Advertisement

Politics: ನ್ಯಾಯಾಂಗ ದಮನ ಮಾಡಿದ ಕಾಂಗ್ರೆಸ್‌ನಿಂದ ನ್ಯಾಯ ಯಾತ್ರೆ: ಆರ್‌. ಅಶೋಕ್‌ ಟೀಕೆ

11:45 PM Jan 14, 2024 | Team Udayavani |

ಬೆಂಗಳೂರು: ದೇಶದಲ್ಲಿ ನ್ಯಾಯಾಂಗವನ್ನು ದಮನ ಮಾಡಿದ ಕಾಂಗ್ರೆಸ್‌ ನಾಯಕರು ಈಗ ನ್ಯಾಯ ಯಾತ್ರೆ ಮಾಡುತ್ತಿರುವುದು ಢೋಂಗಿತನ. ತುರ್ತು ಪರಿಸ್ಥಿತಿ ಹೇರಿಕೆಯಿಂದ ಪ್ರಜಾಪ್ರಭುತ್ವವನ್ನು ದಮನ ಮಾಡಿದ ಇವರ ಯಾತ್ರೆಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ವಿಧಾನಸಭೆ ವಿಪಕ್ಷದ ನಾಯಕ ಆರ್‌. ಅಶೋಕ ಹೇಳಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ನಾಯಕರು ದಕ್ಷಿಣ ಭಾಗದಿಂದ ಜೋಡೋ ಯಾತ್ರೆ ಆರಂಭಿಸಿದ್ದರು. ಅನಂತರ ಉತ್ತರ ಭಾಗದ ಮೂರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸೋತರು. ರಾಹುಲ್‌ ಗಾಂಧಿ ಎಲ್ಲೆಲ್ಲಿ ಪಾದಯಾತ್ರೆ ಮಾಡಿ ನೆಲವನ್ನು ಸ್ಪರ್ಶಿಸುತ್ತಾರೋ ಅಲ್ಲೆಲ್ಲ ಕಾಂಗ್ರೆಸ್‌ ಅವನತಿ ಕಾಣುತ್ತದೆ ಎಂದರು.

Advertisement

ಮಾನ ಉಳಿಸಿಕೊಳ್ಳಲು ಕೈ ಯಾತ್ರೆ
ಕಾಂಗ್ರೆಸ್‌ ನಾಯಕರು ಅನೇಕ ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿದ್ಧಾರೆ. ನೆಹರು ಕಾಲದಿಂದ ರಾಹುಲ್‌ ಗಾಂಧಿಯವರೆಗೆ ರಾಮ ಮಂದಿರವನ್ನು ವಿರೋಧಿಸಿ ಭಾರತೀಯರ ಭಾವನೆಗೆ ಧಕ್ಕೆ ತಂದಿದ್ಧಾರೆ. ಆದ್ದರಿಂದ ಈ ನ್ಯಾಯ ಯಾತ್ರೆ ಢೋಂಗಿ ಯಾತ್ರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಾಗಿದೆ. ಪ್ರಜಾಪ್ರಭುತ್ವವನ್ನು ದಮನ ಮಾಡಿ, ಸಂಪತ್ತನ್ನು ಲೂಟಿ ಮಾಡಿದ ಇವರು ನ್ಯಾಯ ಕೇಳಲು ಹೋಗುವುದಕ್ಕೆ ಮೂರು ಕಾಸಿನ ಬೆಲೆ ಇಲ್ಲ ಎಂದರು.

ಕೇಸ್‌ ಮುಚ್ಚಿಹಾಕುವ ಪ್ರಯತ್ನ
ಹಾನಗಲ್‌ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲಿನ ರಾಜಕೀಯ ನಾಯಕರು ಭೇಟಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಪೊಲೀಸರ ಮೂಲಕ ಅವರನ್ನು ಬೇರೆ ಕಡೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ನೈತಿಕ ಪೊಲೀಸ್‌ಗಿರಿ, ದಾದಾಗಿರಿ, ದೌರ್ಜನ್ಯ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಯೇ ಇಲ್ಲವಾಗಿದೆ. ಬೆಳಗಾವಿಯಲ್ಲಿ ಬೆತ್ತಲೆ ಮಾಡಿದ ಪ್ರಕರಣವೂ ಹೀಗೆಯೇ ಆಗಿದೆ ಎಂದು ಅಶೋಕ್‌ ಹೇಳಿದರು.

ವಿ.ಸೋಮಣ್ಣ ಅವರದ್ದು ಏನೂ ಸಮಸ್ಯೆ ಇಲ್ಲ. ದಿಲ್ಲಿ ನಾಯಕರನ್ನು ಭೇಟಿ ಮಾಡಿ ಸಮಾಧಾನಗೊಂಡಿದ್ದಾರೆ. ಈ ವಿಚಾರವನ್ನು ದಿಲ್ಲಿಯಿಂದ ಬೆಂಗಳೂರಿಗೆ ಬಂದಿಳಿದ ಕೂಡಲೇ ಅವರೇ ಹೇಳಿದರು. ಅವರು ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಲಿದ್ಧಾರೆ. ಉಳಿದಿದ್ದನ್ನು ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ. -ಆರ್‌.ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next