ಕೊಪ್ಪಳ: ಮಹದಾಯಿಗಾಗಿ ಉತ್ತರ ಕರ್ನಾಟಕ ರೈತರು ಬೆಂಗಳೂರಿನಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಹಾರಾಷ್ಟ್ರದ ಜನತೆ ಕಣ್ಣಿಗೆ ಕಂಡಿದ್ದಾರೆ. ಅವರಿಗೆ ನೀರು ಬಿಡುವ ಸುಳ್ಳು ಭರವಸೆ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.
ಕನಕಗಿರಿ ತಾಲೂಕಿನ ಕನ್ನೇರಮಡು ಗ್ರಾಮದಲ್ಲಿ ಸದ್ಭಾವನಾ ಯಾತ್ರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈಗ ಮಹಾರಾಷ್ಟ್ರದಲ್ಲಿ ವಿಧಾನ ಸಭಾ ಚುನಾವಣೆ ನಡೆಯುತ್ತಿವೆ. ಸಿಎಂ ಜನರ ಮತ ಸೆಳೆಯಲು ನೀರು ಬಿಡುವ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಹಿಂದೆ ಮಹಾರಾಷ್ಟ್ರದವರೇ ನಮ್ಮ ರಾಜ್ಯಕ್ಕೆ ನೀರು ಬಿಡುವ ವೇಳೆ ದುಡ್ಡು ಪಡೆದು ನೀರು ಬಿಟ್ಟಂಥ ಉದಾಹರಣೆ ಇವೆ. ಸಿಎಂ ಇದನ್ನು ತಿಳಿದುಕೊಳ್ಳಲಿ ಎಂದರು.
ರಾಜ್ಯದಲ್ಲಿ ಮಹದಾಯಿಗಾಗಿ ನಿರಂತರ ಹೋರಾಟ ನಡೆಯುತ್ತಲೇ ಇದೆ. ನೂರಾರು ರೈತರು ಬೆಂಗಳೂರಿನಲ್ಲಿ ಬೀದಿಯಲ್ಲಿ ಕುಳಿತು ಧರಣಿ ನಡೆಸುತ್ತಿದ್ದಾರೆ. ಬಿಎಸ್‌ವೈ ಅವರಿಗೆ ಇಲ್ಲಿನ ರೈತರ ಧರಣಿ ಕಣ್ಣಿಗೆ ಕಾಣುತ್ತಿಲ್ಲ. ಆದರೆ ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರ ಅವರ ಗಮನಕ್ಕೆ ಬಂದಿದೆ. ಈಗ ಏಲ್ಲಿ ಹೋದರು ಉಕ ಭಾಗದ ಸಂಸದರು, ಅವರೆಲ್ಲ ಮಂತ್ರಿಗಳಾಗಿದ್ದಾರಲ್ಲ ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮಹದಾಯಿಗಾಗಿ ರಸ್ತೆಗಿಳಿದು ರೈತರು ಧರಣಿ ಮಾಡುತ್ತಿದ್ದಾರೆ. ಅವರನ್ನು ಯಾರೂ ಕೇಳುವವರು ಇಲ್ಲದಂತಾಗಿದೆ. ಉಕ ಜನತೆ ನೆರೆ ಹಾನಿಗೆ ಮನೆಗಳನ್ನೇ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ನೆರೆ ಹಾನಿ ಸಂಬಂಧ ರಾಜ್ಯ ಸರ್ಕಾರ ಕೇಳಿದ ಪರಿಹಾರವನ್ನು ಕೇಂದ್ರವು ಶೇ.3 ರಷ್ಟು ಪರಿಹಾರ ಕೊಟ್ಟಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದರು.
ಮಹಾರಾಷ್ಟ್ರದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆ ಇರುವ ಸಂಬಂಧ ಗಿಮಿಕ್‌ಗಾಗಿ ನೀರು ಬಿಡುವ ವಿಚಾರ ಪ್ರಸ್ತಾಪಿಸಿದ್ದಾರೆ. ಮೊದಲು ನಮಗೆ ನೀರು ಇಡಿದಿಟ್ಟು ನಮ್ಮಲ್ಲಿನ ಸಾಧ್ಯತೆಗಳನ್ನು ತಿಳಿದು ಅವರಿಗೆ ನೀರು ಬಿಡಲಿ. ಬಿಜೆಪಿಯವರು ಏನು ಬೇಕಾದ್ರೂ ಮಾಡ್ತಾರೆ. ಏನೂ ಬೇಕಾದ್ರೂ ಮಾತನ್ನಾಡುತ್ತಾರೆ. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು ಒಂದು ರೀತಿ ಸುಳ್ಳೇ ಅವರ ಜಾಯಮಾನ, ಸುಳ್ಳೇ ಅವರ ಮನೆ ದೇವರು ಎಂದು ಲೇವಡಿ ಮಾಡಿದರು.
ಇನ್ನೂ ಮಹಾರಾಷ್ಟ್ರಕ್ಕೆ ನೀರು ಬಿಟ್ಟರೆ ನಮಗೆ ಪ್ರತ್ಯೇಕ ರಾಜ್ಯ ಎಂದಿರುವ ಉಮೇಶ ಕತ್ತಿ ಅವರು ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ತಂಗಡಗಿ, ನಾವು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಕೇಳುತ್ತಿಲ್ಲ. ಅದಕ್ಕೆ ವಿರೋಧವಿದೆ. ಅಖಂಡ ಕರ್ನಾಟಕ ನಮ್ಮ ನಿಲುವು, ಇದರಲ್ಲಿ ಎರಡು ಮಾತಿಲ್ಲ ಎಂದರು.
ಪ್ರಸ್ತುತ ಬಿಜೆಪಿ ಒಂದು ದೇಶ ಒಂದು ಕಾನೂನು ಎನ್ನುವ ಕೆಲಸ ಆರಂಭಿಸಿದೆ. ಕಾಶ್ಮೀರಕ್ಕೆ ನೀಡಿದ 370 ಮೀಸಲಾತಿ ರದ್ದು ಮಾಡಿದೆ. ಅದರಂತೆ ಮುಂದೆ ಕಲ್ಯಾಣ ಕರ್ನಾಟಕಕ್ಕೆ ನೀಡಿದ 371(ಜೇ) ಮೀಸಲಾತಿ ರದ್ದಾದರೂ ಅಚ್ಚರಿಪಡಬೇಕಿಲ್ಲ. ಕಾಶ್ಮೀರದ ಜನರನ್ನ ಬಂಧನದಲ್ಲಿಟ್ಟಂತೆ ಈ ಭಾಗದ ಜನರನ್ನೂ ಜೈಲಿಗೆ ಹಾಕಿದರೂ ಅಚ್ಚರಿ ಪಡಬೇಕಿಲ್ಲ ಎಂದರು.