ಬೆಂಗಳೂರು: ರಾಜ್ಯಪಾಲರ ಭಾಷಣದ ನಂತರ ಸಂತಾಪ ಸೂಚನೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ಜೆಡಿಎಸ್‌ನ ಮಧು ಬಂಗಾರಪ್ಪ ಕೆಲ ಹೊತ್ತು ಗಹನ ಸಮಾಲೋಚನೆಯಲ್ಲಿ ತೊಡಗಿದ್ದರು. ಮತ್ತೂಂದೆಡೆ ಜೆಡಿಎಸ್‌ನ ಚೆಲುವರಾಯಸ್ವಾಮಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರೊಂದಿಗೆ ಸುಮಾರು ಹೊತ್ತು ಚರ್ಚೆಯಲ್ಲಿ ನಿರತರಾಗಿದ್ದರು.
ಸದನದೊಳಗಷ್ಟೇ ಅಲ್ಲದೆ ವಿಧಾನಸಭೆಯ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಮೊಗಸಾಲೆಯಲ್ಲೂ ಪ್ರಸಕ್ತ ರಾಜಕೀಯ ಬೆಳವಣಿಗೆಗಳದೇ ಗುಸು, ಗುಸು, ಚರ್ಚೆಯಾಗಿತ್ತು.
ಎಸ್.ಎಂ.ಕೃಷ್ಣ ಕಾಂಗೆಸ್‌ಗೆ ರಾಜೀನಾಮೆ ನೀಡಿರುವುದು ಹಾಗೂ ಬಿಜೆಪಿಗೆ ಸೇರುವ ಬಗ್ಗೆ ಮಾತುಕತೆ ನಡೆಯುತ್ತಿರುವುದು, ಜೆಡಿಎಸ್ ಶಾಸಕರ ಕಾಂಗ್ರೆಸ್ ಸೇರ್ಪಡೆ, ಬಿ.ಎಸ್.ಯಡಿಯೂರಪ್ಪ-ಕೆ.ಎಸ್. ಈಶ್ವರಪ್ಪ ನಡುವಿನ ರಾಯಣ್ಣ ಬ್ರಿಗೇಡ್ ಫೈಟ್ ಬಗ್ಗೆ ಶಾಸಕರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪಕ್ಷ ಮರೆತು ಮುಂದಿನ ಚುನಾವಣೆ ವೇಳೆಗೆ ಯಾರ್ಯಾರು ಎಲ್ಲೆಲ್ಲಿರುತ್ತಾರೋ ಎಂದು ಆತ್ಮೀಯವಾಗಿ ಪರಸ್ಪರ ಕಾಳೆಲೆಯುತ್ತಿದ್ದರು. ಉತ್ತರಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲೂ ಸಾಕಷ್ಟು ಬೆಳವಣಿಗೆಗಳು ನಡೆಯಲಿದೆ ಎಂಬ ಮಾತುಗಳು ಕೇಳಿಬಂದವು.