Advertisement

Congress ರಾಜ್ಯದಲ್ಲಿ ದ್ವೇಷದ ರಾಜಕಾರಣ: ಆರ್‌. ಅಶೋಕ್‌ ಆರೋಪ

12:25 AM Jan 07, 2024 | Team Udayavani |

ಉಡುಪಿ: ರಾಜ್ಯ ಕಾಂಗ್ರೆಸ್‌ ಸರಕಾರ ಹಿಂದೂಗಳ ಮೇಲೆ ದಮನಕಾರಿ ಅಸ್ತ್ರವನ್ನು ಪ್ರಯೋಗ ಮಾಡುತ್ತಿದೆ. ಒಡೆದು ಆಳುವ ನೀತಿ ಕಾಂಗ್ರೆಸ್‌ನ ಡಿಎನ್‌ಎನಲ್ಲಿಯೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದಲಾಗುವುದಿಲ್ಲ. ಅಯೋಧ್ಯೆಗಾಗಿ ದೇಣಿಗೆ ಕೇಳಿದಾಗ ರಾಮಮಂದಿರ ವಿವಾದಿತ ಎಂದಿದ್ದರು. ಇದೀಗ ಅಲ್ಪಸಂಖ್ಯಾಕರ ಮತ ಕ್ರೋಢೀಕರಿಸಿ ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ. ಅಯೋಧ್ಯೆಯ ಬಗ್ಗೆ ಸಿದ್ದರಾಮಯ್ಯ ಅವರಿಗೆ ದ್ವೇಷ ಮತ್ತು ವೈರತ್ವ ಇದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಆರೋಪಿಸಿದರು.

Advertisement

ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾಕರಿಗೆ 10 ಸಾವಿರ ಕೋಟಿ, ಅವರ ಕಾಲನಿಗೆ 1 ಸಾವಿರ ಕೋಟಿ ನೀಡುವುದಾಗಿ ಹೇಳಿ, ರಾಮಮಂದಿರಕ್ಕೆ ನಾನು ಹೋಗುವುದಿಲ್ಲ ಎಂದಿದ್ದಾರೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರನ್ನು ಮೆಚ್ಚಿಸಲು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ನಲ್ಲಿ ಎರಡು ಬಣ
ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಬಣ ಸ್ಪಷ್ಟವಾಗಿ ಬೇರ್ಪಟ್ಟಿದೆ. ಅವರಿಬ್ಬರೂ ಜಗಳದ ಹಾದಿ ಹಿಡಿದಿದ್ದಾರೆ. ಮೂರು ಡಿಸಿಎಂ ಕೇಳುತ್ತಿರುವುದು ಸಿದ್ದರಾಮಯ್ಯಅವರ ಚಿತಾವಣೆಯ ಪ್ರಯೋಗವಾಗಿದೆ.ಎರಡೂವರೆ ವರ್ಷದ ಒಪ್ಪಂದದಲ್ಲಿ ಮುಖ್ಯಮಂತ್ರಿ ನಿರ್ಧಾರವಾಗಿದ್ದು ಶಿವಕುಮಾರ್‌ ಅವರೇ ವಿಧಾನಸಭೆಯಲ್ಲಿ ತಿಳಿಸಿದ್ದಾರೆ ಎಂದರು.

ವಿ. ಸೋಮಣ್ಣ ಅವರು ನಮ್ಮ ಪಕ್ಷದಲ್ಲೇ ಇರುತ್ತಾರೆ ಮತ್ತು ಅವರೊಂದಿಗೆ ಮಾತುಕತೆ ಮಾಡಿದ್ದೇವೆ. ಎಚ್‌.ಡಿ. ದೇವೇಗೌಡರು ಈಗ ಎನ್‌ಡಿಎ ಒಕ್ಕೂಟದಲ್ಲಿದ್ದಾರೆ. ಅವರು ಕೂಡ ಮೋದಿ ಪ್ರಧಾನಮಂತ್ರಿಯಾಗಲಿ ಎಂದು ಬಯಸಿದ್ದಾರೆ ಎಂದರು.

ಧ್ವನಿ ಗಟ್ಟಿಯಾಗಿದೆ
ವಿಪಕ್ಷದ ಧ್ವನಿ ಗಟ್ಟಿಯಾಗಿರುವುದರಿಂದಲೇ ಎಲ್ಲದಕ್ಕೂ ಮುಖ್ಯಮಂತ್ರಿಯವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬ ಸಾಮಾನ್ಯ ಕರಸೇವಕನ ಬಗ್ಗೆ ಮುಖ್ಯಮಂತ್ರಿಯೇ ಪ್ರತಿಕ್ರಿಯಿಸಿದ್ದಾರೆ. ಗೃಹ ಸಚಿವರು ಹೊರಬಂದು ಹೇಳಿಕೆ ನೀಡುತ್ತಿದ್ದಾರೆ. ವಿಪಕ್ಷದ ಧ್ವನಿ ಜಾಸ್ತಿಯಾಗಿದೆ ಅನ್ನೋದು ಕಾಂಗ್ರೆಸ್ಸಿಗೆ ಗೊತ್ತಾಗಿದೆ ಮತ್ತು ಅವರಲ್ಲಿ ನಡುಕ ಶುರುವಾಗಿದೆ ಎಂದರು.

Advertisement

ಸರಕಾರ ಪತನ ಆಗಬಹುದು
ಎಲ್ಲ ಉಚಿತವಾಗಿ ನೀಡಿದ್ದರಿಂದ ಸರಕಾರದಲ್ಲಿ ಅಭಿವೃದ್ಧಿಗೆ ದುಡ್ಡಿಲ್ಲ ಇದು ಹೀಗೆ ಸಾಗಿದರೆ ಸರಕಾರ ಪತನವಾಗಲಿದೆ. ಈಗ ಚುನಾವಣೆ ನಡೆದರೆ ಬಿಜೆಪಿ 130ಕ್ಕೂ ಅಧಿಕ ಸೀಟ್‌ ಗಳಿಸಲಿದೆ ಎಂದರು.

ಸರ್ವೇ ಆಗುತ್ತಿದೆ
ಲೋಕಸಭೆ ಟಿಕೆಟ್‌ ಸಂಬಂಧಿಸಿದಂತೆ ಎರಡು ಹಂತದಲ್ಲಿ ಸರ್ವೇ ನಡೆದಿದೆ. ಜೆಡಿಎಸ್‌ಗೆ ಯಾವ ಕ್ಷೇತ್ರ ಬಿಟ್ಟುಕೊಡಬೇಕು ಎಂಬ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದರು.

ಬಿಜೆಪಿ ಸಿದ್ಧತೆ
ಲೋಕಸಭಾ ಚುನಾವಣೆಗೆ ಬಿಜೆಪಿಯ ವಿಜಯ ಸಿದ್ಧತಾ ಸಭೆ ಜ. 8ಕ್ಕೆ ಬೆಂಗಳೂರಿನ ಹೊರವಲಯದಲ್ಲಿ ನಡೆಯಲಿದೆ. ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಸಭೆ ಅಧ್ಯಕ್ಷರಾಗಿದ್ದು, ಪ್ರಮುಖರಾದ ಅರುಣ್‌ ಸಿಂಗ್‌, ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ 54 ಮಂದಿಗೆ ಜವಾಬ್ದಾರಿ ನೀಡಲಾಗಿದೆ. ಅಭಿಯಾನ, ಕಾರ್ಯಕ್ರಮ, ಮೋದಿಯ ರಾಲಿ ಬಗ್ಗೆ ಸಿದ್ಧತಾ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಹೇಳಿದರು.

ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಲೋಪದೋಷ ಇದ್ದರೆ ಸರಿಪಡಿಸಲಿ, ಬಿಜೆಪಿ ಸರಕಾರದಲ್ಲಿ ಮಂಜೂರಾಗಿದ್ದ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಬಿಜೆಪಿ ಸರಕಾರದ ಯೋಜನೆಗಳನ್ನು ಹಳ್ಳಹಿಡಿಸುವುದು ಇವರ ಉದ್ದೇಶವಾಗಿದೆ ಎಂದವರು ದೂರಿದರು.

ಬಿತ್ತನೆ ಬೀಜಕ್ಕೆ ವ್ಯವಸ್ಥೆ ಮಾಡಿಕೊಡಲಿ: ಕೋಟ
ಕೇಂದ್ರದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ರಾಜ್ಯ ಸರಕಾರ ಅಸಹಕಾರ ನೀಡುತ್ತಿದೆ ಮತ್ತು ಡಿಸಿ, ಜಿಪಂ ಸಿಇಒಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಸಿಎಂ ಕಚೇರಿಯಿಂದ ನಿರ್ದೇಶನ ನೀಡಲಾಗಿದೆ. ಇದನ್ನು ಮುಖ್ಯಕಾರ್ಯದರ್ಶಿಯವರ ಗಮನಕ್ಕೂ ತಂದಿದ್ದೇನೆ. ಬರ ಪರಿಹಾರಕ್ಕೆ ರಾಜ್ಯ ಸರಕಾರ ಮೊದಲು ಅನುದಾನ ನೀಡಬೇಕು. 33,000 ಕೋಟಿ ರೂ. ನಷ್ಟವಾಗಿದೆ. 42 ಲಕ್ಷ ರೈತರಿಗೆ ಬರದ ಬಿಸಿ ತಟ್ಟಿದೆ. ಸಿಎಂ ಕನಿಷ್ಠ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ರಸಗೊಬ್ಬರ, ಬಿತ್ತನೆ ಬೀಜಕ್ಕೆ ವ್ಯವಸ್ಥೆ ಮಾಡಿಕೊಡಲಿ ಎಂದು ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಶಾಸಕರಿಗೆ ಈವರೆಗೆ ಸರಕಾರದಿಂದ ನಯಾಪೈಸೆ ಅನುದಾನ ಬಂದಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಬಹಳ ಕಷ್ಟವಾಗುತ್ತದೆ. ಇದು ಕಾಂಗ್ರೆಸ್‌ ಶಾಸಕರಿಗೂ ತಿಳಿದಿದೆ. ಸರಕಾರ ಇದೇ ವಿಚಾರವಾಗಿ ಪತನವೂ ಆಗಬಹುದು.
-ಗುರ್ಮೆ ಸುರೇಶ್‌ ಶೆಟ್ಟಿ,
ಶಾಸಕರು, ಕಾಪು

 

Advertisement

Udayavani is now on Telegram. Click here to join our channel and stay updated with the latest news.

Next