Advertisement
ಬೆಂಗಳೂರು: ರಾಜಕೀಯ ಪಕ್ಷಗಳಿಗೆ ಚುನಾವಣೆಯೇ ಜೀವಾಳ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಂದಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಆಡಳಿತ ಮತ್ತು ಪ್ರತಿಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ. ಆದರೆ, ಇದೀಗ ಈ ಪ್ರತಿಷ್ಠೆಯನ್ನೇ ಪಕ್ಕಕ್ಕಿಟ್ಟು ಎಲ್ಲಾ ಪಕ್ಷಗಳು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿವೆ.ಕಂಡು ಕೇಳರಿಯದ ಮಳೆ ಮತ್ತು ಪ್ರವಾಹಕ್ಕೆ ಕೊಡಗು ಜಿಲ್ಲೆ ತತ್ತರಿಸಿದ್ದು, ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಸಹಸ್ರಾರು ಮಂದಿ ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಸಾವಿರಕ್ಕೂ ಹೆಚ್ಚು ಮನೆಗಳು ಧಾರಾಶಾಹಿಯಾಗಿದೆ. ಊರುಗಳ ಮಧ್ಯೆ ಸಂಪರ್ಕವೇ ಕಡಿದುಹೋಗಿದೆ. ಈ ರೀತಿ ಕಂಗೆಟ್ಟಿರುವ ಕೊಡಗಿಗೆ ಪಕ್ಷಾತೀತವಾಗಿ ಎಲ್ಲಾ ನಾಯಕರೂ ನೆರವಿಗೆ ಧಾವಿಸುವ ಮೂಲಕ ರಾಜಕೀಯ ಹೋರಾಟಕ್ಕಿಂತ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಪ್ರವಾಹ, ಅತಿವೃಷ್ಠಿಯಿಂದ ಜನ ಕಂಗೆಟ್ಟಾಗ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆರೋಪಗಳಿಗೆ ಆದ್ಯತೆ ನೀಡುವುದು ಸಾಮಾನ್ಯ. ಆದರೆ, ಈ ಬಾರಿ ಅಂತಹ ಆರೋಪಗಳು ಕೇಳಿಬರುತ್ತಿಲ್ಲ. ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಪರಸ್ಪರ ಸಹಕಾರದಿಂದ ನೆರವಿಗೆ ಧಾವಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಕೇಂದ್ರದಿಂದ ಹೆಚ್ಚಿನ ನೆರವು ಪಡೆಯುವ ಬಗ್ಗೆ ಒಟ್ಟಾಗಿ ಪ್ರಯತ್ನಿಸಲು ಮುಂದಾಗಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷಗಳ ಬಹುತೇಕರು ಕೊಡಗು ಜಿಲ್ಲೆಯಲ್ಲೇ ಇದ್ದಾರೆ.
ಪ್ರಕೃತಿ ವಿಕೋಪ ಸಂಭವಿಸಿದಾಗ ಮುಖ್ಯಮಂತ್ರಿಯಾದವರು ಒಂದು ಬಾರಿ ಆ ಪ್ರದೇಶಕ್ಕೆ ಹೋಗಿ ಬಂದು ನಂತರ ಕೇಂದ್ರ ಸ್ಥಾನದಲ್ಲಿದ್ದು ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳೆದೆರಡು ದಿನಗಳಿಂದ ಕೊಡಗಿನಲ್ಲೇ ಇದ್ದು ಪರಿಹಾರ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಎರಡು ಬಾರಿ ವೈಮಾನಿನಕ ಸಮೀಕ್ಷೆ ನಡೆಸಿ ಇಡೀ ಜಿಲ್ಲೆಯ ಪರಿಸ್ಥಿತಿ ತಿಳಿದುಕೊಂಡಿದ್ದಾರೆ. ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿರುವುದರಿಂದ ಸಹಜವಾಗಿಯೇ ಅಧಿಕಾರಿಗಳೂ ಅಲ್ಲೇ ಮೊಕ್ಕಾ ಹೂಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಬಗ್ಗೆ ಗಮನಹರಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಕೊಡಗಿನಲ್ಲೇ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಇನ್ನೊಂದೆಡೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಳೆದ 15 ದಿನಗಳಿಂದ ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಆದ್ಯತೆ ನೀಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅವರೂ ಅಲ್ಲೇ ಮೊಕ್ಕಾ ಹೂಡಿದ್ದು, ವಿವಿಧ ಇಲಾಖೆಯವರೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಕಾರ್ಯಗಳ ಜವಾಬ್ದಾರಿ ಜತೆಗೆ ಸಂತ್ರಸ್ತರಿಗೆ ಶೀಘ್ರ ಪರಿಹಾರ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ.
Related Articles
Advertisement
ಕಾಂಗ್ರೆಸ್‌ನಿಂದ ತಂಡ ರಚನೆ:ಮಿತ್ರ ಪಕ್ಷ ಕಾಂಗ್ರೆಸ್ ಕೂಡ ಸಂತ್ರಸ್ತರ ನೆರವು ಕಾರ್ಯದಲ್ಲಿ ತೊಡಗಿದೆ. ನೆರೆ, ಭೂಕುಸಿತದಿಂದ ಆಗಿರುವ ಹಾನಿಗಳ ಬಗ್ಗೆ ಪರಿಶೀಲಿಸಲು ತಂಡವೊಂದನ್ನು ಕೊಡಗಿಗೆ ಕಳುಹಿಸಿಕೊಟ್ಟಿದೆ. ಜಿಲ್ಲಾವಾರು ತಂಡಗಳನ್ನು ಕೊಡಗಿಗೆ ಕಳುಹಿಸಿಕೊಟ್ಟು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದೆ. ಸಂತ್ರಸ್ತರ ನೆರವಿಗೆ ಧಾವಿಸುವಂತೆ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಸೂಚನೆ ನೀಡಿದ್ದು, ಅದರಂತೆ ಎಲ್ಲರೂ ಒಂದಲ್ಲೊ ಒಂದು ಕೆಲಸದಲ್ಲಿ ನಿರತರಾಗಿದ್ದಾರೆ. ಪ್ರತಿಪಕ್ಷ ನಾಯಕರೂ ಕೊಡಗಿನಲ್ಲಿ ಮೊಕ್ಕಾಂ:
ಪ್ರಕೃತಿ ವಿಕೋಪ ಸಂಭವಿಸಿದಾಗ ಸರ್ಕಾರ ನೆರವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪದಲ್ಲೇ ಕಾಲ ಕಳೆಯುವುದು ಪ್ರತಿಪಕ್ಷದ ಕೆಲಸ. ಆದರೆ, ಪ್ರತಿಪಕ್ಷ ಬಿಜೆಪಿಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಒಂದು ತಂಡ ಕೊಡಗು ಜಿಲ್ಲೆಯಲ್ಲೇ ಇದ್ದು ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕಾರ್ಯಕರ್ತರೂ ರಕ್ಷಣಾ ಕಾರ್ಯಗಳಿಗೆ ಕೈಜೋಡಿಸುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿಯ ಇನ್ನೊಂದು ಪ್ರಮುಖರ ತಂಡ ಬೆಂಗಳೂರಿನಲ್ಲಿ ಪರಿಹಾರ ಸಾಮಗ್ರಿಗಳ ಸಂಗ್ರಹ ಮತ್ತು ಅದನ್ನು ಕೊಡಗಿಗೆ ಸಾಗಿಸುವ ಕೆಲಸದಲ್ಲಿ ನಿರತವಾಗಿದೆ. ಬಿಜೆಪಿಯ ಎಲ್ಲಾ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ತಮ್ಮ ಎರಡು ತಿಂಗಳ ವೇತನವನ್ನು ಪರಿಹಾರ ಕಾರ್ಯಗಳಿಗಾಗಿ ನೀಡುವುದಾಗಿ ಘೋಷಿಸಿದ್ದಾರೆ. ಪಕ್ಷದ ಪದಾಧಿಕಾರಿಗಳೂ ಆರ್ಥಿಕ ನೆರವಿಗೆ ಮುಂದಾಗಿದ್ದಾರೆ. ಸದ್ಯ ಎಲ್ಲಾ ಪಕ್ಷಗಳ ನಾಯಕರು ನಗರ ಸ್ಥಳೀಯ ಸಂಸ್ಥೆ ಚುನಾವಣೆ ಇದೆ ಎಂಬುದನ್ನೇ ಮರೆತು ನೆರೆ ಸಂತ್ರಸ್ತರ ನೆರವಿಗೆ ನಿಂತಿದ್ದು, ಜನರ ಸಂಕಷ್ಟಕ್ಕೆ ಮಿಡಿಯುವ ಹೃದಯ ವೈಶಾಲ್ಯತೆ ತೋರಿದ್ದಾರೆ. ಇದರ ಪರಿಣಾಮ ಕೊಡಗಿನಲ್ಲಿ ಪರಿಹಾರ ಕಾರ್ಯಗಳು ಚುರುಕಿನಿಂದ ನಡೆಯುವಂತಾಗಿದೆ. – ಪ್ರದೀಪ್ ಕುಮಾರ್ ಎಂ.