Advertisement

ರಾಜಕೀಯವಾಗಿ ಬೆಳೆದರೆ ಸಮಾಜ ಪ್ರಗತಿ

01:21 PM Sep 17, 2018 | |

ಸಿಂಧನೂರು: ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜ ರಾಜಕೀಯವಾಗಿ ಬೆಳೆದರೆ ಮಾತ್ರ ಸಮಾಜ ಇನ್ನಷ್ಟು ಸದೃಢಗೊಳ್ಳುತ್ತದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಜಿ. ಪುಟ್ಟರಂಗಶೆಟ್ಟಿ ಹೇಳಿದರು.

Advertisement

ಉಪ್ಪಾರ ಸಂಘದ ತಾಲೂಕು ಘಟಕ ಮತ್ತು ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಶನಿವಾರ ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ವೀರಪ್ಪ ಮೊಯ್ಲಿ, ಬಂಗಾರಪ್ಪ ಉಪ್ಪಾರ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಸಂಸದೀಯ ಕಾರ್ಯದರ್ಶಿ, ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಗಳನ್ನು ಉಪ್ಪಾರ ಸಮಾಜಕ್ಕೆ ನೀಡಿದ್ದರು. 

ರಾಜೀವಗಾಂಧಿ ವಿಶ್ವವಿದ್ಯಾಲಯಕ್ಕೆ ಉಪಕುಲಪತಿ ಸ್ಥಾನ, ರಾಯಚೂರಿನ ಶ್ರೀಕಾಂತ ವಕೀಲರಿಗೆ ಕೆಪಿಸಿಸಿ ಸದಸ್ಯತ್ವ, ವಿಶೇಷವಾಗಿ ಉಪ್ಪಾರ ನಿಗಮ ಸ್ಥಾಪಿಸಿ ಹಿಂದುಳಿದ ವರ್ಗಕ್ಕೆ ಅತಿ ಹೆಚ್ಚು ಸೌಲಭ್ಯ ನೀಡಿದ್ದರು ಎಂದು ವಿವರಿಸಿದರು.

ಸಮಾಜದ ಅಭಿವೃದ್ಧಿಗೆ ಪಕ್ಷಭೇದ ಮರೆತು ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ. ಕುಮಾರಸ್ವಾಮಿ ಅವರು ರೈತರ 37 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿ ನೆರವಾಗಿದ್ದಾರೆ. ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸಲಾಗಿದ್ದು, ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಕಾರ್ಯ ಫಲಿಸದು ಎಂದು ಟೀಕಿಸಿದರು.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿ, ಕುಟುಂಬಗಳನ್ನು ಗುರುತಿಸಿ ಆರ್ಥಿಕವಾಗಿ ನೆರವು ನೀಡುವ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡಬೇಕು. ಅದರಲ್ಲೂ
ಶೈಕ್ಷಣಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಅಂದಾಗ ಮಾತ್ರ ಸಮಾಜ, ಸಂಘಗಳ ಇರುವಿಕೆಗೆ ಸಾರ್ಥಕತೆ ದೊರಕುತ್ತದೆ. ಉಪ್ಪಾರ ಸಮಾಜದ ಜೊತೆಗೆ ತಾವಿದ್ದು, ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವ
ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

Advertisement

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ.
ಆದರೆ ಆಚರಣೆಯಲ್ಲಿರುವುದಿಲ್ಲ. ರಾಜಕಾರಣದಲ್ಲಿ ಕುತಂತ್ರ ಇರುವುದರಿಂದ ಹಿಂದುಳಿದ ವರ್ಗದವರು ಎಚ್ಚರಿಕೆಯಿಂದ
ಇರಬೇಕು. ಸಂವಿಧಾನದ ಬದಲಾವಣೆ ಪ್ರಯತ್ನಗಳು ದುಷ್ಟಕೂಟಗಳಿಂದ ನಡೆಯುತ್ತಿವೆ. ಹಿಂದುಳಿದ ವರ್ಗದ ಸಮಗ್ರ ಅಭಿವೃದ್ಧಿಗೆ ನೂತನವಾಗಿ ಸಚಿವರಾಗಿರುವ ಪುಟ್ಟರಂಗಶೆಟ್ಟಿ ಪ್ರಯತ್ನಿಸುತ್ತಾರೆನ್ನುವ ವಿಶ್ವಾಸವಿದೆ. ಉಪ್ಪಾರ ಸಮಾಜ ಎಲ್ಲ ಚುನಾಯಿತ ಜನಪ್ರತಿನಿ ಧಿಗಳನ್ನು ಸನ್ಮಾನ ಮಾಡುವ ಮೂಲಕ ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಸಾನಿಧ್ಯ ವಹಿಸಿದ್ದ ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಬಡತನ, ಅನಕ್ಷರತೆ, ಮೌಡ್ಯತೆಯಿಂದ ಉಪ್ಪಾರ ಸಮಾಜ ತೊಂದರೆಯಲ್ಲಿದೆ. ಇವುಗಳಿಂದ ಹೊರ ಬರಬೇಕಾದರೆ ಶಿಕ್ಷಣ ಅಗತ್ಯ. ನಿಮ್ಮ ಪರಿವರ್ತನೆಯನ್ನು ನೀವೇ ಮಾಡಿಕೊಳ್ಳಬೇಕು. ನಿಮ್ಮ ಉದ್ದಾರಕ್ಕೆ ಯಾರೂ ಬರುವುದಿಲ್ಲ. ಶಿಕ್ಷಣದಿಂದ ಮಾತ್ರ ಬಲಿಷ್ಠಗೊಳ್ಳಬೇಕು. ಮೌಡ್ಯತೆಗಳನ್ನು ಕೈಬಿಡಬೇಕು. ನಾವು ಶಕ್ತಿಶಾಲಿಯಾಗುವ ತನಕ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುತ್ತಲೇ ಇರುತ್ತಾರೆ. ಹಾಗಾಗಿ ಮೊದಲು ಶಿಕ್ಷಣದ ಮೂಲಕ ಶಕ್ತಿಶಾಲಿಗಳಾಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಭಾರ್ಗವಾನಂದಗಿರಿ ವೇದಾಂತಾಚಾರ್‌, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬ, ಉಪಾಧ್ಯಕ್ಷ ಕೆ.ಮರಿಯಪ್ಪ, ಯುವ ಘಟಕದ ರಾಜ್ಯ ಉಪಾಧ್ಯಕ್ಷ ಕೆ.ವೆಂಕಟೇಶ, ಸಮಾಜದ ಮುಖಂಡ ಶಿವಪ್ಪ ಮುಳ್ಳೂರು, ಭಗೀರಥ ಸಮಾಜದ ಲಿಂಗಸುಗೂರು ತಾಲೂಕು ಅಧ್ಯಕ್ಷ ಎಚ್‌. ಶ್ರೀನಿವಾಸ, ಮಾನ್ವಿ ಅಧ್ಯಕ್ಷ ದೇವಪ್ಪ ನವಕಲ್‌, ಗಂಗಾವತಿ ಅಧ್ಯಕ್ಷ ಮುದ್ದಣ್ಣ ಆರ್ಹಾಳ, ಯಲಬುರ್ಗಾ ಅಧ್ಯಕ್ಷ ಬಸವರಾಜ ಪೂಜಾರಿ, ಕುಷ್ಟಗಿ ಅಧ್ಯಕ್ಷ ಬಸವರಾಜ ಹೊಸೂರು, ಕೊಪ್ಪಳ ಅಧ್ಯಕ್ಷ ಭೀಮಣ್ಣ, ತಾಪಂ ಸದಸ್ಯ ಹನುಮೇಶ, ಶಶಿಕಾಂತ ವಕೀಲ ವೇದಿಕೆಯಲ್ಲಿದ್ದರು. ನಾರಾಯಣ ಬೆಳಗುರ್ಕಿ ಪ್ರಾಸ್ತಾವಿಕ ಮಾತನಾಡಿದರು. ತಿಮ್ಮಣ್ಣ ಉಪ್ಪಾರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಗರಸಭೆಯ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next