 64 ಜಿಬಿ ಇಂಟರ್ನಲ್‌ ಮೆಮೋರಿ ಒಳಗೊಂಡಿದೆ. ಸಂಪೂರ್ಣ ಮೆಟಾಲಿಕ್‌ (ಲೋಹದ) ಬಾಡಿ ಇದೆ. ಇದು ಅಮೆಜಾನ್‌ನಲ್ಲಿ ಮಾತ್ರ ದೊರಕುತ್ತಿದ್ದು, ಭಾರತದಲ್ಲಿ ಫ್ಲಾಶ್‌ ಸೇಲ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. 

ಪೋಕೋ ಎಫ್ 1
ಶಿಯೋಮಿ ಕಂಪೆನಿ ಪೋಕೋ ಎಫ್ 1 ಬಿಡುಗಡೆ ಮಾಡಿದೆ.  ಮೊದಲೇ ತಿಳಿಸಿದಂತೆ ಇದಕ್ಕೆ ಸ್ನಾಪ್‌ಡ್ರಾಗನ್‌ 845 ಪ್ರೊಸೆಸರ್‌ ಇದೆ. ಇದು ಅತ್ಯುನ್ನತ ಶಕ್ತಿಶಾಲಿ ಪ್ರೊಸೆಸರ್‌. ಇದು ಸಹ 60-70 ಸಾವಿರ ರೂ.ಗಳ ಮೊಬೈಲ್‌ನಲ್ಲಿ ಹಾಕುವ ಪ್ರೊಸೆಸರ್‌. ಪೋಕೋ ಎಫ್ 1 ಅನ್ನು ಮೂರು ವರ್ಷನ್‌ಗಳಲ್ಲಿ ಬಿಡಲಾಗಿದೆ. 64 ಜಿಬಿ ಮೆಮೋರಿ, 6 ಜಿಬಿ ರ್ಯಾಮ್‌ ವರ್ಷನ್‌ಗೆ 21 ಸಾವಿರ ರೂ. 128 ಜಿಬಿ ಮೆಮೋರಿ, 6 ಜಿಬಿ ರ್ಯಾಮ್‌ ವರ್ಷನ್‌ಗೆ 24 ಸಾವಿರ ರೂ. 256 ಜಿಬಿ ಮೆಮೊರಿ, 8 ಜಿಬಿ ರ್ಯಾಮ್‌ ಆವೃತ್ತಿಗೆ 29 ಸಾವಿರ ರೂ.! 6.18 ಇಂದಿನ್‌ ಎಫ್ಎಚ್‌ಡಿ ಪ್ಲಸ್‌ ಸ್ಕ್ರೀನ್‌, 12 ಮತ್ತು 5 ಎಂಪಿ ಹಿಂದಿನ ಡುಯಲ್‌ ಕ್ಯಾಮರಾ, 20 ಮೆ.ಪಿ. ಮುಂದಿನ ಕ್ಯಾಮರಾ ಇದೆ. 4000 ಎಂಎಎಚ್‌ ಬ್ಯಾಟರಿ ಇದೆ. ಆದರೆ ಪೋಕೋ ಎಫ್1 ಮೆಟಾಲಿಕ್‌ ಬಾಡಿ (ಲೋಹದ) ಹೊಂದಿಲ್ಲ. ಇದು ಪ್ಲಾಸ್ಟಿಕ್‌ ಬಾಡಿ. ಪೋಕೋ ಎಫ್ 1 ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ದೊರೆಯುತ್ತದೆ. 

Advertisement

ಖಂಡಿತ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮೊಬೈಲ್‌ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದರಲ್ಲಿ ಅನುಮಾನವಿಲ್ಲ. ಆನರ್‌ ಪ್ಲೇ ಮತ್ತು ಶಿಯೋಮಿ ಎಫ್1 ಹಲವು ವಾರಗಳ ಕಾಲ ಫ್ಲಾಶ್‌ ಸೇಲ್‌ನಲ್ಲಿ ಪೈಪೋಟಿಯಲ್ಲಿ ಮಾರಾಟವಾಗಲಿವೆ. ಇವೆನ್ನನುಸರಿಸಿ ಇನ್ನಿತರ ಕಂಪೆನಿಗಳೂ ಈ ಬೆಲೆಗೆ ಅತ್ಯುನ್ನತ ದರ್ಜೆಯ ಮೊಬೈಲ್‌ ನೀಡಲೇಬೇಕಾಗುತ್ತದೆ. ಅಂತಿಮವಾಗಿ ಲಾಭ ಗ್ರಾಹಕನಿಗೆ! 

ಪ್ರೊಸೆಸರ್‌: ಮೊಬೈಲ್‌ ಮಿದುಳು
ಪ್ರೊಸೆಸರ್‌ ಅಂದರೆ ಒಂದು ಮೊಬೈಲ್‌ನ ಮೆದುಳು ಅಥವಾ ಹೃದಯ ಇದ್ದಂತೆ. ಬೈಕ್‌ ಸ್ಕೂಟರ್‌ಗಳಲ್ಲಿ ಇಂಜಿನ್‌ ಹೇಗೋ ಹಾಗೆ ಮೊಬೈಲ್‌ ಫೋನ್‌ಗಳಲ್ಲಿ ಪ್ರೊಸೆಸರ್‌. ಬೈಕ್‌ಗಳಲ್ಲಿ 100 ಸಿಸಿ, 150 ಸಿಸಿ. 200 ಸಿಸಿ ಇರುವಂತೆಯೇ, ಮೊಬೈಲ್‌ಗ‌ಳಲ್ಲೂ 10 ಸಾವಿರದೊಳಗಿನ ಪೋನ್‌ಗಳಿಗೆ  ಆರಂಭಿಕ ದರ್ಜೆಯ, ರೂ.12 ರಿಂದ 25 ಸಾವಿರದವರೆಗೆ ಮಧ್ಯಮ ದರ್ಜೆಯ, ರೂ.25-30  ಸಾವಿರದ ನಂತರ ಅತ್ಯುನ್ನತ ದರ್ಜೆಯ ಪ್ರೊಸೆಸರ್‌ ಹಾಕುತ್ತಾರೆ. 

ಆರಂಭಿಕ ದರ್ಜೆಯ ಪ್ರೊಸೆಸರ್‌ಗಳಲ್ಲಿ ಮೊಬೈಲ್‌ನಲ್ಲಿ ಹೆಚ್ಚಿನ ವೇಗ, ಗೇಮ್‌ಗಳು ಸುಲಲಿತವಾಗಿರುವುದಿಲ್ಲ. ಮಧ್ಯಮ ದರ್ಜೆಯ ಪ್ರೊಸೆಸರ್‌ಗಳು ಸಾಕಷ್ಟು ವೇಗ, ಅಡೆತಡೆಯಿಲ್ಲದ ಗೇಮ್‌ಗಳಿಗೆ ಸಹಾಯಕವಾಗಿರುತ್ತವೆ. ಅತ್ಯುನ್ನತ ದರ್ಜೆಯ ಪ್ರೊಸೆಸರ್‌ಗಳುಳ್ಳ ಮೊಬೈಲ್‌ಗ‌ಳು ಬಹಳ ವೇಗವಾಗಿರುತ್ತವೆ, ಗೇಮ್‌ಗಳನ್ನು ಆರಾಮವಾಗಿ ಆಡಬಹುದು. ಬೇಗ ಡೌನ್‌ಲೋಡ್‌ ಮಾಡಬಹುದು.  30-35 ಸಾವಿರ ರೂ.ಗಳಿಗೇ ಒನ್‌ಪ್ಲಸ್‌, ಆನರ್‌, ಶಿಯೋಮಿ, ಆಸುಸ್‌ ಅತ್ಯುನ್ನತ ದರ್ಜೆಯ ಪ್ರೊಸೆಸರ್‌ ನೀಡಿದರೆ, ಸ್ಯಾಮ್‌ಸಂಗ್‌ 60-70 ಸಾವಿರ ರೂ.ಗಳ ಫೋನ್‌ಗಳಲ್ಲಿ ಇಂಥ ಪ್ರೊಸೆಸರ್‌ ಬಳಸುತ್ತದೆ.

ರ್ಯಾಮ್‌ ಅಂದ್ರೆ ಏನು?
ಮೊಬೈಲ್‌ಗ‌ಳಲ್ಲಿ 3 ಜಿಬಿ ರ್ಯಾಮ್‌, 4 ಜಿಬಿ ರ್ಯಾಮ್‌ ಅಂತ ನೋಡುತ್ತೇವೆ. ರ್ಯಾಮ್‌ ಅಂದರೇನು? ಎಂಬ ಕುತೂಹಲ ಹಲವರಲ್ಲಿರುತ್ತದೆ. ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 32 ಜಿಬಿ, 64 ಜಿಬಿ ಅಂತರ್ಗತ (ಇಂಟರ್ನಲ್‌) ಮೆಮೊರಿ ಇರುತ್ತದೆ. ಇದು ನಿಮ್ಮ ಫೋಟೋ, ಹಾಡು, ಆ್ಯಪ್‌ಗ್ಳನ್ನು  ಶೇಖರಿಸಿಕೊಳ್ಳುತ್ತದೆ. ನೀವು ಡಿಲಿಟ್‌ ಮಾಡುವವರೆಗೂ ಇವು ಇರುತ್ತವೆ. ಆದರೆ ರ್ಯಾಮ್‌ ಎಂಬುದು ತಾತ್ಕಾಲಿಕ ಸಂಗ್ರಹಣಾ ವ್ಯವಸ್ಥೆ. ನಿಮ್ಮ ಫೋನ್‌ನಲ್ಲಿ ನೀವು ಆ್ಯಪ್‌ಗ್ಳನ್ನು ಓಪನ್‌ ಮಾಡುತ್ತೀರಿ, ಗೂಗಲ್‌ಗೆ ಹೋಗಿ ಯಾವುದೋ ಮಾಹಿತಿ ಓದುತ್ತೀರಿ, ಇನ್ನೊಂದು ಬ್ಯಾಂಕಿನ ಆಪ್‌ಗೆ ಹೋಗಿ ವ್ಯವಹಾರ ನಡೆಸುತ್ತಿರುತ್ತೀರಿ. ಇವೆಲ್ಲ ತಾತ್ಕಾಲಿಕವಾಗಿ ಶೇಖರಣೆಗೊಂಡು ನಿಮ್ಮ ರ್ಯಾಮ್‌ ಮೆಮೋರಿಯಲ್ಲಿ ಕುಳಿತಿರುತ್ತವೆ. ನಿಮ್ಮ ಮೊಬೈಲ್‌ನ ನ್ಯಾವಿಗೇಷನ್‌ ಬಟನ್‌ನಲ್ಲಿ ಚೌಕದ ಸಿಂಬಲ್‌ ಒತ್ತಿದಾಗ ನೀವು ಯಾವೆಲ್ಲ ಆ್ಯಪ್‌ ಓಪನ್‌ ಮಾಡಿರುತ್ತೀರಿ ಅವೆಲ್ಲ ಕಾಣುತ್ತವೆ. ಅಲ್ಲಿ ಬರುವ ಡಿಲೀಟ್‌ ಸಿಂಬಲ್‌ ಒತ್ತಿದರೆ ಅವೆಲ್ಲ ಅಳಿಸಿಹೋಗುತ್ತವೆ. ಫೋನ್‌ ಮ್ಯಾನೇಜರ್‌ ಆ್ಯಪ್‌ನಲ್ಲಿ, ಕ್ಲೀನ್‌ ಮಾಸ್ಟರ್‌ನಂಥ ಆ್ಯಪ್‌ ಮೂಲಕ ಕ್ಲೀನಿಂಗ್‌ ಕೊಟ್ಟಾಗಲೂ ಆ ತಾತ್ಕಾಲಿಕ ಮೆಮೊರಿ ನಾಶವಾಗುತ್ತದೆ. 

ಈ ತಾತ್ಕಾಲಿಕ ಮೆಮೊರಿ ಸಂಗ್ರಹಕ್ಕೆ ರ್ಯಾಮ್‌ ಜಾಸ್ತಿ ಇದ್ದಷ್ಟೂ ಅನುಕೂಲ. ಫೋನ್‌ ಹ್ಯಾಂಗ್‌ ಆಗುವುದಿಲ್ಲ. ನಮ್ಮ ನಿಮ್ಮಂಥ ಮೊಬೈಲ್‌ ಬಳಕೆದಾರರಿಗೆ 4 ಜಿಬಿ ರ್ಯಾಮ್‌ ಸಾಕು. ಇನ್ನೂ ಹೆಚ್ಚೆಂದರೆ 6 ಜಿಬಿ ರ್ಯಾಮ್‌ ಸಾಕೋ ಸಾಕು. 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next