Advertisement
ಕರ್ನಾಟಕದಲ್ಲೀಗ ಅಸಂಬದ್ಧ ರಾಜಕೀಯದ ನಾಟಕ ನಡೆಯುತ್ತಿದೆ. ಪರಿಣಾಮವಾಗಿ, ರಾಜ್ಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಲಕ್ವಾ ಬಡಿದಂತಾಗಿದೆ. ಕಳೆದ ಹದಿನೈದು ದಿನಗಳಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಸಹಿತ ಅವರ ಸಂಪುಟದ ಹಲವು ಸಚಿವರು ಬೆಳಗಾವಿಯಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಆರಿಸುವುದರಲ್ಲೇ ಮಗ್ನರಾಗಿದ್ದಾರೆ. ಮಂತ್ರಿಗಳೆಲ್ಲ ರಾಜಕೀಯ ವಿದ್ಯಮಾನಗಳಲ್ಲೇ ಮುಳುಗಿರುವುದರಿಂದ ಹಿರಿಯ ಅಧಿಕಾರಿಗಳೇ ಆಡಳಿತವನ್ನು ನಡೆಸುವಂತಾಗಿದೆ.
Related Articles
Advertisement
ಮಹಿಳಾ ಶಾಸಕಿ ಹಾಗೂ ಜಾರಕಿಹೊಳಿ ಕುಟುಂಬದ ಇಬ್ಬರು ಸಹೋದರರ ನಡುವೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕುಸ್ತಿಯೇ ಈಗ ಆ ಜಿಲ್ಲೆಯ ಪ್ರಮುಖ ಬೆಳವಣಿಗೆ. 1956ರ ಬಳಿಕ ಜಿಲ್ಲೆಯಲ್ಲಿ ಪ್ರಭಾವಶಾಲಿಯಾಗಿ ಬೆಳೆದ ಲಿಂಗಾಯತರು ಹಾಗೂ ಹಿಂದುಳಿದ ವರ್ಗಗಳ ನಡುವಿನ ಸಮರವಾಗಿಯೂ ಇದು ಗುರುತಿಸಿಕೊಂಡಿದೆ. ಕಾಂಗ್ರೆಸಿನಲ್ಲಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಸಿದ ಅಹಿಂದ ಚಳವಳಿಯ ಜತೆಗೆ ಗುರುತಿಸಿಕೊಂಡಿರುವ ಜಾರಕಿಹೊಳಿ ಸಹೋದರರ ಪೈಕಿ ರಮೇಶ್ ಸಚಿವರೂ ಆಗಿದ್ದಾರೆ. ಸಾರಾಯಿ ಗುತ್ತಿಗೆದಾರರಾಗಿ ಬೆಳಕಿಗೆ ಬಂದ ಲಕ್ಷ್ಮಣರಾವ್ ಜಾರಕಿಹೊಳಿ ಕುಟುಂಬ ಆ ಮೇಲೆ ಬೆಳಗಾವಿಯ ರಾಜಕೀಯ, ಸಕ್ಕರೆ ಕಾರ್ಖಾನೆಗಳು ಹಾಗೂ ಇತರ ಕ್ಷೇತ್ರಗಳಲ್ಲಿ ಬೆಳೆದು ಬಂದಿದೆ. ಜಿಲ್ಲೆಯ ಮಟ್ಟಿಗೆ ಇಂದಿಗೂ ಜಾರಕಿಹೊಳಿ ಕುಟುಂಬ ಏಕಸ್ವಾಮ್ಯ ಸಾಧಿಸಿದೆ. ನಾಲ್ವರು ಸಹೋದರರ ಪೈಕಿ ಬಾಲಚಂದ್ರ ಅರಭಾವಿಯಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಮೇಶ್ ಗೋಕಾಕ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ಸತೀಶ್ ಯಮಕನಮರಡಿ ಕ್ಷೇತ್ರದಲ್ಲಿ ಸತತವಾಗಿ ಜಯಗಳಿಸಿದ್ದಾರೆ. ಕೊನೆಯ ಸಹೋದರ ಲಖನ್ ಕೂಡ ಶಾಸನ ಸಭೆಯಲ್ಲಿ ಜನರನ್ನು ಪ್ರತಿನಿಧಿಸುವ ವಿಫಲ ಪ್ರಯತ್ನ ಮಾಡಿದ್ದಾರೆ.
ಜಾರಕಿಹೊಳಿ ಕುಟುಂಬದಲ್ಲಿ ಒಂದು ಅಲಿಖೀತ ನಿಯಮ ಪಾಲನೆಯಾಗುತ್ತಿದೆ. ಅಧಿಕಾರ ಹಿಡಿಯಬಲ್ಲಷ್ಟು ಸಮರ್ಥವಾಗಿರುವ ವಿವಿಧ ರಾಜಕೀಯ ಪಕ್ಷಗಳಿಂದ ಈ ಸಹೋದರರು ಸ್ಪರ್ಧಿಸುತ್ತಾರೆ. ಮಂಡ್ಯದಂತಹ ಕೆಲವು ಜಿಲ್ಲೆಗಳ ರಾಜಕಾರಣಿಗಳೂ ಇದೇ ನೀತಿಯನ್ನು ಅನುಸರಿಸುತ್ತಾರೆ. ಅಲ್ಲಿ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ತಮ್ಮ ನಿಷ್ಠೆ ಬದಲಿಸುತ್ತಿರುತ್ತಾರೆ. ಜಾರಕಿಹೊಳಿ ಸಹೋದರರು ಜೆಡಿಎಸ್‌ನಲ್ಲಿ ಇಲ್ಲ. ಏಕೆಂದರೆ, ಅವರ ಜಿಲ್ಲೆಯಲ್ಲಿ ಆ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ. ಬೇರೆ ಬೇರೆ ಪಕ್ಷ ಹಾಗೂ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಅವರು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡರಲ್ಲೂ ಪ್ರಾತಿನಿಧ್ಯ ಪಡೆಯುತ್ತಾರೆ. ಈ ಆಟಕ್ಕೆ ಸಹಕರಿಸುತ್ತ ಅವರು ಬೆಳಗಾವಿ ರಾಜಕೀಯದ ಮೇಲೆ ಹಿಡಿತ ಹೊಂದಲು ಸಹಕರಿಸುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳೇ ಇದಕ್ಕೆ ಹೊಣೆ ಎಂದರೆ ತಪ್ಪಿಲ್ಲ. ಶಾಸಕರಾಗಿ ಆಯ್ಕೆಯಾಗುವುದೇ ಮುಖ್ಯ ಎನಿಸಿರುವ ಈ ಕುಟುಂಬಕ್ಕೆ ರಾಜಕೀಯ ನಿಷ್ಠೆ ಗೌಣ.
ಜಾರಕಿಹೊಳಿ – ಕರ್ನಿಂಗ್ ದ್ವೇಷಜಾರಕಿಹೊಳಿ ಕುಟುಂಬ ಈ ಹಿಂದೆ ಗೋಕಾಕ್ ಹಾಗೂ ಆಸುಪಾಸಿನಲ್ಲಿ ಪ್ರಬಲವಾಗಿದ್ದ ಕರ್ನಿಂಗ್ ಕುಟುಂಬದಿಂದ ಬದ್ಧ ವೈರತ್ವ ಎದುರಿಸಿತ್ತು. ಕರ್ನಿಂಗ್ ಕುಟುಂಬವೂ ಸಾರಾಯಿ ವ್ಯವಹಾರವನ್ನೇ ನಡೆಸುತ್ತಿತ್ತು. ಆಗಾಗ ಈ ಎರಡೂ ಕುಟುಂಬಗಳ ಮಧ್ಯೆ ಘರ್ಷಣೆ ಸಂಭವಿಸುತ್ತಿತ್ತು. ಕರ್ನಿಂಗ್ ಕುಟುಂಬದಲ್ಲಿ ಒಬ್ಬರಾದ ಶಂಕರ್ 1998ರಲ್ಲಿ ಗೋಕಾಕ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಆದರೆ, ರಾಜಕೀಯದಲ್ಲಿ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡುವುದು ಅವರಿಂದ ಆಗಲಿಲ್ಲ. ಕರ್ನಿಂಗ್ ಹಾಗೂ ಜಾರಕಿಗೊಳಿ ಕುಟುಂಬದ ನಡುವಿನ ಕಲಹ ಮಿತಿ ಮೀರಿದಾಗ ರಾಜ್ಯ ಸರಕಾರ ಆಯೋಗವೊಂದನ್ನು ರಚಿಸಿ, ತನಿಖೆ ನಡೆಸಿ, ತಪ್ಪಿತಸ್ಥರನ್ನು ಗುರುತಿಸುವಂತೆ ಸೂಚಿಸಿತು ಎಂಬ ವಿಚಾರ ಹಲವರಿಗೆ ಗೊತ್ತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣನ್ ನೇತೃತ್ವದ ಆಯೋಗ ತನಿಖೆ ಮಾಡಿ, ವರದಿ ಒಪ್ಪಿಸಿದರೂ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬೆಳಗಾವಿಯಂತಹ ಅಭಿವೃದ್ಧಿಶೀಲ ಜಿಲ್ಲೆಯಲ್ಲಿ ಉತ್ತರ ಪ್ರದೇಶ, ಬಿಹಾರ ಮುಂತಾದ ರಾಜ್ಯಗಳಲ್ಲಿರುವಂತೆ ಜಾರಕಿಹೊಳಿ ಕುಟುಂಬ ರಾಜಕೀಯ ಮಾಡುತ್ತಿರುವುದೇ ಇದಕ್ಕೆ ಕಾರಣವಿದ್ದೀತು. ಈ ದಿನಗಳಲ್ಲಿ ಜಾರಕಿಹೊಳಿಗಳಿಗೆ ಉಂಬಳಿ ಕೊಟ್ಟಂತಿರುವ ಗೋಕಾಕ ಬ್ರಿಟಿಷ್ ಕಾಲದಲ್ಲಿ ಆರಂಭವಾದ ಸುಪ್ರಸಿದ್ಧ ಜವಳಿ ಮಿಲ್ ಇರುವ ತಾಣ. ನೂಲು ಉತ್ಪಾದನೆಯಲ್ಲಿ ಈ ಮಿಲ್ ಹೆಸರು ಮಾಡಿದೆ. ಈ ಜಿಲ್ಲೆಯ ರಾಜಕೀಯಕ್ಕೆ ತಾವೇ ನಾಯಕರು ಎನ್ನುವ ಮನಸ್ಥಿತಿಯಲ್ಲಿರುವ ಜಾರಕಿಹೊಳಿ ಸಹೋದರರು, ಬೆಳಗಾವಿ ರಾಜಕೀಯದಿಂದ ದೂರ ಇರುವಂತೆ ತಾಕೀತು ಮಾಡಿದ್ದಾರೆ. ಜಿಲ್ಲೆಯ ರಾಜಕೀಯ ವಿದ್ಯಮಾನಗಳು ನಿಯಂತ್ರಣ ತಪ್ಪಲು ಅವಕಾಶ ಕೊಟ್ಟಿದ್ದೇ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಎಐಸಿಸಿಯ ತಪ್ಪು. ಜಾರಕಿಹೊಳಿ ಸಹೋದರರು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ಕೇಳಬಹುದೇನೋ. ಜಾರಕಿಹೊಳಿ – ಹೆಬ್ಟಾಳ್ಕರ್ ಗಲಾಟೆಯ ಲಾಭ ಪಡೆದು ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪಗಳಿವೆ. ಆದರೆ, ಬಿಜೆಪಿ ಮುಂದಿನ ವರ್ಷದ ಲೋಕಸಭಾ ಚುನಾವಣೆ ತನಕ ಅವಕಾಶಕ್ಕಾಗಿ ಕಾಯುವುದೊಳಿತು. ಪ್ರಧಾನಿ ನರೇಂದ್ರ ಮೋದಿ ಮುಂದಿನ ಸಲವೂ ಅಧಿಕಾರ ಉಳಿಸಿಕೊಳ್ಳುತ್ತಾರೋ ಎಂಬ ವಿಚಾರದ ಮೇಲೆ ಸಮ್ಮಿಶ್ರ ಸರಕಾರದ ಭವಿಷ್ಯವೂ ನಿಂತಿದೆ. ರಾಷ್ಟ್ರ ರಾಜಕಾರಣಕ್ಕೆ “ಆಪರೇಷನ್ ಕಮಲ’ದಂತಹ ಕೊಡುಗೆ ನೀಡಿದ್ದು ರಾಜ್ಯ ಬಿಜೆಪಿಯ ಸಾಧನೆ. ಪ್ರತಿಪಕ್ಷದ ಅಂತಹ ಮಹತ್ವವೇನೂ ಇಲ್ಲದ ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸಿ, ಅವರು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವಂತೆ ಮಾಡಿದ ಬಿಜೆಪಿ ಅದರ ಲಾಭ ಉಂಡಿದ್ದು ಅಲ್ಪಾವಧಿಗಷ್ಟೇ. ಆಪರೇಷನ್ ಎಂಬ ಶಬ್ದ ಈಗ ರಾಜಕೀಯದಲ್ಲಿ ಕೆಟ್ಟ ಅರ್ಥವನ್ನು ಪಡೆದುಕೊಂಡಿದೆ. ಅದು ಬಿಜೆಪಿಯ ಪ್ರತಿಷ್ಠೆಗೂ ಧಕ್ಕೆಯುಂಟುಮಾಡಿದೆ. ಅಧಿಕಾರಕ್ಕಾಗಿ ಬಿಜೆಪಿ ಬಳ್ಳಾರಿಯ ರೆಡ್ಡಿ ಸಹೋದರರನ್ನು ಅವಲಂಬಿಸಿರುವುದೂ ಆ ಪಕ್ಷಕ್ಕೆ ಹಿನ್ನಡೆಯೇ ಸರಿ. ಹಿಂದೆ ಮಾಡಿದ ತಪ್ಪನ್ನು ಬಿಜೆಪಿ ಮತ್ತೆ ಮಾಡಬಾರದು. ಪ್ರತಿಪಕ್ಷದಲ್ಲೇ ಉಳಿದು ರಚನಾತ್ಮಕ ಕೆಲಸಗಳನ್ನು ಮಾಡಬೇಕು. ಹೇಗಿದ್ದರೂ ಬಿಜೆಪಿ ರಾಜ್ಯದಲ್ಲಿ ಆಡಳಿತ ಮಾಡುವುದಕ್ಕಿಂತ ಪ್ರತಿಪಕ್ಷವಾಗಿಯೇ ಹೆಚ್ಚು ಗುರುತಿಸಿಕೊಂಡಿದೆ. ರಾಜಕೀಯ ನೈತಿಕತೆಯ ಕೊರತೆ ಏನೇ ಇದ್ದರೂ ಮುಂದಿನ ಲೋಕಸಭಾ ಚುನಾವಣೆಯ ತನಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಮುಂದುವರಿಯಲು ಅವಕಾಶ ನೀಡಬೇಕು. ನಮ್ಮ ರಾಜಕೀಯ ನಾಯಕರು ನಗೆಪಾಟಲಿಗೀಡಾಗುವಂತೆ ಮಾಡಿರುವ ಬೆಳಗಾವಿಯ ಕೊಳಕು ರಾಜಕೀಯದ ನೆಪದಲ್ಲಿ ಸಮ್ಮಿಶ್ರ ಸರಕಾರದಿಂದ ಹೊರಬಂದರೂ ಕಾಂಗ್ರೆಸಿಗೆ ಹೆಚ್ಚೇನೂ ಲಾಭ ಆಗಲಾರದು. ಈ ಹಿಂದೆ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದ ಕುಮಾರಸ್ವಾಮಿ ಅವರಿಗೂ ಅದೇ ಸವಕಲು ನಾಣ್ಯವನ್ನು ತೋರಿಸುವ ತುಡಿತವನ್ನು ಕಾಂಗ್ರೆಸ್ ನಿಯಂತ್ರಿಸಿಕೊಳ್ಳಬೇಕು.