ಆಸಕ್ತ ಪದವೀಧರ ಯುವ ಜನತೆಗೆ ರಾಜಕೀಯ ತರಬೇತಿ ನೀಡಲು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ತರಬೇತಿ ಸಂಸ್ಥೆಯನ್ನು ಆರಂಭಿಸುವ ಪ್ರಸ್ತಾವವನ್ನು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮುಂದಿಟ್ಟಿದ್ದಾರೆ. ಇಂದಿನ ಯುವಪೀಳಿಗೆ ರಾಜಕೀಯದಲ್ಲಿ ಆಸಕ್ತಿ ತೋರುತ್ತಿಲ್ಲ ಮತ್ತು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ಯುವಜನತೆಗೆ ರಾಜಕೀಯದ ಒಳ-ಹೊರಗುಗಳ ಬಗೆಗೆ ಪ್ರಾಥಮಿಕ ಜ್ಞಾನ ಇರುವುದಿಲ್ಲ ಎಂಬ ಆರೋಪಗಳು ಸರ್ವೇ ಸಾಮಾನ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಸ್ಪೀಕರ್ ಅವರ ಈ ಪ್ರಸ್ತಾವ ನಿಜಕ್ಕೂ ಚಿಂತನೀಯ. ರಾಜಕೀಯದಲ್ಲೂ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಬೇಕೆಂಬ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ತೀವ್ರ ಚರ್ಚೆಗೀಡಾಗಿರುವಂತೆಯೇ ಯುವಜನತೆಯನ್ನು ನಾಯಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಲಿದೆ.
ಕಳೆದೊಂದು ದಶಕದಿಂದೀಚೆಗೆ ರಾಜ್ಯ ಮಾತ್ರವಲ್ಲದೆ ದೇಶದೆಲ್ಲೆಡೆ ರಾಜಕೀಯ ಕ್ಷೇತ್ರದಲ್ಲಿ ಯುವಜನರ ಹವಾ ಒಂದಿಷ್ಟು ಬೀಸತೊಡಗಿದ್ದು ಕೊಂಚ ಆಶಾವಾದ ಮೂಡಿಸಿದೆ. ಆದರೆ ಈ ಯುವ ಪ್ರತಿನಿಧಿಗಳು ರಾಜಕೀಯದಲ್ಲಿ ಇನ್ನಷ್ಟೇ ಪಳಗಬೇಕಾಗಿದ್ದು ಅವರ ಒಟ್ಟಾರೆ ಕಾರ್ಯವೈಖರಿ ದೇಶದ ಗಮನ ಸೆಳೆದಿಲ್ಲ. ಹೀಗಾಗಿ ಶಾಸನ ಸಭೆಗಳಿಗೆ ಚುನಾಯಿತರಾಗಿ ಆಯ್ಕೆಯಾಗಿ ಬರುವ ಯುವಕರಿಗೆ ಆರಂಭದಲ್ಲೇ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವೇಳೆ ನೂತನ ಶಾಸಕರಿಗೆ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವಿಕೆ, ಅವರ ಕಾರ್ಯವ್ಯಾಪ್ತಿ, ಸದನದಲ್ಲಿ ಉತ್ತಮ ನಡತೆ ಮತ್ತು ವರ್ತನೆ ತೋರುವುದು ಮತ್ತಿತರ ವಿಚಾರಗಳಲ್ಲಿ ತಜ್ಞರು ಮತ್ತು ರಾಜಕೀಯ ಮುತ್ಸದ್ಧಿಗಳಿಂದ ತರಬೇತಿಯನ್ನು ನೀಡುತ್ತ ಬರಲಾಗಿದೆ. ಇದರಿಂದಾಗಿ ನೂತನ ಶಾಸಕರು ಕೂಡ ಕಲಾಪಗಳಲ್ಲಿ ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಿದೆ. ಹೀಗಾಗಿ ಸ್ಪೀಕರ್ ಯು.ಟಿ.ಖಾದರ್ ಅವರು ರಾಜಕೀಯದಲ್ಲಿ ಆಸಕ್ತಿಯುಳ್ಳ ಪದವೀಧರರನ್ನು ಸಜ್ಜು ಗೊಳಿಸಲು ಮುಂದಾಗಿರುವುದು ದೂರದೃಷ್ಟಿಯ ಕ್ರಮವಾಗಿದೆ.
ಸದ್ಯ ಈ ಪ್ರಸ್ತಾವ ಪ್ರಾಥಮಿಕ ಹಂತದಲ್ಲಿದ್ದು ಆದಷ್ಟು ಶೀಘ್ರದಲ್ಲಿ ಇದನ್ನು ಅನುಷ್ಠಾನಗೊಳಿಸುವುದಾಗಿ ಸ್ಪೀಕರ್ ಹೇಳಿದ್ದಾರೆ. ಹಾಲಿ ಪ್ರಸ್ತಾ ವನೆಯ ಪ್ರಕಾರ ತರಬೇತಿಯ ಅವಧಿ ಒಂದು ವರ್ಷದ್ದಾಗಿರಲಿದ್ದು ಇದ ರಲ್ಲಿ ಮೊದಲ ಆರು ತಿಂಗಳುಗಳ ಕಾಲ ಪಠ್ಯ ಸಹಿತ ತರಬೇತಿ ಹಾಗೂ ಬಳಿಕದ ಆರು ತಿಂಗಳ ಕಾಲ ಪ್ರಾಯೋಗಿಕ ಅನುಭವ ಪಡೆಯಲು ಶಾಸ ಕರು, ಸಚಿವರು ಮತ್ತು ಸ್ಪೀಕರ್ ಅವರ ಕಚೇರಿಗಳಲ್ಲಿ ಇಂಟರ್ನ್ಶಿಪ್‌ಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಇದರ ಜತೆಯಲ್ಲಿ ಹಿರಿಯ ನಾಯಕರು ಮತ್ತು ರಾಜಕೀಯ ಮುತ್ಸದ್ಧಿಗಳು, ಐಎಎಸ್ ಅಧಿಕಾ ರಿಗಳನ್ನು ಸಂಸ್ಥೆಗೆ ಕರೆಸಿಕೊಂಡು ಅವರೊಂದಿಗೆ ಸಂವಾದಗಳನ್ನು ಏರ್ಪಡಿಸುವ ಚಿಂತನೆಯನ್ನು ಇದು ಒಳಗೊಂಡಿದೆ.
ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಇಂತಹ ತರಬೇತಿ ನೀಡುತ್ತಿದೆ. ಈ ಸಂಸ್ಥೆಯ ಸಹಾಯ ಪಡೆದು ರಾಜ್ಯದಲ್ಲಿ ತೆರೆಯಲಾಗುವ ರಾಜಕೀಯ ತರಬೇತಿ ಸಂಸ್ಥೆಯ ಪಠ್ಯಕ್ರಮವನ್ನು ಅಖೈರುಗೊಳಿಸಲು ನಿರ್ಧರಿಸಲಾಗಿದೆ. ಸ್ಪೀಕರ್ ಯು.ಟಿ.ಖಾದರ್ ಅವರ ಈ ವಿನೂತನ ಪರಿಕಲ್ಪನೆ ಯುವಜನತೆಗೆ ರಾಜಕಾರಣದ ವರ್ಣಮಾಲೆಯನ್ನು ಕಲಿಸಿಕೊಡುವುದರ ಜತೆಯಲ್ಲಿ ಅವರ ರಾಜಕೀಯ ಪ್ರವೇಶಕ್ಕೆ ಪ್ರಥಮ ಮೆಟ್ಟಿಲಾಗಲಿದೆ. ಭವಿಷ್ಯದ ರಾಜಕಾರಣಿಗಳನ್ನು ರೂಪಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ.