Advertisement

Politics: ನಿಗಮ ಮಂಡಳಿ ನೇಮಕ- ಪರಮೇಶ್ವರ್‌ ಬೆಂಬಲಕ್ಕೆ ನಿಂತ ಸತೀಶ್‌ ಜಾರಕಿಹೊಳಿ

09:29 PM Nov 30, 2023 | Team Udayavani |

ಬೆಂಗಳೂರು: ನಿಗಮ ಮಂಡಳಿ ನೇಮಕ ವಿಚಾರದಲ್ಲಿ ತಮ್ಮ ಅಭಿಪ್ರಾಯ ಕೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಗೃಹ ಸಚಿವ ಡಾ| ಜಿ.ಪರಮೇಶ್ವರ ಮಾತಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಧ್ವನಿಗೂಡಿಸಿದ್ದು, ಪರಮೇಶ್ವರ ಅವರ ಅಭಿಪ್ರಾಯವನ್ನು ಕೇಳಬೇಕಿತ್ತು ಎಂದು ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಎಂಟು ವರ್ಷ ಅಧ್ಯಕ್ಷರಾಗಿದ್ದವರು. ಅಂಥವರ ಸಲಹೆಯನ್ನು ಅಗತ್ಯವಾಗಿ ಪಡೆಯಬೇಕಿತ್ತು ಎಂದರು.

ಹೊಸಬರಿಗೆ ನಿಗಮ-ಮಂಡಳಿಯಲ್ಲಿ ಅವಕಾಶ ಇಲ್ಲವೇ ಇಲ್ಲ. ಮೂರ್‍ನಾಲ್ಕು ಬಾರಿ ಗೆದ್ದವರಿಗೆ ಅವಕಾಶ ನೀಡಲು ಪಕ್ಷ ಬದ್ಧವಾಗಿದೆ. ನಮ್ಮ ಜಿಲ್ಲೆಯಲ್ಲೂ ಎರಡ್ಮೂರು ಹಿರಿಯ ಶಾಸಕರಿದ್ದಾರೆ. ಅವರಿಗೆ ನಿಗಮ – ಮಂಡಳಿಯಲ್ಲಿ ಅವಕಾಶ ಕೊಟ್ಟೇ ಕೊಡುತ್ತಾರೆ. ಸದನ ಪ್ರಾರಂಭವಾಗುವುದಕ್ಕೆ ಮೊದಲೇ ನೇಮಕವಾದರೆ ಉತ್ತಮ. ಹಿರಿಯರಿಗೆ ಕೊಟ್ಟರೆ ಭಿನ್ನಮತಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು.

ನಾನು ಕೂಡ ಕಾರ್ಯಕರ್ತರ ಪರವಾಗಿ ಒತ್ತಾಯ ಮಾಡಿದ್ದೇನೆ. ಕಾರ್ಯಕರ್ತರೇ ಪಕ್ಷ ಸಂಘಟನೆಗೆ ಮುಖ್ಯ ಪಾತ್ರ ವಹಿಸುತ್ತಾರೆ. ಯಾವತ್ತೂ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಬೆಳಗಾವಿಯಲ್ಲಿ ಚರ್ಚೆಯಾಗಿಲ್ಲ. ಈ ಬಾರಿಯಾದರೂ ಅವಕಾಶ ಸಿಗುತ್ತದೋ ಎಂದು ಕಾದು ನೋಡಬೇಕು ಎಂದರು.

ಎಲ್ಲರ ಒಪ್ಪಿಗೆ ಇತ್ತು
ಡಿ.ಕೆ.ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಸಂಪುಟದ ಸಮ್ಮತಿಯನ್ನು ಎಲ್ಲರ ಒಪ್ಪಿಗೆಯೊಂದಿಗೆ ಹಿಂಪಡೆಯಲಾಗಿದೆ. ವಿರೋಧವಿದ್ದರೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು.

Advertisement

ಬಾಕಿ ಬಿಲ್‌ ಪಾವತಿ ವಿಚಾರದಲ್ಲಿ ಹೈಕೋರ್ಟ್‌ ನಮ್ಮ ಇಲಾಖೆಗೆ ಚಾಟಿ ಬೀಸಿಲ್ಲ. ಬಿಬಿಎಂಪಿಗೆ ಸಂಬಂಧಪಟ್ಟಂತೆ ಯಾರೋ ನ್ಯಾಯಾಲಯದ ಮೊರೆ ಹೋಗಿದ್ದರು. ನಮ್ಮ ಇಲಾಖೆಯಲ್ಲಿ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಬಿ.ಆರ್‌.ಪಾಟೀಲ್‌ ಅವರ ಅಸಮಾಧಾನ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಸರಕಾರ ಇದ್ದಾ ಗ ಪ್ರತಿನಿತ್ಯ ಹೊಸ ಸಮಸ್ಯೆಗಳು ಉದ್ಭವವಾಗುತ್ತದೆ. ಇವತ್ತೂಂದು ಬಗೆಹರಿದರೆ ನಾಳೆ ಇನ್ನೊಂದು ಬರುತ್ತದೆ. ಶಾಸಕರು ಹಾಗೂ ಮಂತ್ರಿಗಳ ಸಮಸ್ಯೆಯನ್ನು ಒಂದೇ ಸಲ ಬಗೆಹರಿಯಲು ಸಾಧ್ಯವಿಲ್ಲ. ಅಧಿಕಾರದ ಕುರ್ಚಿಯಲ್ಲಿ ಕೂತಾಗ ಸಾಧ್ಯವಿರುವವುಗಳನ್ನು ಪರಿಹರಿಸುತ್ತೇವೆ ಎಂದರು.

ಒಂದೆರಡು ದಿನಗಳಲ್ಲೇ ನಿಗಮ, ಮಂಡಳಿ ಪಟ್ಟಿ ಬಿಡುಗಡೆ
ಬೆಂಗಳೂರು: ಶಾಸಕರು, ಮೇಲ್ಮನೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರನ್ನು ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ನೇಮಿಸುವ ಸಂಬಂಧದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ಅನುಮೋದನೆ ದೊರೆತರೆ ಒಂದೆರಡು ದಿನಗಳಲ್ಲೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗೆ ನಡೆಸಿದ ಸಭೆಯಲ್ಲಿ ಸಂಭವನೀಯರ ಪಟ್ಟಿಯನ್ನು ಅಂತಿಮಗೊಳಿಸಿ ಎಐಸಿಸಿಗೆ ಸಲ್ಲಿಸಲಾಗಿದೆ.

ಪಂಚ ರಾಜ್ಯಗಳ ಚುನಾವಣೆಯಲ್ಲಿ ನಿರತರಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ಸುರ್ಜೇವಾಲ ಅವರು ಈಗ ಚುನಾವಣೆ ಕಾರ್ಯಭಾರದಿಂದ ಮುಕ್ತರಾಗಿ ದಿಲ್ಲಿಗೆ ತೆರಳಿರುವುದರಿಂದ ಶುಕ್ರವಾರ ಇಲ್ಲವೇ ಶನಿವಾರ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಗಮನ ಹರಿಸುವ ಸಾಧ್ಯತೆಗಳಿವೆ. ಹೀಗಾರಿ ವಾರಾಂತ್ಯದೊಳಗೆ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಗಳಿವೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next