Advertisement

ರಾಜಕೀಯ ಪ್ರಥಮಗಳ ಸರದಾರ: ಧನಂಜಯ ಕುಮಾರ!

01:00 PM Apr 01, 2018 | Team Udayavani |

ಮಂಗಳೂರು: ವೇಣೂರು ಧನಂಜಯ ಕುಮಾರ್‌ ಅವರು ಭಾರತೀಯ ಜನತಾ ಪಕ್ಷಕ್ಕೆ ಮಾತ್ರವಲ್ಲ; ರಾಜಕೀಯ ಕ್ಷೇತ್ರದಲ್ಲೇ ಅನೇಕ ಪ್ರಥಮಗಳ ಸರದಾರ.

Advertisement

ವೇಣೂರಿನಲ್ಲಿ ಮನೆ ಮನೆಗಳಿಗೆ ತೆರಳಿ ವೈದ್ಯಕೀಯ ಶುಶ್ರೂಷೆ ನೀಡುತ್ತಾ ಬರಿಗಾಲ ವೈದ್ಯ ಎಂದು ಜನ ಪ್ರಿಯರಾಗಿದ್ದ ಪ್ರಸಿದ್ಧ ಜೈನ ಮನೆತನದ ದಿ| ಡಾ| ಪಿ. ಎ. ಆಳ್ವ ಅವರ ಪುತ್ರ ಧನಂಜಯ ಅವರು ಉಡುಪಿಯಲ್ಲಿ 1969-73ರಲ್ಲಿ ಕಾನೂನು ಪದವಿ ಪಡೆದ ಬಳಿಕ ಮಂಗಳೂರಿನಲ್ಲಿ ನ್ಯಾಯವಾದಿಯಾಗಿ ವೃತ್ತಿಜೀವನ ಆರಂಭಿಸಿದವರು. ಆರೆಸ್ಸೆಸ್‌ ಸಿದ್ಧಾಂತದಲ್ಲಿ ಆಗ ನಂಬಿಕೆ ಇರಿಸಿ ಬಿಜೆಪಿಯ ಯುವ ಸಂಘಟನೆಯಲ್ಲಿ ಸಕ್ರಿಯರಾದರು. 1983ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಗೆದ್ದರು. ಇಲ್ಲಿ ಗೆದ್ದ ಬಿಜೆಪಿಯ ಪ್ರಥಮ ಶಾಸಕ ಎಂಬ ಮನ್ನಣೆಗೆ ಪಾತ್ರರಾದರು.

1991ರಲ್ಲಿ ಅವರು ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ (ಆಗ ದಕ್ಷಿಣ ಕನ್ನಡದ 5, ಕೊಡಗಿನ 3 ವಿಧಾನ ಸಭಾ ಕ್ಷೇತ್ರಗಳು) ಬಿಜೆಪಿಯ ಅಭ್ಯರ್ಥಿಯಾದರು. ಅಲ್ಲಿ ಕೂಡ ಗೆದ್ದರು. ದಕ್ಷಿಣ ಭಾರತದಿಂದ ಲೋಕಸಭೆಗೆ ಆಯ್ಕೆಯಾದ ಪ್ರಥಮ ಸಂಸದನೆಂಬ ಮನ್ನಣೆಗೆ ಪಾತ್ರರಾದರು. ಮುಂದೆ 1996, 1998, 1999ರಲ್ಲಿ ಮಂಗಳೂರಿನಿಂದ ಲೋಕಸಭೆಗೆ ಒಟ್ಟು 4 ಬಾರಿ ಆಯ್ಕೆಯಾದ ದಾಖಲೆ ನಿರ್ಮಿಸಿದರು.

ವಿಶೇಷ ಎಂದರೆ, ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ 1996ರಲ್ಲಿ ಅವರು ನಾಗರಿಕ ವಿಮಾನಯಾನ ಪ್ರವಾಸೋದ್ಯಮ ಇಲಾಖೆಯ ಸಚಿವರಾದರು. ದಕ್ಷಿಣ ಭಾರತದಲ್ಲೇ ಬಿಜೆಪಿಯ ಪ್ರಥಮ ಕೇಂದ್ರ ಸಚಿವ ಅವರಾದರು! ಇದು ಇನ್ನೊಂದು ಪ್ರಥಮದ ದಾಖಲೆ. ಬಳಿಕ ಸ್ವಲ್ಪ ಸಮಯ ವಿತ್ತ; ಅನಂತರ ಜವುಳಿ ಖಾತೆಯ ಸಚಿವರಾದರು. ಮುಂದೆ ಯಡಿಯೂರಪ್ಪ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿದ್ದಾಗ ಅವರ ಆಪ್ತರಾಗಿದ್ದ ಧನಂಜಯರು ಕೇಂದ್ರಕ್ಕೆ ರಾಜ್ಯದ ವಿಶೇಷ ಪ್ರತಿನಿಧಿಯಾಗಿದ್ದರು.

ವಿಜಯಗಳಿಗೆ ತಡೆಯಾದ ಕೆಜೆಪಿ ಸೇರ್ಪಡೆ
ಯಡಿಯೂರಪ್ಪ ಅವರ ಬಿಜೆಪಿ ನಿರ್ಗಮನ ಮತ್ತು ಕೆಜೆಪಿಯ ಸ್ಥಾಪನೆಯು ಧನಂಜಯರ ರಾಜಕೀಯ ವಿಜಯಗಳಿಗೆ ಬ್ರೇಕ್‌ ಹಾಕಿತು. ಕೆಜೆಪಿಯ ಪ್ರಮುಖ ವಕ್ತಾರನಾಗಿ ಯಡಿಯೂರಪ್ಪ ಅವರನ್ನು ಸಮರ್ಥಿಸುವ ಕಾಯಕದಲ್ಲಿ ನಿರತರಾದರು. ಮುಂದಿನದು ಅವರಿಗೆ ವಿಪರ್ಯಾಸಕರ ವಿದ್ಯಮಾನ. ಯಡಿಯೂರಪ್ಪ ಬಿಜೆಪಿಗೆ ಮರಳಿದರು. ಧನಂಜಯರಿಗೆ ಅವಕಾಶ ದೊರೆಯಲಿಲ್ಲ. ಅವರು ಜೆಡಿಎಸ್‌ ಸೇರಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದರು; ಸೋತರು. (ಜೆಡಿಎಸ್‌ ಸೇರಿದ್ದು ನನ್ನ ಅತ್ಯಂತ ದುರದೃಷ್ಟಕರ ನಿರ್ಧಾರ ಎಂದು ಶುಕ್ರವಾರ ಧನಂಜಯ ಅವರು ಈ ಪ್ರತಿನಿಧಿಯೊಂದಿಗೆ ಹೇಳಿದರು.) ಧನಂಜಯರ ರಾಜಕೀಯ ಜೀವನಕ್ಕೆ ಈಗ ಇನ್ನೊಂದು ತಿರುವು ದೊರೆತಿದೆ. ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತಮ ವಾಗ್ಮಿಯಾಗಿರುವ ಧನಂಜಯ ಕುಮಾರ್‌ ಅವರು ವಾಜಪೇಯಿ, ಆಡ್ವಾಣಿ ಅವರ ಪರಮಾಪ್ತರಾಗಿದ್ದರೆಂಬುದು ಉಲ್ಲೇಖನೀಯ.

Advertisement

4-7-1951ರಂದು ಜನಿಸಿದ ಧನಂಜಯ (ಅವರ ತಾಯಿ 87ರ ಹರೆಯದ ಗುಣವತಿ ಆಳ್ವ ಅವರು ವೇಣೂರಿನ ಮೂಲ ಮನೆಯಲ್ಲಿದ್ದಾರೆ) ಅವರು ಈಗ ಕಾಂಗ್ರೆಸ್‌ನ ಪ್ರಮುಖ ರಾಜ್ಯ ವಕ್ತಾರ ಎಂಬ ಹೊಣೆಗಾರಿಕೆ ಹೊಂದಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯ ಕಾರ್ಯ ಅವರಿಗೆ ದೊರೆಯುತ್ತಿದೆ.

ವಿವಿಧ ಕ್ಷೇತ್ರಗಳ ಸಂಪರ್ಕ
ಧನಂಜಯ ಕುಮಾರ್‌ ಅವರು ನಿರಂತರವಾಗಿ ವಿವಿಧ ಕ್ಷೇತ್ರಗಳ ಸಂಪರ್ಕ ಇಟ್ಟುಕೊಂಡವರು. ಸಾಹಿತ್ಯ, ಸಂಸ್ಕೃತಿ, ಸಿನೆಮಾ ಇತ್ಯಾದಿ ಕ್ಷೇತ್ರಗಳ ಜತೆಗೂ ಅವರಿಗೆ ನಿಕಟ ಒಡನಾಟವಿತ್ತು. ಕಾಫಿ ಮಂಡಳಿಯಂತಹ ಸಂಸ್ಥೆಗಳಲ್ಲೂ ಅವರು ಕೇಂದ್ರ ಸರಕಾರದ ಪ್ರಾತಿನಿಧ್ಯ ಹೊಂದಿದ್ದರು. ಆಗಿನ ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ಯಂತ ಸಕ್ರಿಯ ರಾಜಕಾರಣಿ ಎಂಬ ಹೆಸರು ಅವರಿಗಿತ್ತು. ನಡುವೆ ಉದ್ಯಮ ಕ್ಷೇತ್ರಕ್ಕೂ ಅವರು ಪ್ರವೇಶ ಮಾಡಿದ್ದರು. ಬಹುತೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಇದ್ದುದು ಅವರ ಇನ್ನೊಂದು ವಿಶೇಷವಾಗಿತ್ತು.

ಜವುಳಿ: ಮಳಿಗೆ- ಖಾತೆ!
ವಿಮಾನ ಯಾನ, ವಿತ್ತ ಮುಂತಾದ ಸಚಿವ ಖಾತೆ ನಿರ್ವಹಿಸಿದ ಧನಂಜಯ ಅವರನ್ನು 2000ದ ಜುಲೈಯಲ್ಲಿ ಮಂಗಳೂರಿನ ಪ್ರಸಿದ್ಧ ಜವುಳಿ ಮಳಿಗೆಯೊಂದು ತನ್ನ ನೂತನ ಶೋರೂಮ್‌ ಉದ್ಘಾಟನೆಗೆ ಆಮಂತ್ರಿಸಿತ್ತು. ವಿಶೇಷವೆಂದರೆ ಅದೇ ದಿನ ಧನಂಜಯ ಕುಮಾರ್‌ ಅವರಿಗೆ ಕೇಂದ್ರ ಜವುಳಿ ಖಾತೆಯನ್ನು ವಹಿಸಿದ ಸುದ್ದಿ ಪ್ರಸಾರವಾಯಿತು!

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next