Advertisement

ರಾಜಕಾರಣಕ್ಕೆ ಜ್ಞಾನಿಗಳ ಅಗತ್ಯ: ಉಪೇಂದ್ರ

04:19 PM Apr 11, 2019 | Team Udayavani |
ಹಾವೇರಿ: ನಮ್ಮ ಪಕ್ಷದ ಅಭ್ಯರ್ಥಿ ಗೆದ್ದರೆ ಜನರ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ಚಲನಚಿತ್ರ ನಟ ಉಪೇಂದ್ರ ಹೇಳಿದರು.
ಬುಧವಾರ ಸಂಜೆ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ, ಜಾತಿ, ಬಲ ಏನನ್ನೂ ಕೇಳದೆ ಜನರ ಕೆಲಸ ಮಾಡುವ ಷರತ್ತಿನೊಂದಿಗೆ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ರಾಜಕಾರಣಕ್ಕೆ ಜ್ಞಾನಿಗಳು ಮುಂದೆ ಬರಬೇಕೆ ವಿನಃ ಹಣ ಇರುವವರು ಅಲ್ಲ. ರಾಜಕೀಯದಲ್ಲಿ ಬದಲಾವಣೆಗಾಗಿ ಪ್ರಯತ್ನ ನಡೆದಿದ್ದು, ಜನರು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ. ನಾವು ಪ್ರಚಾರಕ್ಕಾಗಿ ಜಾಥಾ, ಸಮಾವೇಶ ಮಾಡುವುದಿಲ್ಲ. ಅಭ್ಯರ್ಥಿ ಸಾಧ್ಯವಾದಷ್ಟು ಓಡಾಡಿ ಪ್ರಚಾರ ಮಾಡುತ್ತಾರೆ ಎಂದರು.
ಸದ್ಯದ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಚುನಾವಣೆ ಎಂದರೆ ಬಂಡವಾಳ ಹಾಕಿ ಬಂಡವಾಳ ತೆಗೆಯುವ ಉದ್ಯಮವಾಗಿದೆ. ಇದನ್ನು ಬದಲಿಸಿ ಸಂವಿಧಾನದ ಆಶಯದಂತೆ ಜನರ ಕೈಗೆ ಅಧಿಕಾರ ನೀಡಲು ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಲಾಗಿದೆ. ನಾವು ಸೇವಕರಲ್ಲ, ನಾಯಕರೂ ಅಲ್ಲ. ಮತದಾರರಿಂದ ಮತ ಎಂಬ ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರು. ಇದರಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವುದಕ್ಕಿಂತ ಮತದಾರ ಗೆಲ್ಲಬೇಕು ಎಂದರು.
ಯಾರೋ ನೀಡುವ ಸುಳ್ಳು ಭರವಸೆ ನಂಬಿ ಮೋಸ ಹೋಗದೆ ಜನರು ಹೇಳಿದಂತೆ ನಡೆದುಕೊಳ್ಳುವ ವ್ಯಕ್ತಿಯನ್ನು ಬೆಂಬಲಿಸಬೇಕಿದೆ. ಪಕ್ಷ, ವ್ಯಕ್ತಿಗಿಂತ ವಿಚಾರಗಳು ಚುನಾವಣೆಯಲ್ಲಿ ಮುಖ್ಯವಾಗಬೇಕು.
ನಾವು ಯಾವುದೇ ಪಕ್ಷವನ್ನು ಧೂಷಣೆ ಮಾಡುತ್ತಿಲ್ಲ. ರಾಜಕೀಯದಲ್ಲಿ ಹೊಸ ಬದಲಾವಣೆ ತರಲು ಬಯಸಿದ್ದೇವೆ. ಒಮ್ಮೆಲೇ ಇಡೀ ರಾಜಕೀಯ ವ್ಯವಸ್ಥೆ ಸುಧಾರಿಸುತ್ತೇನೆಂಬ ಭ್ರಮೆಯಿಲ್ಲ. ಆದರೆ, ಶೇ. 80ರಷ್ಟು ಜನರು ಈಗಿನ ರಾಜಕೀಯ ವ್ಯವಸ್ಥೆ ಬಗ್ಗೆ ರೋಸಿ ಹೋಗಿದ್ದಾರೆ. ಅವರು ಬಯಸಿದಂತೆ ಪಕ್ಷ ಕಟ್ಟಲಾಗಿದೆ. ಜನರೇ ಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರಬೇಕು. ಇನ್ನು ಕೆಲವು ವರ್ಷಗಳಲ್ಲಾದರೂ ಈ ವ್ಯವಸ್ಥೆ ಬರಲಿದೆ ಎಂಬ ಭರವಸೆ ಇದೆ ಎಂದರು.
ಪಕ್ಷದ ಅಭ್ಯರ್ಥಿ ಈಶ್ವರ ಪಾಟೀಲ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿಕೊಂಡು ಅಭ್ಯರ್ಥಿಯಾಗಿದ್ದೇನೆ.
ಚುನಾವಣೆಯೆಂದರೆ ಜನರ ಕೈಗೆ ಅಧಿಕಾರ ನೀಡುವ ಪ್ರಕ್ರಿಯೆಯೇ ಹೊರತು ನಾಯಕನಿಗಲ್ಲ. ಇಂಥ ವ್ಯವಸ್ಥೆ ಬರಬೇಕು ಎಂಬ ಅಭಿಪ್ರಾಯ ಎಲ್ಲ ಕಡೆಗಳಿಂದ ಬರುತ್ತಿದೆ. ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡುವುದಿಲ್ಲ. ನಾಮಪತ್ರ ಸಲ್ಲಿಕೆಗೆ ಠೇವಣಿ ಹಾಗೂ ಕರಪತ್ರ ಮುದ್ರಿಸುವ ಖರ್ಚು ಮಾತ್ರ ಮಾಡುತ್ತಿದ್ದೇನೆ. ಆಯ್ಕೆಯಾದರೆ ದೇಶದಲ್ಲೇ ಮಾದರಿ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next