Advertisement
ಸಾಮಾನ್ಯವಾಗಿ ಒಂದು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ಮಾಡಲು ಬರುತ್ತಾರೆ ಎಂದರೆ ಪಕ್ಷದ ಅಲ್ಲಿನ ಶಾಸಕರು, ಜಿಲ್ಲೆಯ ಸಚಿವರು ಹಾಗೂ ಹಿರಿಯ ನಾಯಕರು ಇರಲೇಬೇಕು. ಸಚಿವರು ಇರದಿದ್ದರೂ ಶಾಸಕರ ಉಪಸ್ಥಿತಿ ಬಹಳ ಮುಖ್ಯ. ಆದರೆ ಬುಧವಾರ ಡಿ.ಕೆ.ಶಿವಕುಮಾರ್ ಜಿಲ್ಲೆಗೆ ಭೇಟಿ ನೀಡಿದ್ದಾಗ ಪಕ್ಷದ ಬಹುತೇಕ ಶಾಸಕರು ಬಾರದಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿತು.
ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅನುಪಸ್ಥಿತಿ ಬಹಳವಾಗಿ ಎದ್ದು ಕಂಡಿತು. ಇದಕ್ಕೆ ಪೂರಕವಾಗಿ ಜಾರಕಿಹೊಳಿ ಜತೆ ಗುರುತಿಸಿಕೊಂಡಿರುವ ಕೆಲವು ಶಾಸಕರ ಗೈರು ಕೂಡ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಗಳಿಗೆ ಮತ್ತಷ್ಟು ಆಹಾರ ಒದಗಿಸಿತು. ಸತೀಶ್ ರಾಜಕೀಯದಾಟ
ಡಿ.ಕೆ.ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ನಡುವಿನ ರಾಜಕೀಯ ಮನಸ್ತಾಪ ಹೊಸದೇನಲ್ಲ. ಮೂರ್‍ನಾಲ್ಕು ವರ್ಷಗಳಿಂದ ಇದು ಮುಂದುವರಿದಿದೆ. ಜಾರಕಿಹೊಳಿ ತಮಗಿರುವ ಅಸಮಾಧಾನವನ್ನು ಎಂದಿಗೂ ನೇರವಾಗಿ ಹೇಳಿಲ್ಲ. ಆದರೆ ತಮ್ಮದೇ ಆದ ರಾಜಕೀಯ ಆಟಗಳಿಂದ ಇದಕ್ಕೆ ಉತ್ತರ ನೀಡಿದ್ದಾರೆ.
ಜಿಲ್ಲೆಯ ರಾಜಕಾರಣ ಮತ್ತು ಅಧಿಕಾರಿಗಳ ವರ್ಗಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ವಿಚಾರ ಸತೀಶ್ ಜಾರಕಿಹೊಳಿ ಮುನಿಸಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಹೀಗಾಗಿ ತಮಗೆ ಆಗಿರುವ ಬೇಸರವನ್ನು ಈಗ ಗೈರಾಗುವ ಮೂಲಕ ತೋರಿಸಿದ್ದಾರೆ. ಅವರ ಬೆಂಬಲಿಗರೂ ಇದೇ ದಾರಿಯಲ್ಲಿ ಸಾಗಿದ್ದಾರೆ ಎಂಬುದು ಪಕ್ಷದ ಮೂಲಗಳ ಹೇಳಿಕೆ.
Related Articles
ಇನ್ನೊಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದ ಸಂದರ್ಭದಲ್ಲಿ ತಾನು ಉಪಮುಖ್ಯಮಂತ್ರಿಗಳ ಜತೆ ಸಭೆ ನಡೆಸುವುದು ಬೇರೆ ಅರ್ಥಕ್ಕೆ ಎಡೆ ಮಾಡಿಕೊಡುತ್ತದೆ ಎಂಬ ಕಾರಣದಿಂದ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಕೂಡ ಉಪ ಮುಖ್ಯಮಂತ್ರಿಗಳ ಕಾರ್ಯಕ್ರಮದಿಂದ ದೂರ ಉಳಿದಿದ್ದರು.
ಇವೆಲ್ಲದರ ಮಧ್ಯೆ ಇಬ್ಬರು ಪ್ರಮುಖ ನಾಯಕರ ನಡುವಿನ ಮನಸ್ತಾಪ, ವೈಯಕ್ತಿಕ ಸಂಘರ್ಷ ಪಕ್ಷದ ಕಾರ್ಯಕರ್ತರನ್ನು ಬಹಳ ಸಂಕಷ್ಟಕ್ಕೆ ಗುರಿ ಮಾಡಿದೆ. ಯಾರ ಪರ ಹೋದರೂ ಮುಂದೆ ಕಷ್ಟ ಎಂಬ ಗೊಂದಲ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಡುತ್ತಿದೆ.
Advertisement
ಸತೀಶ್ ಜತೆಗೆ ಮುನಿಸಿಲ್ಲ: ಡಿಕೆಶಿ
ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ನನ್ನ ಮಧ್ಯೆ ಯಾವುದೇ ಮುನಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಅವರು ನನ್ನನ್ನು ಭೇಟಿ ಮಾಡಿದ್ದರು. ಶಾಸಕರ ಜತೆ ಪ್ರವಾಸ ಹೋಗುವ ಕುರಿತು ನನ್ನೊಂದಿಗೆ ಚರ್ಚಿಸಿಲ್ಲ. ಭೇಟಿಯಾದಾಗಲೂ ಪ್ರವಾಸದ ಕುರಿತು ಮಾತನಾಡಿಲ್ಲ. 136 ಶಾಸಕರೆಲ್ಲರೂ ನಮ್ಮವರೇ. ಬಿಜೆಪಿಯವರಿಗೆ ಏನಾದರೂ ಒಂದು ಸುದ್ದಿ ಬೇಕು ಅಂತ ಇಂಥದ್ದನ್ನೆಲ್ಲ ಸೃಷ್ಟಿಸುತ್ತಿದ್ದಾರೆ. ಸತೀಶ ಜಾರಕಿಹೊಳಿ ಬೆಂಗಳೂರಿನಲ್ಲಿದ್ದಾರೆ. ಲಕ್ಷ್ಮೀ ಖಾಸಗಿ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ನಾನು ಬೆಳಗಾವಿಗೆ ಭೇಟಿ ನೀಡಿದ್ದುದು ಪೂರ್ವನಿಯೋಜಿತವಲ್ಲ. ಮಂಗಳವಾರ ರಾತ್ರಿಯೇ ಬೆಳಗಾವಿಗೆ ಬರಲು ನಿರ್ಧರಿಸಿದ್ದೇನೆ. ಹೀಗಾಗಿ ನಾನು ಬರುವುದರ ಬಗ್ಗೆ ಯಾರಿಗೂ ಮಾಹಿತಿ ಕೊಟ್ಟಿಲ್ಲ. ಶಾಸಕರು, ಸಚಿವರು ಗೈರಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಬೆಳಗಾವಿಯಿಂದಲೇ ಬಂಡಾಯ ಆರಂಭ ಶುರುವಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆ ನಿರಾಧಾರ ಎಂದರು.