ನವದೆಹಲಿ:ಬಾಲಿವುಡ್ ನಟ ಅಮೀರ್ ಖಾನ್ ಗೂ ವಿವಾದಕ್ಕೂ ಸದಾ ನಂಟು ಇದ್ದೇ ಇದೆ. ಖಾನ್ ಸಿನಿಮಾ, ಹೇಳಿಕೆಗಳು ವಿವಾದಕ್ಕೀಡಾಗುತ್ತಿರುತ್ತದೆ. ಆದರೆ ಈ ಬಾರಿ ಅಮೀರ್ ಖಾನ್ ತನ್ನ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಚಿತ್ರೀಕರಣಕ್ಕಾಗಿ ಇಸ್ತಾಂಬುಲ್ ಗೆ ತೆರಳಿದ್ದು, ಅಲ್ಲಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಪತ್ನಿ ಎಮೈನ್ ಎರ್ಡೊಗನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ವಿವಾದಕ್ಕೆ ಹಾಗೂ ನೆಟ್ಟಿಗರ ಅಸಮಧಾನಕ್ಕೆ ಕಾರಣವಾಗಿದೆ.
ಅಮೀರ್ ಖಾನ್ ಹಾಲಿವುಡ್ ಖ್ಯಾತ ನಿರ್ದೇಶಕ ಟಾಮ್ ಹಾಂಕ್ಸ್ ನಿರ್ದೇಶನದ ಫಾರೆಸ್ಟ್ ಗಂಫ್ ಸಿನಿಮಾದ ರಿಮೇಕ್ (ಲಾಲ್ ಸಿಂಗ್ ಛಡ್ಡಾ) ಮಾಡುತ್ತಿದ್ದು, ಈ ಸಿನಿಮಾದ ಚಿತ್ರೀಕರಣಕ್ಕಾಗಿ ಖಾನ್ ಟರ್ಕಿಗೆ ತೆರಳಿದ್ದರು.
ಆಗಸ್ಟ್ 15ರಂದು ಟರ್ಕಿ ಪ್ರಥಮ ಮಹಿಳೆ ಎಮೈನ್ ಎರ್ಡೊಗನ್ ಟ್ವೀಟರ್ ನಲ್ಲಿ ಸರಣಿ ಫೋಟೋಗಳನ್ನು ಶೇರ್ ಮಾಡಿದ್ದು, “ ಭಾರತದ ಖ್ಯಾತ ಸಿನಿಮಾ ನಿರ್ದೇಶಕ, ನಿರ್ಮಾಪಕ ಅಮೀರ್ ಖಾನ್ ಅವರನ್ನು ಭೇಟಿಯಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಅಲ್ಲದೇ ಅವರ ಹೊಸ ಚಿತ್ರ ಲಾಲ್ ಸಿಂಗ್ ಛಡ್ಡಾ ಇಸ್ತಾಂಬುಲ್ ಸೇರಿದಂತೆ ಟರ್ಕಿಯ ವಿವಿಧೆಡೆ ಚಿತ್ರೀಕರಣ ಮಾಡಲು ಅಮೀರ್ ನಿರ್ಧರಿಸಿರುವುದು ತುಂಬಾ ಖುಷಿಯ ಸಂಗತಿಯಾಗಿದೆ. ನಾನು ಹೊಸ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇನೆ” ಎಂದು ತಿಳಿಸಿದ್ದರು.
ಈ ಟ್ವೀಟ್ ಗಮನಿಸಿದ ನೆಟ್ಟಿಗರು ಅಮೀರ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೀರ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕಾರಣ ಪಾಕಿಸ್ತಾನ ಬೆಂಬಲಿಸಿದ ಟರ್ಕಿ ದೇಶದ ಅಧ್ಯಕ್ಷನ ಪತ್ನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು.
ಭಾರತ ವಿರೋಧಿ ಎರ್ಡೊಗನ್:
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಿಲ್ಲ. 2020ರ ಫೆಬ್ರುವರಿಯಲ್ಲಿ, ನವದೆಹಲಿಯಲ್ಲಿ ಗಲಭೆ ನಡೆದ ನಂತರ ಭಾರತದಲ್ಲಿ ಮುಸ್ಲಿಮರ ಕಗ್ಗೊಲೆ ಮಾಡಲಾಗಿದೆ ಎಂದು ಎರ್ಡೊಗನ್ ಟೀಕಿಸಿದ್ದರು. ಭಾರತ ಈಗ ಹತ್ಯಾಕಾಂಡ ವ್ಯಾಪಕವಾಗಿ ಹರಡಿಸುವ ದೇಶವಾಗಿ ಬಿಟ್ಟಿದೆ. ಎಂತಹ ಹತ್ಯೆ ಎಂದರೆ ಅದು ಮುಸ್ಲಿಮರ ಕಗ್ಗೊಲೆ. ಯಾರು ಮಾಡುತ್ತಿದ್ದಾರೆ ಅಂದರೆ ಹಿಂದೂಗಳು. ಇದು ಫೆಬ್ರುವರಿಯಲ್ಲಿ ದೆಹಲಿಯಲ್ಲಿ ಗಲಭೆ ನಡೆದ ನಂತರ ಎರ್ಡೊಗನ್ ಅಂಕಾರದಲ್ಲಿ ಭಾಷಣ ಮಾಡುತ್ತಿ ಭಾರತದ ವಿರುದ್ಧ ನೀಡಿದ್ದ ಹೇಳಿಕೆಯಾಗಿತ್ತು.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನು ರದ್ದುಪಡಿಸಿದಾಗಲೂ ಟರ್ಕಿ ಪಾಕಿಸ್ತಾನದ ಪರವಾಗಿ ಧ್ವನಿ ಎತ್ತಿತ್ತು. ಕಾಶ್ಮೀರ ವಿಚಾರದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಸಿಗಬೇಕಾದ ನ್ಯಾಯ, ಶಾಂತಿ ಮತ್ತು ಮಾತುಕತೆ ಸಂಬಂಧ ಬೆಂಬಲ ಮುಂದುವರಿಸುತ್ತದೆ ಎಂದು ಎರ್ಡೊಗನ್ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
2019ರ ಸೆಪ್ಟೆಂಬರ್ ನಲ್ಲಿ ಟರ್ಕಿ ಅಧ್ಯಕ್ಷ ಎರ್ಡೊಗನ್ ವಿಶ್ವಸಂಸ್ಥೆಯಲ್ಲಿಯೂ ಕಾಶ್ಮೀರ ವಿಚಾರದ ಪ್ರಸ್ತಾಪಿಸಿ, ಸ್ಥಿರತೆ ಮತ್ತು ಏಳಿಗೆಗಾಗಿ ಕಾಶ್ಮೀರ ಪ್ರತ್ಯೇಕವಾಗಲೇ ಬೇಕು ಎಂದು ಎರ್ಡೊಗನ್ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುತ್ತ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಅಮೀರ್ ವಿರುದ್ಧ ಆಕ್ರೋಶ:
ಭಾರತ ವಿರೋಧಿ ಟರ್ಕಿ ದೇಶದ ಅಧ್ಯಕ್ಷನ ಪತ್ನಿ ಜತೆ ಅಮೀರ್ ಖಾನ್ ಮಾತುಕತೆ ನಡೆಸಿರುವುದು ಟ್ವೀಟಿಗರಲ್ಲಿ ಆಕ್ರೋಶ ಮೂಡಿಸಿದೆ. ಅಲ್ಲದೇ ಕೆಲವರು ಲಾಲ್ ಸಿಂಗ್ ಛಡ್ಡಾ ಸಿನಿಮಾವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಭಾರತ ವಿರೋಧಿ ಹೇಳಿಕೆ ನೀಡುತ್ತಿರುವ ಎರ್ಡೊಗನ್ ಪತ್ನಿ ಜತೆ ಅಮೀರ್ ಭೇಟಿಯಾಗಿ ಮಾತುಕತೆ ನಡೆಸಿರುವುದು ಸರಿಯಾದ ಕ್ರಮವಲ್ಲ ಎಂದು ಟ್ವೀಟಿಗರು ಕಿಡಿಕಾರಿದ್ದಾರೆ.
ಇಸ್ರೇಲ್ ಪ್ರಧಾನಿಯನ್ನು ಯಾಕೆ ಭೇಟಿಯಾಗಿಲ್ಲ?
ಭಾರತ ವಿರೋಧಿ ಟರ್ಕಿ ಅಧ್ಯಕ್ಷನ ಪತ್ನಿಯನ್ನು ಭೇಟಿಯಾಗುವ ಅಮೀರ್ ಖಾನ್ 2018ರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ನಟ ಅಮೀರ್ ಖಾನ್ ಅವರನ್ನು ಭೇಟಿಯಾಗಲು ನಿರಾಕರಿಸಿದ್ದು ಯಾಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ನೆತನ್ಯಾಹು ಅವರನ್ನು ಗೌರವಿಸುವ ಸಲುವಾಗಿ ಬಾಲಿವುಡ್ ಈ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಅಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಮೂವರು ಗೈರುಹಾಜರಾಗಿದ್ದರು. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ವಿವೇಕ್ ಒಬೇರಾಯ್, ಕರಣ ಜೋಹರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.