Advertisement
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸುರಕ್ಷಿತವಾಗಿ ಹಿಂದುರುಗಿದ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಕವಿದಿದ್ದ ಯುದ್ಧದ ಕಾರ್ಮೋಡ ತುಸು ತಿಳಿಯಾಗಿರುವಂತೆ ಕಾಣಿಸುತ್ತದೆ. ಆದರೆ ಇದೇ ವೇಳೆ ಭಾರತ ನಡೆಸಿದ ಎರಡನೇ ಸರ್ಜಿಕಲ್ ಸ್ಟ್ರೈಕ್‌ಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವಿನ ವಾಕ್ ಸಮರ ತಾರಕಕ್ಕೇರಿದೆ. ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ರಾಜಕೀಯಕ್ಕೆ ಬಳಸಬಾರದು ಎಂದು ರಾಜಕೀಯದವರೂ ಸೇರಿದಂತೆ ಎಲ್ಲರೂ ಹೇಳುತ್ತಾರೆ. ಆದರೆ ಸರ್ಜಿಕಲ್ ಸ್ಟೈಕ್ ಆದ ಎರಡೇ ದಿನಗಳಲ್ಲಿ ಅದು ರಾಜಕೀಯದ ಆರೋಪ ಮತ್ತು ಪ್ರತ್ಯಾರೋಪದ ವಿಷಯವಾಗಿ ಬದಲಾಗಿತ್ತು.ಪಕ್ಷಗಳು ಕನಿಷ್ಠ ಎರಡು ದಿನವಾದರೂ ಈ ವಿಚಾರದಲ್ಲಿ ರಾಜಕೀಯ ನುಸುಳದಂತೆ ಸಂಯಮ ವಹಿಸಿಕೊಂಡದ್ದೇ ಆಶ್ಚರ್ಯಕರ.ರಾಷ್ಟ್ರೀಯ ಭದ್ರತೆಯಂಥ ಮಹತ್ವದ ವಿಚಾರವನ್ನು ರಾಜಕೀಯದ ಲಾಭ-ನಷ್ಟದ ದೃಷ್ಟಿಕೋನದಿಂದ ನೋಡುವುದೇ ತಪ್ಪು. ಆದರೆ ನಮ್ಮ ರಾಜಕೀಯ ಪಕ್ಷಗಳು ಮತವಾಗಿ ಪರಿವರ್ತಿತವಾಗುವ ಯಾವುದೇ ವಿಷಯವನ್ನು ಉಪಯೋಗಿಸದೆ ಬಿಡುವುದಿಲ್ಲ. ಅವುಗಳು ಈ ಸಂವೇದನಾರಹಿತ ನಡೆಯೇ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ವರ್ಚಸ್ಸನ್ನು ಕಡಿಮೆಗೊಳಿಸಿದೆ. ಇದೀಗ ಪುಲ್ವಾಮ ದಾಳಿ ಹಾಗೂ ಅದಕ್ಕೆ ಬಳಿಕದ ಬೆಳವಣಿಗೆಗಳೆಲ್ಲ ಈ ಮಾತನ್ನು ಪುಷ್ಟೀಕರಿಸುವ ರೀತಿಯಲ್ಲೇ ಸಾಗುತ್ತಿರುವುದು ದುರದೃಷ್ಟಕರ. ಉರಿ ಸೇನಾ ನೆಲೆಯ ಮೇಲಾದ ದಾಳಿಗೆ ಪ್ರತೀಕಾರವಾಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ವಿಪಕ್ಷಗಳೆಲ್ಲ ಸೇನೆಯಿಂದ ಸಾಕ್ಷಿ ಕೇಳಿದ್ದವು. ಇದೀಗ ಎರಡನೇ ಸರ್ಜಿಕಲ್ ಸ್ಟೈಕ್ ಸಂದರ್ಭದಲ್ಲೂ ಅದೇ ಆಗುತ್ತಿದೆ.
Related Articles
Advertisement
ಚುನಾವಣೆ ಕಣದಲ್ಲಿ ಹೋರಾಡಲು ಕೃಷಿ ಕ್ಷೇತ್ರದ ಹಿನ್ನಡೆ, ರೈತರು ಎದುರಿಸುತ್ತಿರುವ ಸಂಕಷ್ಟ, ನಿರುದ್ಯೋಗ ಸೇರಿದಂತೆ ಹಲವಾರು ಜ್ವಲಂತ ವಿಚಾರಗಳಿವೆ. ಸೇನೆಯ ಕಾರ್ಯಾಚರಣೆ, ರಾಷ್ಟ್ರೀಯ ಸುರಕ್ಷತೆ, ಅಂತರಾಷ್ಟ್ರೀಯ ಸಂಬಂಧಗಳು ಇತ್ಯಾದಿಗಳನ್ನೆಲ್ಲ ರಾಜಕೀಯಕ್ಕೆ ಎಳೆದು ತರುವುದು ಬೇಡ. ಆಡಳಿತ ಪಕ್ಷ ಮತ್ತು ವಿಪಕ್ಷಗಳು ಈ ವಿಚಾರದಲ್ಲಿ ಪ್ರಾಂಜಲ ಮನಸ್ಸಿನಿಂದ ನಿರ್ಧಾರವೊಂದನ್ನು ಕೈಗೊಳ್ಳುವ ಅಗತ್ಯವಿದೆ. ಇಂಥ ಕಾರ್ಯತಂತ್ರಗಳಿಂದ ಚುನಾವಣೆಯಲ್ಲಿ ಗೆದ್ದರೂ ದೇಶಕ್ಕೆ ಸೋಲಾಗಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.