Advertisement
“ನಿಜವಾದ ದರಕ್ಕಿಂತ ಹೆಚ್ಚಿನ ಬೆಲೆಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗಿದೆ ಎಂದು ತೋರಿಸಿ, ವಿದ್ಯುತ್ ದರವಾಗಿ ಜನರಿಂದ ಹೆಚ್ಚುವರಿಯಾಗಿ 12,000 ಕೋಟಿ ರೂ.ಗಳನ್ನು ಅದಾನಿ ಗ್ರೂಪ್ ಸಂಗ್ರಹಿಸಿದೆ’ ಎಂದು ಮಾಧ್ಯಮಗಳ ವರದಿಯನ್ನು ಉಲ್ಲೇಖೀಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“2024ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈ ಪ್ರಕರಣದ ತನಿಖೆಗೆ ಆದೇಶಿಸಲಾಗುವುದು’ ಎಂದು ಭರವಸೆ ನೀಡಿದ ಅವರು, “ಈ ವಿಚಾರದಲ್ಲಿ ಪ್ರಧಾನಿ ಮೋದಿ ಏಕೆ ಮೌನ ತಾಳಿದ್ದಾರೆ?. ತಮ್ಮ ವಿಶ್ವಾಸರ್ಹತೆಯನ್ನು ಕಾಪಾಡಿಕೊಳ್ಳಲು ಈ ಪ್ರಕರಣದ ತನಿಖೆಯನ್ನು ಏಕೆ ಆರಂಭಿಸುತ್ತಿಲ್ಲ’ ಎಂದು ಪ್ರಶ್ನಿಸಿದರು. ವಿಶ್ವದ ಅತ್ಯಂತ ಭ್ರಷ್ಟ ಕುಟುಂಬ:
ಅದಾನಿ ಗ್ರೂಪ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಟೀಕೆ ಮಾಡಿದ ಬೆನ್ನಲ್ಲೇ ಅವರ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಈ ಬಗ್ಗೆ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ “ವಿಶ್ವದಲ್ಲೇ ಗಾಂಧಿ ಕುಟುಂಬವು ಅತ್ಯಂತ ಭ್ರಷ್ಟ ಕುಟುಂಬವಾಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸ್ವತಃ ರಾಹುಲ್ ಗಾಂಧಿ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ತಮ್ಮ ಭಾವ ರಾಬರ್ಟ್ ವಾದ್ರಾ ಅವರ ವಿರುದ್ಧದ ಆರೋಪಗಳ ಕುರಿತು ಅವರು ಎಂದೂ ಮಾತನಾಡುವುದಿಲ್ಲ’ ಎಂದು ಟೀಕಿಸಿದರು. ಅದಾನಿ ಗ್ರೂಪ್ ವಿರುದ್ಧದ ಕೇಸು ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ ಎಂದರು.
Related Articles
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಉದ್ಯಮಿ ಗೌತಮ್ ಅದಾನಿಯವರನ್ನು ಯಾಕೆ ಭೇಟಿ ಮಾಡಿದ್ದರು ಎಂಬುದನ್ನು ಪ್ರಶ್ನಿಸಿಲ್ಲ ಎಂದು ರಾಹುಲ್ ಹೇಳಿದ್ದಾರೆ. “ಶರದ್ ಪವಾರ್ ಪ್ರಧಾನಿ ಅಲ್ಲ. ಹೀಗಾಗಿ, ಅವರು ಅದಾನಿಯವರನ್ನು ಭೇಟಿ ಮಾಡುವುದರಲ್ಲಿ ತಪ್ಪು ಇಲ್ಲ. ಪವಾರ್ ಅವರು ಅದಾನಿಯವರನ್ನು ರಕ್ಷಿಸುತ್ತಿಲ್ಲ. ಆದರೆ, ಮೋದಿಯವರು ಅವರನ್ನು ಬೆಂಬಲಿಸಿ, ರಕ್ಷಿಸುತ್ತಿದ್ದಾರೆ’ ಟೀಕಿಸಿದರು.
Advertisement