ಮೈಸೂರು: ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ಕೇಂದ್ರ ಸರ್ಕಾರ ನಕಾರ ತೋರಿದ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಿಡಿಕಾರಿದ್ದರು, ತಿನ್ನುವ ಅಕ್ಕಿ ಹಾಗೂ ಬಡವರ ಮೇಲೆ ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಅವರೇನು ಪುಕ್ಸಟ್ಟೆ ಅಕ್ಕಿ ಕೊಡುತ್ತಿಲ್ಲ. ಕೇಂದ್ರಕ್ಕೆ ಅಕ್ಕಿ ಕೊಡುವಂತೆ ನಾವು ಪುಕ್ಸಟೆ ಕೇಳಿಲ್ಲ. ಬರುವ ಜುಲೈ 1ರಿಂದ ಅನ್ನ ಭಾಗ್ಯ ಯೋಜನೆಯಡಿ 10ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ, ನಮ್ಮಲ್ಲಿ ಇಲ್ಲ ಎಂದು ಕಾಗದ ಬರೆದಿದ್ದಾರೆ. ಹೀಗಾಗಿ ಸಿಎಂ ಈಗಾಗಲೇ ಛತ್ತಿಸ್ ಗಡ್, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಜೊತೆ ಮಾತನಾಡಿ ಪತ್ರ ಬರೆದಿದ್ದಾರೆ ಎಂದರು.
ಕೇಂದ್ರ ಸರ್ಕಾರ ಅಕ್ಕಿ ಕೊಡದಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ನಮಗೆ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಎಲ್ಲಾ ರಾಜ್ಯಗಳಿಗೂ ಅಕ್ಕಿ ಕೊಡುವುದಿಲ್ಲ ಎಂದು ವಾಪಸ್ ಪಡೆದಿದ್ದಾರೆ. ಈ ಬಗ್ಗೆ ದೊಡ್ಡ ಹೋರಾಟ ಮಾಡುತ್ತೇವೆ. ಮುಂದಿನ ರೂಪುರೇಷೆಯ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ:Ullala: ಮನೆಗೆ ರೂ.7.7 ಲಕ್ಷ ವಿದ್ಯುತ್ ಬಿಲ್; ಅಷ್ಟಕ್ಕೂ ಆಗಿದ್ದೇನು?
ಕರ್ನಾಟಕದ ರೈತರಿಂದಲೇ ಅಕ್ಕಿ ಖರೀದಿ ಮಾಡಬೇಕೆಂಬ ವಿಚಾರಕ್ಕೆ ಮಾತನಾಡಿ, ಓಪನ್ ಮಾರ್ಕೆಟ್ ನಲ್ಲಿ ಅಕ್ಕಿ ಖರೀದಿ ಮಾಡಲು ಸಾಧ್ಯವಿಲ್ಲ. ಕೆಲವು ಸಂಸ್ಥೆಗಳು, ಬೇರೆ ಬೇರೆ ಏಜೆನ್ಸಿಗಳ ಮೂಲಕ ಅಕ್ಕಿ ಖರೀದಿ ಮಾಡಬೇಕು. ಯಾರ ಬಳಿಯೂ ಬೊಟ್ಟು ಮಾಡಿ ತೋರಿಸಿಕೊಳ್ಳುವ ರೀತಿ ಕೆಲಸ ಮಾಡುವುದಿಲ್ಲ. ತಿನ್ನುವ ಅಕ್ಕಿ ಹಾಗೂ ಬಡವರ ಮೇಲೆ ರಾಜಕೀಯ ಮಾಡುವುದು ಸರಿಯಲ್ಲ. ಕೇಂದ್ರದ ನಿಲುವನ್ನು ಖಂಡಿಸುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.