ಹೊಸಕೋಟೆ: ರಾಜಕಾರಣಿಗಳು ಎಷ್ಟು ವರ್ಷ ಚುನಾಯಿತರಾಗಿ ಅಧಿಕಾರವನ್ನು ಅನುಭವಿಸಿದ್ದೇವೆ ಎನ್ನುವುದಕಿಂತ, ನಮ್ಮ ಅಧಿಕಾರದ ಅವಧಿಯಲ್ಲಿ ಜನತೆಗೆ ಎಷ್ಟು ಪ್ರಮಾಣಿಕವಾಗಿ ಸೇವೆ ಮಾಡಿದ್ದೇವೆ ಎನ್ನುವುದು ಮುಖ್ಯ. ರಾಜಕೀಯ ಜನಸೇವೆಯೇ ಹೊರತು ಅದು ವ್ಯಾಪಾರವಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ತಿಳಿಸಿದರು.
ನಗರದ ದಿ ಟೌನ್ ಕೋ-ಆಪರೇಟೀವ್ ಬ್ಯಾಂಕ್ ನಿಂದ ಷೇರುದಾರರ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕಾರಣಿಗಳು ಮಾಡುವ ಭಾಷಣಕ್ಕೂ ಅವರ ನಡವಳಿಕೆಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದು ಅದನ್ನು ಸರಿಪಡಿಸಿಕೊಳ್ಳಬೇಕು.ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಬಳಿ ಬರುವ ಅವಶ್ಯಕತೆ ಇರುವವರಿಗೆ ಪ್ರಾಮಾಣಿಕವಾಗಿ ಸೇವೆಯನ್ನು ಮಾಡಬೇಕು ಎಂದರು.
ಸಾಲ ಮರುಪಾವತಿ ಮಾಡಿ: ಟೌನ್ ಕೋ-ಆಪರೇಟೀವ್ ಬ್ಯಾಂಕ್ ಯಾವುದೇ ಒಂದು ಕುಟುಂಬಕ್ಕೆ ಸೇರಿದ ಬ್ಯಾಂಕ್ ಆಗಿರದೆ, ಅದು ಜನತೆಯ, ಷೇರುದಾರರ ಬ್ಯಾಂಕ್ ಆಗಿದ್ದು, ಎಲ್ಲಾ ಷೇರುದಾರರ ಸಹಕಾರದಿಂದ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇಲ್ಲಿಂದ ಸಾಲ ಪಡೆದ ಹಲವರು ಕೊರೊನಾ ಕಾರಣದಿಂದ ಬ್ಯಾಂಕ್‌ಗೆ ಸರಿಯಾದ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡದಿರುವುದು ಸಮಸ್ಯೆಯಾಗಿದ್ದು, ಅದನ್ನು ಅರಿತು ಸಾಲ ಮರುಪಾವತಿ ಮಾಡಿದರೆ ಷೇರುದಾರರಿಗೆ ಲಾಭಾಂಶವನ್ನು ನೀಡಬಹುದಾಗಿದೆ ಎಂದರು.
ವಿದ್ಯಾಭ್ಯಾಸಕ್ಕೆ ಸಹಕಾರಿ: ಬ್ಯಾಂಕ್‌ನ ಅಧ್ಯಕ್ಷ ಬಾಲಚಂದ್ರನ್ ಮಾತನಾಡಿ, ಇಂದು ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಮಕ್ಕಳು ತಮ್ಮ ತಂದೆ, ತಾಯಿಗಳ ಬಗ್ಗೆ ಹೆಮ್ಮೆ ಪಡಬೇಕು. ಕಾರಣ ಅವರ ಪರಿಶ್ರಮದಿಂದ ಇಂದು ಮಕ್ಕಳು ವಿದ್ಯಾಭ್ಯಾಸವನ್ನು ಮಾಡಲು ಸಹಕಾರಿಯಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಪ್ರತಿಭಾ ಪುರಸ್ಕಾರವನ್ನು ಅದ್ಧೂರಿಯಾಗಿ ಮಾಡಲಾಗಲಿಲ್ಲ ಎಂದರು. ಬ್ಯಾಂಕ್‌ನ ಉಪಾಧ್ಯಕ್ಷೆ ಜೀನತ್ ಉನ್ನೀಸಾ, ನಿರ್ದೇಶಕ ನವೀನ್, ಕೃಷ್ಣಪ್ಪ, ರಾಜಶೇಖರ್, ನಾಗರಾಜ್, ಕಿರಣ್ ಕುಮಾರ್, ಬ್ಯಾಂಕ್‌ನ ಆಡಳಿತ ವ್ಯವಸ್ಥಾಪಕ ಆಂಜಿನಪ್ಪ ಹಾಗೂ ಮತ್ತಿತರರು ಇದ್ದರು.