ಗಂಗಾವತಿ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬಳ್ಳಾರಿಯ ಮನೆಯಲ್ಲಿ ಖಾಯಂ ಆಗಿ ವಾಸ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶೀಘ್ರವೇ ಗಂಗಾವತಿಯಲ್ಲಿ ಖರೀದಿಸಿರುವ ಮನೆಯಲ್ಲಿ ವಾಸ ಮಾಡಲು ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ನಿರ್ಧರಿಸಿದ್ದಾರೆ. ಗಂಗಾವತಿಯಿಂದ ಅಸೆಂಬ್ಲಿಗೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಉಹಾಪೋಹಾಗಳಿಗೆ ಸೋಮವಾರ ತೆರೆ ಎಳೆದಿದ್ದಾರೆ.
ಗಂಗಾವತಿ ಅಥವಾ ಆನೆಗೊಂದಿ ಭಾಗದಲ್ಲಿ ರೆಡ್ಡಿ ಮನೆ ಮಾಡಿ ವಾಸ ಮಾಡಲಿದ್ದಾರೆಂಬ ಸುದ್ದಿ ಕಳೆದ ಒಂದು ವರ್ಷದಿಂದಲೂ ಚಾಲ್ತಿಯಲ್ಲಿತ್ತು. ಕನಕಗಿರಿ ರಸ್ತೆಯಲ್ಲಿರುವ ಕ್ರಿಯೇಟಿವ್ ಪಾರ್ಕ್ ಲೇಔಟ್‌ನಲ್ಲಿ ಐದು ಬೆಡ್ ರೂಂಗಳಿರುವ ಬೃಹತ್ ಬಂಗಲೆ, ಇದಕ್ಕೆ ಹೊಂದಿಕೊಂಡಿರುವ ಮೂರು ಖಾಲಿ ನಿವೇಶನ ಖರೀದಿಸಿದ್ದು ವಾಹನಗಳ ನಿಲುಗಡೆಗಾಗಿ ಪಕ್ಕದಲ್ಲಿರುವ ಮೂರು ಎಕರೆ ಗದ್ದೆಯನ್ನು ಲೀಜ್ ಗೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
2008 ರಲ್ಲಿ ಗಾಲಿ ಕುಟುಂಬ ಹಾಗೂ ಸಚಿವ ಬಿ.ಶ್ರೀರಾಮುಲು ಇಡೀ ಸರಕಾರದ ಪ್ರಮುಖ ಹುದ್ದೆಗಳಲ್ಲಿದ್ದು ಆಡಳಿತ ನಡೆಸಿದ್ದರು. ಗಣಿಹಗರಣದ ಕೇಸ್‌ಗಳಿಂದಾಗಿ ಮಾಜಿ ಸಚಿವ ರೆಡ್ಡಿಯವರಿಗೆ ಜೈಲು ಶಿಕ್ಷೆಯಾಗಿದ್ದು ಜಾಮೀನಿನ ಮೇಲೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಳ್ಳಾರಿಯ ಹೊರಗಿನ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಈ ಮಧ್ಯೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿರುವ ರೆಡ್ಡಿ ಕರ್ಮ ಭೂಮಿ ಬಳ್ಳಾರಿಯನ್ನು ಬಿಟ್ಟು ಬಿಜೆಪಿಯಿಂದ ಗಂಗಾವತಿ ಅಥವಾ ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ಆಪ್ತರಲ್ಲಿ ವ್ಯಕ್ತಪಡಿಸಿದ್ದಾರೆನ್ನಲಾಗಿದ್ದು, ಅದಕ್ಕಾಗಿಯೇ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿ ವಿಶಾಲವಾದ ಮನೆಯನ್ನು ಖರೀದಿಸಿದ್ದಾರೆ.
ತಾಲೂಕಿನ ಪಂಪಾಸರೋವರ, ವಾಲೀಕಿಲ್ಲಾ ಆದಿಶಕ್ತಿ ದೇಗುಲ ಮತ್ತು ಅಂಜನಾದ್ರಿ ಬೆಟ್ಟಕ್ಕೆ ಪದೇ ಪದೇ ಸಚಿವ ಬಿ.ಶ್ರೀರಾಮುಲು ಅವರ ಜತೆ ಆಗಮಿಸುವ ರೆಡ್ಡಿಯವರು ಗಂಗಾವತಿ ತಾಲೂಕಿನ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ಹಂಪಿ ಉತ್ಸವದ ಜತೆ ಆನೆಗೊಂದಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದರು. ಆಪ್ತ ಸಚಿವ ಬಿ.ಶ್ರೀರಾಮುಲು ಜಿರ್ಣೋದ್ಧಾರ ಮಾಡುತ್ತಿರುವ ಪಂಪಾಸರೋವರ ಮತ್ತು ವಾಲೀಕಿಲ್ಲಾ ಆದಿಶಕ್ತಿ ದೇಗುಲಗಳಿಗೆ ಆಗಾಗ ಭೇಟಿ ನೀಡಿ ನಿರ್ಮಾಣದ ಕುರಿತು ಸಲಹೆ ನೀಡಿದ್ದಾರೆ.
ಗಂಗಾವತಿ ಮತ್ತು ಕುಷ್ಟಗಿ ಕ್ಷೇತ್ರಗಳಲ್ಲಿ ಇತರೆ ಸಮುದಾಯದ ಮತದಾರರ ಜತೆಗೆ ರಡ್ಡಿ ಮತ್ತು ಹಿಂದುತ್ವದ ಆಧಾರದಲ್ಲಿ ಮತಗಳ ಸಂಖ್ಯೆ ಹೆಚ್ಚಿರುವುದರಿಂದ ಎರಡು ಕ್ಷೇತ್ರಗಳ ಮೇಲೆ ರಡ್ಡಿ ಆಪ್ತರ ಕಣ್ಣು ಬಿದ್ದಿದ್ದು ಶೀಘ್ರವೇ ಗಂಗಾವತಿಯಲ್ಲಿ ಮನೆಯ ಗೃಹಪ್ರವೇಶ ನಡೆಸುವ ಯೋಜನೆಯಲ್ಲಿದ್ದಾರೆ.
ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸುರಕ್ಷಿತವಾಗಿ ಗೆಲ್ಲಲು ಅನುಕೂಲವಾಗಿರುವ ಕ್ಷೇತ್ರಗಳ ಸರ್ವೇ ನಡೆಸಿದ್ದು ಈ ಪೈಕಿ ಕುಷ್ಟಗಿ ಕ್ಷೇತ್ರವೂ ಒಂದಾಗಿದೆ. ಈ ಕ್ಷೇತ್ರದಿಂದ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನು ನಿಲ್ಲಿಸುವ ಯೋಜನೆ ರೂಪಿಸಿದೆ ಎನ್ನಲಾಗುತ್ತಿದ್ದು. ಸಿದ್ದರಾಮಯ್ಯನವರನ್ನು ಚಾಮುಂಡಿ ಕ್ಷೇತ್ರದಲ್ಲಿ ಸೋಲಿಸಿದ ತಂತ್ರಗಳನ್ನು ಕುಷ್ಟಗಿ ಕ್ಷೇತ್ರದಲ್ಲಿ ಬಿಜೆಪಿ ಅಳವಡಿಸಿರುವುದಾಗಿ ತಿಳಿದು ಬಂದಿದೆ. ರೆಡ್ಡಿ ರಾಜಕೀಯ ತಂತ್ರಗಳನ್ನು ರೂಪಿಸುವಲ್ಲಿ ಪರಿಣಿತರಾಗಿದ್ದು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಕ್ಷದ ಮುಖಂಡರು ಗಾಲಿಯವರ ಮೊರೆ ಹೋಗಿದ್ದಾರೆನ್ನಲಾಗುತ್ತಿದೆ.
ಕಿಷ್ಕಿಂದಾ ಅಂಜನಾದ್ರಿ ಹನುಮದ್ ವೃತ ನಿಮಿತ್ತ ಹನುಮಮಾಲಾಧಾರಿಯಾಗಿ ಆಂಜನೇಯ ಸ್ವಾಮಿಯ ದರ್ಶನವನ್ನು ಸೋಮವಾರ ಪಡೆದಿದ್ದಾರೆ.
ಬಳ್ಳಾರಿಯಂತೆ ಗಂಗಾವತಿಯೂ ನನ್ನ ಕರ್ಮಭೂಮಿಯಾಗಿದ್ದು ಗಂಗಾವತಿಯಲ್ಲಿ ಮನೆ ಖರೀದಿಸಿದ್ದೇನೆ. ಇಲ್ಲಿಯೇ ರಾಜಕೀಯ, ಸಾಮಾಜಿಕವಾಗಿ ಜನರ ಸೇವೆ ಮಾಡಲು ಉತ್ಸುಕನಾಗಿದ್ದೇನೆ. ನನ್ನ ಅಭಿಮಾನಿಗಳು ಸೇರಿ ಎಲ್ಲಾ ಸಮುದಾಯಗಳ ಆಶೀರ್ವಾದ ನನ್ನ ಮೇಲಿದೆ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಕೆ.ನಿಂಗಜ್ಜ