Advertisement

ಕೋಟೆನಾಡಲ್ಲಿ ಮತ್ತೆ ಗರಿಗೆದರಿದ ರಾಜಕೀಯ

04:41 PM May 25, 2018 | |

ಚಿತ್ರದುರ್ಗ: ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ಜೂನ್‌ 8 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ಮತ್ತೆ ಚುನಾವಣಾ ಕಾವು ಏರತೊಡಗಿದೆ.

Advertisement

ಅವಿಭಜಿತ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯ ದಾವಣಗೆರೆ (ಹಾಲಿ ಪ್ರತ್ಯೇಕ ಜಿಲ್ಲೆ), ಹರಿಹರ, ದಾವಣಗೆರೆ ತಾಲೂಕುಗಳು, ಜಿಲ್ಲೆಯ ಆರು ತಾಲೂಕುಗಳಲ್ಲದೆ ನೆರೆಹೊರೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ವ್ಯಾಪ್ತಿಗೂ ಹರಡಿಕೊಂಡಿದೆ. ಚಿತ್ರದುರ್ಗದಲ್ಲಿ-3637 ಮತದಾರರಿದ್ದರೆ, ದಾವಣಗೆರೆ, ಹರಿಹರ, ಜಗಳೂರು ತಾಲೂಕುಗಳಲ್ಲಿ 3,800ಕ್ಕೂ ಅಧಿಕ ಮತದಾರರಿದ್ದಾರೆ.

ಲಿಂಗಾಯತ ಕೋಮಿನ ಹಾಲನೂರು ಲೇಪಾಕ್ಷ ಅವರಿಗೆ ನೀಡಿದ್ದ ಟಿಕೆಟ್‌ ವಾಪಸ್‌ ಪಡೆದು ಮಾಜಿ ಶಾಸಕ ವೈ.ಎನ್‌. ನಾರಾಯಣಸ್ವಾಮಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಿಂದ ನಿವೃತ್ತ ಉಪನ್ಯಾಸಕ ನೇರಲಗುಂಟೆ ರಾಮಪ್ಪ, ಜೆಡಿಎಸ್‌ ನಿಂದ ಇದೇ ಕ್ಷೇತ್ರದ ಹಾಲಿ ವಿಧಾನಪರಿಷತ್‌ ಸದಸ್ಯ ರಮೇಶಬಾಬು, ಪಕ್ಷೇತರ ಅಭ್ಯರ್ಥಿ ಹಿರಿಯೂರು ತಾಲೂಕಿನ ಕುಂದಲಗುರದ ನಿವೃತ್ತ ಪ್ರಾಂಶುಪಾಲ ಕೆ.ಜಿ.ತಿಮ್ಮಾರೆಡ್ಡಿ ಸ್ಪರ್ಧೆಯಲ್ಲಿದ್ದು ನಾಲ್ಕು ಮಂದಿ ಸ್ಪರ್ಧಿಗಳು ಜಿಲ್ಲೆಯಲ್ಲಿ ನಿತ್ಯ ಶಿಕ್ಷಕರ ಪಾರ್ಟಿ, ಪ್ರವಾಸ ಎಂದು ಧೂಳೆಬ್ಬಿಸಿ ಮುಂಚೂಣಿಯಲ್ಲಿದ್ದಾರೆ.

ನಾರಾಯಣ ಸ್ವಾಮಿ ವಿರುದ್ಧ ಆಕ್ರೋಶ: ಆಗ್ನೇಯ ಶಿಕ್ಷಕರ ಕ್ಷೇತ್ರ ಹಿಂದಿನಿಂದಲೂ ಬಹು ಪಾಲು ಬಿಜೆಪಿ ಅಭ್ಯರ್ಥಿ ಮತ್ತು ಪಕ್ಷೇತರರ ಪಾಲಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಇಲ್ಲಿ ಗೆಲ್ಲಲೇಬೇಕು ಎನ್ನುವ ಉದ್ದೇಶ ಹೊಂದಿ ವೈ.ಎ. ನಾರಾಯಣಸ್ವಾಮಿಗೆ ಟಿಕೆಟ್‌ ನೀಡಿದೆ. ಈ ಬಾರಿ ಗೆಲುವು ಅವರಿಗೆ ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಕಳೆದ ಮೂರು ದಿನಗಳಿಂದೆ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶಿಕ್ಷಕರ ಸಭೆ ಕರೆದು ಮತ್ತೂಮ್ಮೆ ಗೆಲ್ಲಿಸುವಂತೆ ವೈ.ಎ.ಎನ್‌ ಕೋರಿದ್ದು ಸಾಕಷ್ಟು ಶಿಕ್ಷಕರು ಅವರ ಕೋರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ ಎನ್ನಲಾಗಿದೆ.

ನಿಮ್ಮ ಜತೆ ಕೆಲಸ ಮಾಡುವುದು ಕಷ್ಟ: ನೀವು ಬೇಕೆಂದಾಗ ಕ್ಷೇತ್ರಕ್ಕೆ ಬರುವುದು, ಬೇಡವೆಂದಾಗ ರಾಜೀನಾಮೆ ನೀಡಿ ಹೆಬ್ಟಾಳು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮತ್ತೆ ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದೀರಿ. ರಾಜೀನಾಮೆ ನೀಡುವಾಗ ಶಿಕ್ಷಕರನ್ನು ಏಕೆ ಸಂಪರ್ಕಿಸಲಿಲ್ಲ. ಈಗ ಹೆಬ್ಟಾಳು ಕ್ಷೇತ್ರದಲ್ಲಿ ಸೋಲು ಕಂಡು ಮತ್ತೆ ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳುತ್ತಿದ್ದೀರಿ, ಈಗಾಗಲೇ ನಾವು ಪಕ್ಷೇತರ ಅಭ್ಯರ್ಥಿ ಕೆ.ಜಿ. ತಿಮ್ಮಾರೆಡ್ಡಿ ಅವರಿಗೆ ಕೆಲಸ ಮಾಡುತ್ತಿದ್ದೇವೆ.

Advertisement

ಈ ಸಂದರ್ಭದಲ್ಲಿ ನಿಮ್ಮ ಜತೆ ಬರುವುದು ಕಷ್ಟವಾಗಲಿದೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಕಂಗಾಲಾಗಿರುವ ಅಭ್ಯರ್ಥಿ ನಾರಾಯಣಸ್ವಾಮಿ ಜಿಲ್ಲೆಯ ಬಿಜೆಪಿ ಶಾಸಕರ ಮೇಲೆ ಒತ್ತಡ ತಂದು ಪಕ್ಷೇತರ ಅಭ್ಯರ್ಥಿ ತಿಮ್ಮಾರೆಡ್ಡಿ ಅವರ ನಾಮಪತ್ರ ವಾಪಸ್‌ ತೆಗೆಸಲು ಇನ್ನಿಲ್ಲದ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.

ಟಿಕೆಟ್‌ ನೀಡುವಲ್ಲಿ ಗೊಂದಲ: ಯಡಿಯೂರಪ್ಪನವರು ತುಮಕೂರಿನ ಎಸ್‌ಆರ್‌ಎಸ್‌ ಕಾಲೇಜಿನ ಅಧ್ಯಕ್ಷ ಹಾಲನೂರು ಲೇಪಾಕ್ಷ ಅವರಿಗೆ ಟಿಕೆಟ್‌ ನೀಡಿ ನಂತರ ನಾರಾಯಣಸ್ವಾಮಿ ಅವರಿಗೆ ಟಿಕೆಟ್‌ ನೀಡಿದ್ದಾರೆ. 

ಇದರಿಂದ ಆಕ್ರೋಶಗೊಂಡಿರುವ ಲಿಂಗಾಯತರು ನಾರಾಯಣಸ್ವಾಮಿ ವಿರುದ್ಧ ಮತ ಚಲಾಯಿಸುವಂತೆ ತೀರ್ಮಾನ ಮಾಡಿ ತಿಮ್ಮಾರೆಡ್ಡಿ ಅವರಿಗೆ ಬೆಂಬಲಿಸುವ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಪರಿಸ್ಥಿತಿ ಮತ್ತೂಷ್ಟು ಜಠಿಲವಾಗಿದೆ.

ಕಾಂಗ್ರೆಸ್‌ ಪಕ್ಷ: ನೇರಲಗುಂಟೆ ರಾಮಪ್ಪನವರಿಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿದೆ. ರಾಮಪ್ಪನವರು ನಾನು ಸ್ಥಳೀಯ ಅಭ್ಯರ್ಥಿಯಾಗಿದ್ದು ಹೆಚ್ಚಿನ ಶಿಕ್ಷಕರು ತಮಗೆ ಮತ ನೀಡಲಿದ್ದಾರೆನ್ನುವ ಉತ್ಸಾಹದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮತಬೇಟೆ ಆರಂಭಿಸಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಇದುವರೆಗೂ ಎಂದೂ ಇಲ್ಲಿ ಕಾಂಗ್ರೆಸ್‌ ಗೆದ್ದಿಲ್ಲ. ಇದು ಅವರಿಗೆ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ. ಜೆಡಿಎಸ್‌ ಪಕ್ಷ: ಕಳೆದ-2017ರ ಫೆಬ್ರವರಿಯಲ್ಲಿ
ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ರಮೇಶಬಾಬು ಸ್ಪಧಿಸಿ ಆಯ್ಕೆಯಾಗಿದ್ದರು.

ಈಗ ಮತ್ತೆ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರು ಗೆದ್ದ ಹೋದ ಮೇಲೆ ಯಾರೊಬ್ಬ ಶಿಕ್ಷಕರನ್ನು ಭೇಟಿ ಮಾಡಿ ಕಷ್ಟು-ಸುಖ ವಿಚಾರಿಸಲಿಲ್ಲ, ಕೇವಲ ಟಿವಿಗಳ ಚರ್ಚೆಯಲ್ಲಿ ಇವರನ್ನು ನೋಡುವಂತಾಗಿದೆ ಎಂದು ಕೆಲ ಶಿಕ್ಷಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಅವರು ಉತ್ತಮ ವಾಗ್ಮಿ ಎನ್ನುವುದನ್ನು ಬಿಟ್ಟರೆ ಶಿಕ್ಷಕರಿಗೆ ಅವರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಅಧಿಕಾರ ಪಡೆದಿದ್ದು, ಅವರಿಗೆ ಟಾನಿಕ್‌ ನೀಡಿದಂತಾಗಿದೆ. ಆದರೂ ಜೆಡಿಎಸ್‌ ಯುವ ಕಾರ್ಯಕರ್ತರೇ ಅವರ ವಿರುದ್ಧ ಕೆಲಸ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಕ್ಷೇತರ ಅಭ್ಯರ್ಥಿ: ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಪ್ರತಿಕೂಲ ವಾತಾವರಣ ಇಲ್ಲ. ಈ ಹಿಂದೆ ವೈಎಎನ್‌ ಪಕ್ಷೇತರರಾಗಿ ಸ್ಪರ್ಧಿಸಿ ಹೆಚ್ಚಿನ ಮತಗಳ ಅಂತರದಲ್ಲಿ ಗೆದ್ದಿದ್ದರು. ಜಿಲ್ಲೆಯವರೇ ಆದ ಕೆ.ಜಿ. ತಿಮ್ಮಾರೆಡ್ಡಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದು, ಕಳೆದ 6 ತಿಂಗಳಿಂದ ಜಿಲ್ಲೆಯಲ್ಲಿ ಸಾಕಷ್ಟು ಶಿಕ್ಷಕರ ಬೆಂಬಲ ಪಡೆದು ರಾಜಕೀಯ ಪಕ್ಷಗಳ ನಿದ್ದೆ ಕೆಡಿಸಿದ್ದಾರೆ.

„ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next