Advertisement
ಅಭ್ಯರ್ಥಿಗಳ ಆಯ್ಕೆ ಬಗ್ಗೆ ಉಸ್ತುವಾರಿ ಸಚಿವರು ನೀಡಿದ ವರದಿ ಆಧರಿಸಿ ಮೂರು ದಿನಗಳ ಹಿಂದಷ್ಟೇ ಚುನಾವಣ ಸಮಿತಿ ಸಭೆ ನಡೆಸಿತ್ತು. ಅಲ್ಲಿ ಮತ್ತೂಂದು ಸುತ್ತಿನ ಸಭೆ ಜತೆಗೆ ಪಕ್ಷವು ಪ್ರತ್ಯೇಕ ಸಮೀಕ್ಷೆಗಳನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆ ಪ್ರಕ್ರಿಯೆಗೆ ಈಗ ಚಾಲನೆ ನೀಡಲಾಗಿದೆ. ಇನ್ನೊಂದು ವಾರದಲ್ಲಿ ಇದು ಪೂರ್ಣಗೊಳ್ಳಲಿದ್ದು, ಉಸ್ತುವಾರಿ ಮತ್ತು ಎಐಸಿಸಿ ಕಾರ್ಯದರ್ಶಿಗೆ ವರದಿ ಸಲ್ಲಿಕೆಯಾಗಲಿದೆ.
ಸಚಿವರು ನಡೆಸುವ ಸಮೀಕ್ಷೆಗೆ ಪರ್ಯಾಯವಾಗಿ ಕಾಂಗ್ರೆಸ್ ವರಿಷ್ಠರು ಮತ್ತೂಂದು ಕಡೆಯಿಂದ ಹಲವು ಸಮೀಕ್ಷೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಖಾಸಗಿಯಾಗಿ ಮತ್ತು ಪಕ್ಷದಲ್ಲೇ ಆಂತರಿಕವಾಗಿ ನಡೆಯುವ ಈ ಸರ್ವೇಯಲ್ಲಿ ಸ್ಥಳೀಯ ಮಟ್ಟದಲ್ಲಿ ನಿರ್ದಿಷ್ಟ ಪ್ರಶ್ನೆಗಳ ಮಾದರಿಗಳೊಂದಿಗೆ ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈ ಹಿಂದೆ ಸೋತ ಅಭ್ಯರ್ಥಿಗಳು ಈಗ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆಯೇ? ಸೋಲಿನ ಅಂತರ ಎಷ್ಟಿತ್ತು? ಜಾತಿ ಸಮೀಕರಣ, ಪ್ರತಿಸ್ಪರ್ಧಿಯ ಬಲಾಬಲ ಮತ್ತಿತರ ಅಂಶಗಳನ್ನು ಕಲೆಹಾಕಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ರಾಜ್ಯಕ್ಕೆ ಭೇಟಿ ನೀಡಲಿದ್ದು, ಹಲವು ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಒಟ್ಟಾರೆ ಮಾಸಾಂತ್ಯಕ್ಕೆ ಆಗದಿದ್ದರೂ, ಫೆಬ್ರವರಿ ಮೊದಲ ವಾರದಲ್ಲಿ ಶತಾಯಗತಾಯ ಸಂಭವನೀಯ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಶಿಫಾರಸು ಮಾಡುವ ಗುರಿ ಹೊಂದಲಾಗಿದೆ. ಆ ಪಟ್ಟಿಯಲ್ಲಿ ಪ್ರತಿ ಕ್ಷೇತ್ರದಿಂದ ಕನಿಷ್ಠ 2 ಮತ್ತು ಗರಿಷ್ಠ 3 ಅಭ್ಯರ್ಥಿಗಳ ಹೆಸರನ್ನು ಮಾತ್ರ ಉಲ್ಲೇಖೀಸಲಾಗುತ್ತದೆ ಎನ್ನಲಾಗುತ್ತಿದೆ.