ಚೆನ್ನೈ : ರಾಮ ರಾಜ್ಯ ರಥ ಯಾತ್ರೆ ತಮಿಳು ನಾಡು ಪ್ರವೇಶಿಸುವುದನ್ನು ಈ ಕೂಡಲೇ ತಡೆಯಿರಿ; ಇಲ್ಲದಿದ್ದರೆ ರಾಜ್ಯದಲ್ಲಿ ಕೋಮು ಸಾಮರಸ್ಯ ಮತ್ತು ಶಾಂತಿಗೆ ಧಕ್ಕೆ ಒದಗಲಿದೆ ಎಂದು ಡಿಎಂಕೆ ಪ್ರಭಾರ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರು ತಮಿಳು ನಾಡು ಸರಕಾರವನ್ನು ಎಚ್ಚರಿಸಿದ್ದಾರೆ.
ರಾಮ ಜನ್ಮ ಭೂಮಿ – ಬಾಬರಿ ಮಸೀದಿ ವಿವಾದದ ಕೇಸು ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆಯಲ್ಲಿ ಇರುವುದರಿಂದ ವಿಶ್ವ ಹಿಂದು ಪರಿಷತ್ ರಾಮ ರಾಜ್ಯ ರಥ ಯಾತ್ರೆ ಸಂಘಟಿಸಿರುವುದು ಕೋರ್ಟ್ ನಿಂದನೆಯಾಗುತ್ತದೆ ಎಂದಿರುವ ಸ್ಟಾಲಿನ್, ವಿಹಿಂಪ ದ ಈ ರಥ ಯಾತ್ರೆಯು ಒತ್ತಡ ಹೇರುವ ತಂತ್ರವಾಗಿದೆ ಎಂದು ಆರೋಪಿಸಿದರು.
ತಮಿಳು ನಾಡಿನ ತಿರನೆಲ್ವೇಲಿಯಲ್ಲಿ ರಾಮ ರಾಜ್ಯ ರಥ ಯಾತ್ರೆಗೆ ಸಮೂಹವೊಂದು ಪ್ರತಿಭಟನೆ ಪ್ರಕಟಿಸಿರುವ ವರದಿಗಳ ಬೆನ್ನಲ್ಲೇ ಸ್ಟಾಲಿನ್ ಅವರಿಂದ ಸರಕಾರಕ್ಕೆ ಈ ಎಚ್ಚರಿಕೆಯ ನುಡಿಗಳು ಬಂದಿವೆ.
ರಾಮ ರಾಜ್ಯ ರಥ ಯಾತ್ರೆಗೆ ತಿರುನೆಲ್ವೇಲಿಯಲ್ಲಿ ಪ್ರತಿಭಟನೆ ವ್ಯಕ್ತವಾಗುವ ಮುನ್ನೆಚ್ಚರಿಕೆಯ ಕ್ರಮವಾಗಿ ಅಲ್ಲಿ ತತ್‌ಕ್ಷಣದಿಂದ ಜಾರಿಗೆ ಬಂದಿರವಂತೆ ಸೆ.144 ಹೇರಲಾಗಿದ್ದು ಅದು ಮಾರ್ಚ್ 23ರ ವರೆಗೆ ಜಾರಿಯಲ್ಲಿರುತ್ತದೆ ಎಂದು ವರದಿಗಳು ತಿಳಿಸಿವೆ.
ತಮಿಳು ನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿ ಅವರು ತಮ್ಮ ಸರಕಾರವನ್ನು ಮತ್ತು ಮುಖ್ಯಮಂತ್ರಿ ಪದವನ್ನು ಉಳಿಸಿಕೊಳ್ಳುವ ಸಲುವಾಗಿ ರಾಮ ರಾಜ್ಯ ರಥ ಯಾತ್ರೆಗೆ ಅನುಮತಿ ನೀಡಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
39 ದಿನಗಳ ರಾಮ ರಾಜ್ಯ ರಥ ಯಾತ್ರೆಗೆ ಕಳೆದ ಫೆಬ್ರವರಿಯಲ್ಲಿ ಅಯೋಧ್ಯೆಯಲ್ಲಿ ಹಸಿರು ನಿಶಾನೆ ತೋರಿಸಲಾಗಿದ್ದು ಇದೇ ಮಾರ್ಚ್ 25ರಂದು ರಾಮೇಶ್ವರದಲ್ಲಿ ಅದು ಕೊನೆಗೊಳ್ಳಲಿದೆ.