ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನದಿಂದ ಆರಂಭಗೊಂಡ ನಗರ ಪೊಲೀಸರ ಬಿಡುವಿಲ್ಲದ ಕಾರ್ಯ ಮುಂದುವರಿದಿದೆ. ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇ ಧಾಜ್ಞೆ ಜಾರಿಯಲ್ಲಿದೆ. ಜತೆಗೆ, ನಗರದ 22 ಮಂದಿ ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿದೆ. 30 ಎಸಿಪಿಗಳು, 60 ಇನ್‌ಸ್ಪೆಕ್ಟರ್, 100 ಮಂದಿ ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರೊಟ್ಟಿಗೆ 30 ಕೆಎಸ್‌ಆರ್‌ಪಿ ತುಕಡಿಗಳು ಭದ್ರತೆಗೆ ನಿಯೋಜನೆಗೊಂಡಿವೆ.
ಬಿಗಿ ಬಂದೋಬಸ್ತ್ ಕುರಿತು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತರು ಮೇಲ್ವಿ ಚಾರಣೆ ನೋಡಿಕೊಳ್ಳುತ್ತಿದ್ದಾರೆ. ವಿಶ್ವಾಸ ಮತಯಾಚನೆ ಸೇರಿದಂತೆ ಇನ್ನಿತರ ರಾಜ ಕೀಯ ಪ್ರಹಸನಗಳ ಹಿನ್ನೆಲೆಯಲ್ಲಿ ಅಲರ್ಟ್ ಆಗಿ ಕಾರ್ಯ ನಿರ್ವಹಿಸಲು ಸಿಬ್ಬಂದಿಗೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹಲವು ದಿನಗಳಿಂದ ವಿಧಾನಸೌಧ ಕರ್ತ ವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸ ರಂತೂ ಹೈರಾಣಾಗಿದ್ದಾರೆ. ಅಧಿವೇಶನ ಬೇಗ ಮುಗಿದರೆ ಸಾಕು ಎಂದು ಹೆಸರು ಹೇಳಲಿಚ್ಛಿ ಸದ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
“ಝೀರೋ ಟ್ರಾಫಿಕ್’ ವಿವಾದ!: ಅತೃಪ್ತ ಶಾಸಕರು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಲು ಬರುವ ವೇಳೆ ನಗರ ಪೊಲೀಸರು “ಝೀರೋ ಟ್ರಾಫಿಕ್’ ಕಲ್ಪಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿಧಾನಸಭೆ ಅಧಿವೇಶನ ದಲ್ಲಿಯೂ ಈ ವಿಚಾರ ಪ್ರತಿಧ್ವನಿಸಿತು. ಈ ಬಗ್ಗೆ ಡಿಜಿಪಿ ನೀಲಮಣಿ ರಾಜು ಹಾಗೂ ನಗರ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್, ಸ್ಪೀಕರ್ ರಮೇಶ್‌ಕುಮಾರ್ ಅವರನ್ನು ಭೇಟಿಯಾಗಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ನಾಲ್ಕು ಸರ್ಕಲ್‌ಗಳಲ್ಲಿ ಶಾಸಕರಿಗೆ ಸಿಗ್ನಲ್ ಫ್ರೀ ಮಾಡಿಕೊಡಲಾಗಿತ್ತು. ಝೀರೋ ಟ್ರಾಫಿಕ್ ಅವಕಾಶ ಕಲ್ಪಿಸಿಲ್ಲ ಎಂದು ಸಮಜಾಯಿಷಿ ನೀಡಿದರು. ಬಳಿಕ ಸ್ಪೀಕರ್ ಈ ವಿಚಾರವನ್ನು ಸದನದ ಗಮನಕ್ಕೆ ತಂದಾಗ ವಿವಾದ ಬಗೆ ಹರಿಯಿತು.
ಬಿಸಿ ತುಪ್ಪವಾಗಿದ್ದ ಗಣೇಶ್ ಕೆನೆ ಹಾಲಾದರು!: ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಜ.15ರಂದು ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಹಲ್ಲೆ ಪ್ರಕರಣ ನಡೆದಿದ್ದೇ ತಡ, ಶಾಸಕ ಗಣೇಶ್ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದರು. ಆ ದಿನ ರಾತ್ರಿ ನಡೆದ ಹೊಡೆದಾಟದಲ್ಲಿ ಹಲ್ಲೆಗೊಳಗಾಗಿ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾದರೆ ತಿಂಗಳುಗಳ ಕಾಲ ತಲೆಮರೆಸಿಕೊಂಡ ಶಾಸಕ ಗಣೇಶ್ ಜೈಲು ಪಾಲಾದರು. ಇತ್ತ ಪಕ್ಷದಿಂದ ಉಚ್ಛಾಟನೆಗೊಳಗಾದರು. ಈ ಬೆಳವಣಿಗೆಗಳು ನಡೆದ ಆರು ತಿಂಗಳಲ್ಲಿ ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರೆ, ಪಕ್ಷದಿಂದ ಉಚ್ಛಾಟನೆ ಶಿಕ್ಷೆಗೆ ಒಳಗಾಗಿದ್ದ ಶಾಸಕ ಗಣೇಶ್, ಪಕ್ಷಕ್ಕೆ ಹತ್ತಿರವಾಗಿದ್ದಾರೆ. ಸೋಮವಾರದ ಅಧಿವೇಶನದಲ್ಲಿ ಪಕ್ಷವನ್ನು ಸಮರ್ಥಿಸಿಕೊಂಡರು.
* ಮಂಜುನಾಥ ಲಘುಮೇನಹಳ್ಳಿ