Advertisement

ನೀರಾವರಿ ವಿಷಯದಲ್ಲಿ ರಾಜಕೀಯ ಸಲ್ಲ: ಸಂಗಣ್ಣ ಕರಡಿ ಅವರು ರಾಯರಡ್ಡಿ ಆಕ್ಷೇಪಕ್ಕೆ ತಿರುಗೇಟು

07:58 PM Jan 24, 2022 | Team Udayavani |

 ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹನಿ ನೀರಾವರಿ ಬದಲಿಗೆ ಮಧ್ಯ ಪ್ರದೇಶ ಮಾದರಿ ನೀರಾವರಿ ಮಾಡಲು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಆದರೆ ಇದಕ್ಕೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ. ತಮ್ಮದೇ ಕಾಂಗ್ರೆಸ್‌ ಸರ್ಕಾರ ಇದ್ದಾಗ ಏಕೆ ನೀರಾವರಿ ಪೂರ್ಣಗೊಳಿಸಲಿಲ್ಲ. ಸುಮ್ಮನೇ ನೀರಾವರಿ ವಿಷಯದಲ್ಲಿ ರಾಜಕೀಯ ಮಾಡುವುದು ಸಲ್ಲ ಎಂದು ಸಂಸದ ಸಂಗಣ್ಣ ಕರಡಿ ಅವರು ರಾಯರಡ್ಡಿ ಆಕ್ಷೇಪಕ್ಕೆ ತಿರುಗೇಟು ನೀಡಿದ್ದಾರೆ.

Advertisement

ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಬಲ ಭಾಗದಲ್ಲಿ ಸಂಪೂರ್ಣ ನೀರಾವರಿಯಾಗಿದೆ. ಅಲ್ಲಿನ ರೈತರು ಸಮೃದ್ಧಿ ಬೆಳೆ ಬೆಳೆಯುತ್ತಿದ್ದಾರೆ. ಗದಗ ಭಾಗದಲ್ಲಿಯೂ ಸಹ ಎಚ್‌.ಕೆ. ಪಾಟೀಲ್‌ ಅವರು ಕೆರೆಗಳಿಗೆ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಎಡ ಭಾಗದಲ್ಲಿನ ಮುಂಡರಗಿ, ಕೊಪ್ಪಳ ಜಿಲ್ಲೆಯ ಜನರು ನೀರಾವರಿ ಸೌಲಭ್ಯವನ್ನೇ ಕಂಡಿಲ್ಲ. ಈ ಭಾಗ ಸಂಪೂರ್ಣ ನೀರಾವರಿ ವಂಚಿತವಾಗಿದೆ. ಈ ಮೊದಲು ಸಿಂಗಟಾಲೂರು ಏತ ನೀರಾವರಿಯಡಿ ಕೊಪ್ಪಳ ಜಿಲ್ಲೆಯು ಸೇರಿರಲಿಲ್ಲ. ನಾವು ನಿರಂತರ ಹೋರಾಟ ಮಾಡಿದ ಫಲವಾಗಿ ಕೊಪ್ಪಳ ಜಿಲ್ಲೆಗೂ ಆ ಯೋಜನೆ ವಿಸ್ತರಣೆ ಮಾಡಿದರು. ಆದರೆ ಬಲದಂಡೆ ಭಾಗ ಕಾಲುವೆ ನೀರಾವರಿಯಾಗಿ ಯಶಸ್ವಿಯಾಗಿ ನಡೆಯುತ್ತಿದೆ. ಎಡ ಭಾಗದ ರೈತರು ಹತ್ತಾರು ವರ್ಷಗಳಿಂದ ನೀರಾವರಿ ವಂಚಿತರಾಗಿದ್ದಾರೆ. ಈ ವಿಚಾರ ರಾಯರಡ್ಡಿ ಅವರಿಗೆ ಗೊತ್ತಿಲ್ಲವೇ ಎಂದಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ ಸರ್ಕಾರವೇ ಅಧಿ ಕಾರದಲ್ಲಿತ್ತಲ್ಲ. ಆಗ ಏಕೆ ರಾಯರಡ್ಡಿ ಅವರು ಸಿಂಗಟಾಲೂರು ಏತ ನೀರಾವರಿ ಬಗ್ಗೆ ಮಾತನಾಡಲಿಲ್ಲ. ಸರ್ಕಾರದಲ್ಲಿ ಅವರೂ ಮಂತ್ರಿಯಾಗಿದ್ದವರು. ಆಗ ನೀರಾವರಿ ವಿಷಯವು ಇವರ ಗಮನಕ್ಕೆ ಬರಲಿಲ್ಲವೇಕೆ? ಬಲ ಭಾಗಕ್ಕೆ ಕಾಲುವೆ ನೀರು ಮಾಡಿ, ಎಡ ಭಾಗದಲ್ಲಿ ಹನಿ ನೀರಾವರಿ ಯೋಜನೆ ಜಾರಿಗೊಳಿಸಿದ್ದರು. ಆದರೆ ಹನಿ ನೀರಾವರಿ ಎಲ್ಲಿಯೂ ಯಶಸ್ವಿಯಾಗಿಲ್ಲ. ರಾಮತಾಳ ಸೇರಿದಂತೆ ಹಲವು ಹನಿ ನೀರಾವರಿ ಯೋಜನೆಯು ವಿಫಲವಾಗಿವೆ. ರೈತರ ಜಮೀನಿನಲ್ಲಿ ಹಾಕಿದ್ದ ಪೈಪ್‌ ಗಳೂ ಈಗ ಇಲ್ಲದಂತಾಗಿವೆ. ಕೆಲವೊಂದು ಕಡೆ ಪೈಪ್‌ ಗಳನ್ನೇ ಹಾಕಿಲ್ಲ. ಹಾಗಾಗಿ ಸಿಎಂ ಬೊಮ್ಮಾಯಿ ಅವರು ಸ್ವತಃ ನೀರಾವರಿ ಸಚಿವರಾಗಿದ್ದವರು. ನೀರಾವರಿ ಬಗ್ಗೆ ತುಂಬಾ ಅನುಭವ ಇದೆ. ಸಿಂಗಟಾಲೂರು ಏತ ನೀರಾವರಿ ಬಗ್ಗೆ ಅವರಿಗೆ ತುಂಬ ಜ್ಞಾನವಿದೆ. ನಮ್ಮ ಕಮಿಟ್‌ಮೆಂಟ್‌ಗೆ ಸಿಎಂ ಒಪ್ಪಿ ಹನಿ ನೀರಾವರಿ ಬದಲಿಗೆ ಎಂಪಿ ಮಾದರಿ ನೀರಾವರಿ ಯೋಜನೆಯನ್ನಾಗಿ ಮಾಡಿದ್ದಾರೆ. ಇದಕ್ಕೆ ರಾಯರಡ್ಡಿ ಎಂಪಿ ಮಾದರಿ ಯಶಸ್ವಿಯಾಗಲ್ಲ. ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ರಾಯರಡ್ಡಿ ಅವರು ನೀರಾವರಿ ಬಗ್ಗೆ ಜ್ಞಾನ ಇದ್ದವರು. ಸುಮ್ಮನೆ ರಾಜಕೀಯ ಕಾರಣಕ್ಕೆ ಮಾತನಾಡುವುದು ಸರಿಯಲ್ಲ. ರಾಜಕೀಯ ಮಾತನಾಡಲು ಬೇರೆ ವೇದಿಕೆಗಳಿವೆ. ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ ಎಂದು ರಾಯರಡ್ಡಿ ಹೇಳಿಕೆಗೆ ಗರಂ ಆಗಿದ್ದಾರೆ.

ಮಧ್ಯ ಪ್ರದೇಶದಲ್ಲಿ ಚೇಂಬರ್‌ ಮೂಲಕ ನೀರು ಹರಿಸುವ ಯೋಜನೆ ಯಶಸ್ವಿಯಾಗಿದೆ. ಅಲ್ಲಿನ ನೀರಾವರಿ ವ್ಯವಸ್ಥೆಯ ಬಗ್ಗೆ ತಜ್ಞರು ತೆರಳಿ ಅಧ್ಯಯನ ಮಾಡಿ, ಅದನ್ನು ಇಲ್ಲಿ ಅನುಷ್ಠಾನ ಮಾಡಲಿದ್ದಾರೆ. ಮೊದಲು ಪೈಪ್‌ಗ್ಳ ಮೂಲಕ ರೈತರ ಜಮೀನಿಗೆ ನೀರು ಹರಿದು ಬರಲಿ. ನಂತರ ಹನಿ ನೀರಾವರಿ ಯೋಜನೆಯಡಿ ರೈತರಿಗೆ ಈಗಾಗಲೇ ಡ್ರಿಪ್‌ ಪೈಪ್‌ಗ್ಳನ್ನು ಸರ್ಕಾರವು ವಿವಿಧ ಯೋಜನೆಯಡಿಯಲ್ಲಿ ಕೊಡುತ್ತಿದೆ. ಅದರಲ್ಲಿ ರೈತರು ಈ ಸೌಲಭ್ಯ ಪಡೆದುಕೊಳ್ಳಲಿದ್ದಾರೆ. ಅಗತ್ಯವಿದ್ದರೆ ಸರ್ಕಾರವೂ ಮತ್ತೆ ನೆರವಾಗಲಿದೆ. ಸುಮ್ಮನೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದು ರಾಯರಡ್ಡಿ ಅವರ ಹೇಳಿಕೆಗೆ ಸಂಸದ ಸಂಗಣ್ಣ ಕರಡಿ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next