ಗುರುಗ್ರಾಮ: ಮಧ್ಯಪ್ರದೇಶದ ರಾಜಕೀಯದಲ್ಲಿ ಕಳೆದ ರಾತ್ರಿ ದಿಢೀರ್ ಪ್ರಹಸನವೊಂದು ಆರಂಭವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಅದಕ್ಕೆ ಬೆಂಬಲ ನೀಡಿರುವ ಒಟ್ಟು ಎಂಟು ಶಾಸಕರನ್ನು ಬಿಜೆಪಿ ತನ್ನ ವಶದಲ್ಲಿರಿಸಿಕೊಂಡಿದೆ.
ಒಟ್ಟು ಎಂಟು ಶಾಸಕರು ಬಿಜೆಪಿ ವಶದಲ್ಲಿದ್ದು, ನಮಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಮಧ್ಯಪ್ರದೇಶದ ಹಣಕಾಸು ಸಚಿವ ತರುಣ್ ಭಾನೋಟ್ ಹೇಳಿದ್ದಾರೆ. ಇದರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಶಾಸಕರು, ಇಬ್ಬರು ಬಿಎಸ್ ಪಿ ಶಾಸಕರು, ಒಬ್ಬ ಸಮಾಜವಾದಿ ಪಕ್ಷದ ಶಾಸಕ ಮತ್ತು ಓರ್ವರು ಪಕ್ಷೇತರ ಶಾಸಕರಾಗಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಈ ಬೆಳವಣಿಗೆ ನಡೆದಿದ್ದು, ಈ ಶಾಸಕರನ್ನು ಬಿಜೆಪಿ ಪಕ್ಷ ಹರ್ಯಾಣದ ಗುರುಗ್ರಾಮದ ಹೊಟೇಲ್ ನಲ್ಲಿ ಇರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಹರ್ಯಾಣ ಪೊಲೀಸರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ ಎಂದು ತರುಣ್ ಭಾನೋಟ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪುತ್ರ ಜೈವರ್ಧನ್ ಸಿಂಗ್ ಅವರು ವಶದಲ್ಲಿರುವ ನಾಯಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದು, ಬಿಎಸ್ ಪಿಯ ಉಚ್ಛಾಟಿತ ಶಾಸಕಿ ರಮಾಬಾಯಿ ಅವರನ್ನು ಮರಳಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ನಾಯಕರಾದ ರಾಂಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ ಬದೌರಿಯಾ ಮತ್ತು ಸಂಜಯ್ ಪಾಠಕ್ ಅವರು ಶಾಸಕರಿಗೆ ಹಣ ನೀಡುತ್ತಿದ್ದಾರೆ. 10ರಿಂದ 11 ಶಾಸಕರು ಅಲ್ಲಿದ್ದ ಬಗ್ಗೆ ಅನುಮಾನವಿತ್ತು. ಆದರೆ ಈಗ ಬಿಜೆಪಿಯ ಜೊತೆ ಕಾಂಗ್ರೆಸ್ ನ ನಾಲ್ವರಷ್ಟೇ ಇದ್ದಾರೆ. ಅವರೂ ವಾಪಾಸ್ ಬರಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಸರ್ಕಾರಕ್ಕೆ ಏನೂ ಆಗುವುದಿಲ್ಲ. ಎಲ್ಲರೂ ವಾಪಾಸ್ ಬರಲಿದ್ದಾರೆ. ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ ಎಂದು ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ.