ಈ ಬಾರಿ ಚುನಾವಣೆಯ ಪ್ರತಿಯೊಂದು ಹಂತದ ಮತದಾನದಲ್ಲೂ ದೇಶದ ಒಂದಲ್ಲ ಒಂದು ಭಾಗದಲ್ಲಿ ಹಿಂಸಾಚಾರ ನಡೆದಿದೆ. ಒಡಿಶಾ, ಕೇರಳ, ಬಿಹಾರ ಮತ್ತು ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಂತೂ ರಾಜಕೀಯ ಹಿಂಸಾಚಾರ ಮಿತಿಮೀರಿದೆ.
ಭಾನುವಾರವಷ್ಟೇ ನಡೆದ 6ನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದ ಎಂಟು ಕ್ಷೇತ್ರಗಳಲ್ಲೂ ಹೊಡೆದಾಟ-ಹಿಂಸಾಚಾರ ನಡೆದಿದೆ..ಗಮನಿಸಬೇಕಾದ ಅಂಶವೆಂದರೆ ಚುನಾವಣೆಗಾಗಿ ಹೆಚ್ಚುವರಿ ಭದ್ರತೆಯನ್ನು ಒದಗಿಸಿದರೂ ಕೂಡ ಈ ಹಿಂಸಾಚಕ್ರವನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದು. ಮತದಾನ ನಡೆಯುವುದಕ್ಕೂ ಮುನ್ನವೇ ಕಾಂತಿ ಮತ್ತು ಝಾರ್‌ಗ್ರಾಂ ಕ್ಷೇತ್ರಗಳಲ್ಲಿ ಒಬ್ಬ ಬಿಜೆಪಿ ಮತ್ತು ಒಬ್ಬ ಟಿಎಂಸಿ ಕಾರ್ಯಕರ್ತನ ಹತ್ಯೆಯಾದ ಸುದ್ದಿ ಹರಡಿ ಪರಿಸ್ಥಿತಿ ವಿಷಮಿಸಿತು. ಆದರೆ ಟಿಎಂಸಿಯ ಕಾರ್ಯಕರ್ತ ಅಪಘಾತದಿಂದ ಸತ್ತಿದ್ದಾನೆಯೇ ಹೊರತು, ಆತನ ಕೊಲೆಯಾಗಿಲ್ಲ ಎಂದು ಟಿಎಂಸಿಯ ಹಿರಿಯ ನಾಯಕರೇ ಹೇಳಿದ್ದಾರೆ. ಇನ್ನು ಇತರೆ ಎರಡು ಕ್ಷೇತ್ರಗಳಲ್ಲೂ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ ಬಿಜೆಪಿಯ ನಾಯಕಿಯೊಬ್ಬರನ್ನು ಮತಗಟ್ಟೆಯಿಂದ ಹೊರದಬ್ಬಿದ ಘಟನೆಯೂ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಈಗಿನಿಂದಲ್ಲ, ಆ ರಾಜ್ಯ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜಕೀಯ ಕೊಲೆಗಳು, ಹಿಂಸಾಚಾರಗಳು ನಿರಂತರ ನಡೆಯುತ್ತಲೇ ಬಂದಿದೆ. ಕಮ್ಯುನಿಸ್ಟ್ ಸರ್ಕಾರದ ಅವಧಿಯಲ್ಲಂತೂ ಇಂಥ ಪ್ರಕರಣಗಳು ಮಿತಿಮೀರಿದ್ದವು. ಈಗ ಎಡರಂಗ ಅಲ್ಲಿ ಬಲ ಕಳೆದುಕೊಂಡಿದೆ. ಟಿಎಂಸಿ ಅಧಿಕಾರದಲ್ಲಿದೆ.
ಕಳೆದೊಂದು ದಶಕದಲ್ಲಿ ರಾಜಕೀಯ ಹಿಂಸಾಚಾರವು ಭಿನ್ನ ರೂಪ ಪಡೆದಿದೆ. ಭಾರತೀಯ ಜನತಾಪಾರ್ಟಿಯೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತರ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಪ್ರತಿಯಾಗಿ ತೃಣಮೂಲದ ಕಾರ್ಯಕರ್ತರೂ ಹಿಂಸಾಚಾರಕ್ಕೆ ತುತ್ತಾಗುತ್ತಿದ್ದಾರೆ. ಒಟ್ಟಲ್ಲಿ ಟಿಎಂಸಿ ವರ್ಸಸ್ ಬಿಜೆಪಿ ಯುದ್ಧ ತಾರಕಕ್ಕೇರಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಈ ರಾಜಕೀಯ ಹಿಂಸಾಚಾರಗಳ ವಿಷಯದಲ್ಲಿ ಜಾಣ ಮೌನ ವಹಿಸಿರುವುದು ದುರಂತ. ಅವರ ಈ ಮೌನವು ‘ಸಮ್ಮತಿ’ಯಲ್ಲದೇ ಮತ್ತೇನೂ ಅಲ್ಲ ಎನ್ನುತ್ತಲೇ ಬಂದಿದೆ ಬಿಜೆಪಿ. ಆದರೆ ಮಮತಾ ಮಾತ್ರ ಈ ಆರೋಪಗಳನ್ನೆಲ್ಲ ನಿರಾಕರಿಸುತ್ತಾರೆ. ‘ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರವೇ ಇಲ್ಲ’ ಎಂದು ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಾದಿಸಿದ್ದರು. ಆದರೆ, ಈ ರಾಜಕೀಯ ಹತ್ಯೆಗಳು ಈಗ ತಹಬದಿಗೆ ಬರಲಾರದಷ್ಟು ಮಿತಿಮೀರಿಬಿಟ್ಟಿವೆ, ಕಾನೂನು ಸುವ್ಯವಸ್ಥೆಯ ಮೇಲೆ ಮಮತಾ ಸರ್ಕಾರ ಹಿಡಿತಕಳೆದುಕೊಂಡಿದೆ ಎಂದು ಮೇಲಿನ ಘಟನೆಗಳಿಂದ ಸ್ಪಷ್ಟವಾಗುತ್ತಿದೆ. ಅದರಲ್ಲೂ ಈ ರಾಜಕೀಯ ಹತ್ಯೆಗಳಂತೂ ಐಸಿಸ್ ಉಗ್ರ ಕೃತ್ಯಗಳಿಗೆ ಹೋಲಿಸುವಷ್ಟು ಕ್ರೂರವಾಗಿರುತ್ತವೆ. ಅಂದರೆ ಯಾವ ಮಟ್ಟಕ್ಕೆ ರಾಜಕೀಯ ಸಿದ್ಧಾಂತ, ಅಧಿಕಾರ ವ್ಯಾಮೋಹ ಜನರ ಮನಸ್ಸನ್ನು ಕಲುಷಿತಗೊಳಿಸಿಬಿಟ್ಟಿದೆ ಎನ್ನುವುದು ಇದರಿಂದ ಅರ್ಥವಾಗುತ್ತದೆ. ಬಿಜೆಪಿ ಕಾರ್ಯಕರ್ತರೇ ಇರಲಿ, ಟಿಎಂಸಿ ಕಾರ್ಯಕರ್ತರೇ ಆಗಲಿ…ಎಲ್ಲರೂ ಮನುಷ್ಯರೇ, ಯಾವ ಹತ್ಯೆಯೂ ಸಮರ್ಥನೀಯವಲ್ಲ. ಪ್ರತಿಯೊಂದು ಪಕ್ಷದ ನಾಯಕರೂ ಈ ವಿಚಾರದಲ್ಲಿ ಧ್ವನಿ ಎತ್ತಲೇಬೇಕಿದೆ. ಹಿಂಸಾಚಾರದಲ್ಲಿ ತೋಡಗಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ, ಸ್ಥಳೀಯ ನಾಯಕರಿಗೆ ಅವು ಎಚ್ಚರಿಕೆ ನೀಡಬೇಕಿದೆ, ತಿಳಿಹೇಳಬೇಕಿದೆ. ವ್ಯಕ್ತಿಯೊಬ್ಬ ಸತ್ತಾಗ ಆತ ಯಾವ ಪಕ್ಷ ಅಥವಾ ಸಿದ್ಧಾಂತಕ್ಕೆ ಸೇರಿದವನು ಎಂದು ನೋಡುವಂಥ ಹೃದಯಹೀನ ಸ್ಥಿತಿಗೆ ಯಾವುದೇ ಪಕ್ಷ ಅಥವಾ ನಾಯಕರು ಎಂದಿಗೂ ಬರಬಾರದು. ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಾ ಕೂಡುವುದರಿಂದ ಪರಿಸ್ಥಿತಿಯಂತೂ ಸುಧಾರಿಸದು. ಶಾಂತಿ-ಸಹಬಾಳ್ವೆ, ಮಾನವೀಯತೆಯ ಮಾತನಾಡುವ ಮಮತಾ ಬ್ಯಾನರ್ಜಿಯವರ ಸರ್ಕಾರ ನುಡಿದಂತೆ ನಡೆದು ತೋರಿಸಬೇಕು. ಅದಕ್ಕಿಂತಲೂ ಮೊದಲು ರಾಜಕೀಯ ಹತ್ಯೆಗಳು ಆಗುತ್ತಿವೆ ಎನ್ನುವ ಸತ್ಯವನ್ನು ಅವರು ಒಪ್ಪಿಕೊಳ್ಳಬೇಕು. ನಿರಾಕರಣೆಯಿಂದ ಬದಲಾವಣೆಯೇನೂ ಆಗದು.