ಬೆಂಗಳೂರು: ನಗರದಲ್ಲಿ ಕಾರ್ಮಿಕರಿಗೆ ಸಿದ್ದ ಆಹಾರ ಮತ್ತು ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಮಿಕ ಇಲಾಖೆಯ ಯೋಜನೆಯನ್ನು ಬಿಜೆಪಿ ರಾಜಕೀಯವಾಗಿ ದುರುಪಯೋಗಗೊಳಿಸುತ್ತಿದ್ದು ಇದರ ಬಗ್ಗೆ ತನಿಖೆ ನಡೆಸಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ.
ಕಟ್ಟಡ ನಿರ್ಮಾಣ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನಿಧಿಯಿಂದ ನೀಡಲಾಗುತ್ತಿರುವ ಆಹಾರದ ಪೊಟ್ಟಣಗಳನ್ನು ಬಿಜೆಪಿ ಶಾಸಕರು ಮತ್ತು ಮಹಾನಗರಪಾಲಿಕೆ ಸದಸ್ಯರು ಬೇಕಾಬಿಟ್ಟಿಯಾಗಿ ವಿತರಿಸುತ್ತಿದ್ದಾರೆ. ಅದೇ ರೀತಿ ಆಹಾರ ಸಾಮಾಗ್ರಿಗಳ ಹ್ಯಾಂಪರ್ಸ್ ಮೇಲೆ ತಮ್ಮ ಭಾವಚಿತ್ರ-ಹೆಸರಿನ ಲೇಬಲ್ ಗಳನ್ನು ಹಚ್ಚಿ, ತಮ್ಮ ಕ್ಷೇತ್ರಗಳಲ್ಲಿ ತಮ್ಮ ಮತದಾರರಿರುವ ಪ್ರದೇಶದಲ್ಲಿ ವಿತರಣೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ಆಹಾರ ಪೊಟ್ಟಣಗಳು ಸಿಗುತ್ತಿಲ್ಲ. ರಾಜ್ಯದಲ್ಲಿ ಸುಮಾರು ಒಂದು ಕೋಟಿಯಷ್ಟು ಅಸಂಘಟಿತ ಕ್ಷೇತ್ರದ ಕಾರ್ಮಿಕರಿದ್ದಾರೆ. ಇವರಲ್ಲಿ ಬಹುಸಂಖ್ಯೆಯ ಕಾರ್ಮಿಕರು ಸರ್ಕಾರದ ಯಾವುದೇ ನೆರವಿಲ್ಲದೆ ಉಪವಾಸ ಕೂರುವ ಪರಿಸ್ಥಿತಿ ಎದುರಾಗಿದೆ ಎಂದಿದ್ದಾರೆ
ಕಾರ್ಮಿಕ ಸಚಿವರೇ ಉದ್ಘಾಟಿಸಿದ ಈ ಯೋಜನೆಯನ್ನು ನಗರದ ಬಿಜೆಪಿ ಶಾಸಕರು ಮತ್ತು ಮಹಾನಗರಪಾಲಿಕೆ ಸದಸ್ಯರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಈಗ ಕಾರ್ಮಿಕ ಇಲಾಖೆಯಿಂದ ಮಹಾನಗರಪಾಲಿಕೆಗೆ ವರ್ಗಾಯಿಸಿವಂತೆ ಮಾಡಿದ್ದಾರೆ. ಈ ಯೋಜನೆ ಅನುಷ್ಠಾನದಲ್ಲಿ ಕಾರ್ಮಿಕ ಸಂಘಗಳನ್ನು ಹೊರಗಿಟ್ಟು ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರನ್ನು ಸೇರಿಸಿಕೊಂಡಿದ್ದಾರೆ. ಕೋವಿಡ್-19 ಇಡೀ ಮನುಕುಲ ಎದುರಿಸುತ್ತಿರುವ ಹಾವಳಿ. ಇದನ್ನು ನಾವೆಲ್ಲರೂ ಜಾತಿ-ಧರ್ಮ-ಪಕ್ಷ-ಪ್ರದೇಶಗಳನ್ನು ಮೀರಿ ಒಂದಾಗಿ ಎದುರಿಸಬೇಕಾಗಿದೆ. ಇದರಲ್ಲಿ ರಾಜಕೀಯ ಲಾಭ-ನಷ್ಟದ ಲೆಕ್ಕ ಹಾಕುತ್ತಾ ಕೂರುವುದು ಅಮಾನವೀಯವಾದುದು.
ಕಾರ್ಮಿಕ ಇಲಾಖೆಯ ಆಹಾರ ವಿತರಣೆಯ ಯೋಜನೆಯಲ್ಲಿ ಕಾರ್ಮಿಕರ ಜೊತೆ ಸಂಬಂಧವೇ ಇಲ್ಲದ ಸಂಸ್ಥೆಗಳಿಗೆ ಕೊಟ್ಟಿರುವ ಜವಾಬ್ದಾರಿಯನ್ನು ಹಿಂದಕ್ಕೆ ಪಡೆದು ಅದನ್ನು ಇಂದಿರಾ ಕ್ಯಾಂಟೀನ್ ಮೂಲಕ ಅಧಿಕೃತ ಕಾರ್ಮಿಕ ಸಂಘಗಳ ಸಹಯೋಗದೊಡನೆ ಮುಂದುವರೆಸಬೇಕೆಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.