Advertisement

ಪುತ್ರ ವ್ಯಾಮೋಹವೇ ಮುಳುವಾಯಿತೇ? ಏಕನಾಥ್‌ ಇಲಾಖೆಯಲ್ಲಿ ಆದಿತ್ಯ ಠಾಕ್ರೆ ಹಸ್ತಕ್ಷೇಪ

12:06 AM Jun 22, 2022 | Team Udayavani |

ಮುಂಬಯಿ: ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ(ಎಂವಿಎ) ಸರಕಾರ ವೇನಾದರೂ ಪತನಗೊಂಡರೆ, ಮೇಲ್ನೋಟಕ್ಕೆ ಅದರ ನೇರ ಕಾರಣಕರ್ತ ಎಂಬ ಹಣೆಪಟ್ಟಿ ಶಿವಸೇನೆಯ ಹಿರಿಯ ನಾಯಕ ಏಕನಾಥ ಶಿಂಧೆಯ ಪಾಲಾಗುತ್ತದೆ. ಆದರೆ, ಬಾಳಾಠಾಕ್ರೆಯವರ ಕಟ್ಟಾ ಬೆಂಬಲಿಗ ಶಿಂಧೆ ಏಕಾಏಕಿ ತಮ್ಮದೇ ಸರಕಾರದ ವಿರುದ್ಧ ಬಂಡಾಯ ವೇಳಲು ಹಲವು ಕಾರಣಗಳಿವೆ. ಆ ಪೈಕಿ ಒಂದು “ಉದ್ಧವ್‌ ಠಾಕ್ರೆಯವರ ಪುತ್ರ ವ್ಯಾಮೋಹ’!

Advertisement

ಹೌದು, ಪುತ್ರ ಆದಿತ್ಯ ಠಾಕ್ರೆ ಮೇಲಿನ ವ್ಯಾಮೋಹವೇ ಉದ್ಧವ್‌ಗೆ ಮುಳುವಾಯಿತು ಎಂದು ವಿಶ್ಲೇಷಿಸಲಾಗು ತ್ತಿದೆ. ಶಿಂಧೆ ಮತ್ತು ಉದ್ಧವ್‌ ನಡುವಿನ ವೈಮನಸ್ಸು ಕಳೆದ ಕೆಲವು ದಿನಗಳಿಂದಲೇ ಹೊಗೆಯಾಡುತ್ತಿತ್ತು. ಈಗ ಅದು ಸ್ಫೋಟಗೊಂಡಿದೆ.

ಆದಿತ್ಯ ಠಾಕ್ರೆ ಅವರಿಗೆ ಉದ್ಧವ್‌ ನೀಡುತ್ತಿದ್ದ ಆದ್ಯ ತೆಯು ಸಹಜವಾಗಿಯೇ ಶಿಂಧೆಯ ಅಸಮಾಧಾನಕ್ಕೆ ಕಾರಣವಾಗಿತ್ತು.

ಏಕೆಂದರೆ ಪಕ್ಷದ ಪ್ರಭಾವಿ ನಾಯಕನಾಗಿ ರುವ ಶಿಂಧೆಗೆ “ಸಿಎಂ ಆಗುವ ಆಕಾಂಕ್ಷೆ’ ಹಿಂದಿನಿಂದಲೂ ಇದ್ದು, ತಮ್ಮ ಹಾದಿಗೆ ಆದಿತ್ಯ ಮುಳ್ಳಾಗಬಹುದು ಎಂಬ ಭೀತಿ ಅವರಲ್ಲಿ ಆವರಿಸಿತ್ತು. ಬೇರೆ ಬೇರೆ ಕಾರ್ಯಕ್ರಮ ಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿದ್ದರೂ, ಉದ್ಧವ್‌ ಮತ್ತು ಶಿಂಧೆ ಪರಸ್ಪರ ಮಾತನಾಡುತ್ತಿರಲಿಲ್ಲ. ಹತಾಶರಾಗಿದ್ದ ಶಿಂಧೆ ಅವರಿಗೆ ಪಕ್ಷದೊಳಗೇ ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿತ್ತು. ಈ ಪರಿಸ್ಥಿತಿಯ ಲಾಭ ಪಡೆಯುವಲ್ಲಿ ಬಿಜೆಪಿಯೂ ಸಫ‌ಲವಾಯಿತು ಎಂದು ಹೇಳಲಾಗಿದೆ.

ಒಡನಾಟ-ಒಡಕು: ನಗರಾಭಿವೃದ್ಧಿ ಮತ್ತು ಪಿಡಬ್ಲ್ಯುಡಿ ಸಚಿವರಾಗಿದ್ದರೂ ಇಲಾಖೆಯ ಸ್ವತಂತ್ರ ನಿರ್ವಹಣೆಗೆ ಅಡ್ಡಿಪಡಿಸಲಾಗುತ್ತಿತ್ತು, ಎಲ್ಲ ಪ್ರಮುಖ ನಿರ್ಧಾರಗಳಿಗೂ ಸಿಎಂ ಒಪ್ಪಿಗೆ ಬೇಕಿತ್ತು, ತಮ್ಮ ಇಲಾಖೆಯಲ್ಲಿ ಪದೇ ಪದೆ ಆದಿತ್ಯ ಮೂಗು ತೂರಿಸುತ್ತಿದ್ದರು ಎಂದು ಶಿಂದೆ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರು. ಇತ್ತ ಶಿವಸೇನೆ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿದ್ದರೆ, ಅತ್ತ ಬಿಜೆಪಿ ಮತ್ತು ಮಾಜಿ ಸಿಎಂ ದೇವೇಂದ್ರ ಫ‌ಡ್ನವೀಸ್‌ ಜತೆಗಿನ ಒಡನಾಟ ಶಿಂಧೆಯನ್ನು ಇಂದು “ಬಂಡಾಯ’ ನಾಯಕನ ಸ್ಥಾನದಲ್ಲಿ ನಿಲ್ಲಿಸಿದೆ.

Advertisement

ಹೊಟೇಲ್‌ ಸುತ್ತ ಸರ್ಪಗಾವಲು
ಮುಂಬಯಿಯಲ್ಲಿ ಆಡಳಿತರೂಢ ಎಂವಿಎ ನಾಯಕರು ಸರಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಬಂಡಾಯ ಶಾಸಕರು 280 ಕಿ. ಮೀ. ದೂರದ ಸೂರತ್‌ನ ಐಷಾರಾಮಿ ಹೊಟೇಲ್‌ನಲ್ಲಿ ತಂಗಿದ್ದಾರೆ. ಮಂಗಳವಾರ ಮುಂಜಾನೆಯಿಂದಲೂ ಹೊಟೇಲ್‌ ಸುತ್ತಲೂ 400ಕ್ಕೂ ಅಧಿಕ ಪೊಲೀಸರನ್ನು ನಿಯೋಜಿ ಸಲಾಗಿದೆ. ಅನಿರ್ದಿಷ್ಟಾವಾಧಿಗೆ ಹೊಟೇ ಲ್‌ನಲ್ಲಿ ಹೊಸ ಬುಕಿಂಗ್‌ ಕೂಡ ಸ್ಥಗಿತಗೊಳಿಸಲಾಗಿದೆ.

ಮಹಾರಾಷ್ಟ್ರ ಭವಿಷ್ಯ; 6 ಸಾಧ್ಯತೆಗಳು

1. ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡನೆ
-ಶಿಂಧೆ ಜತೆಗಿರುವ 37 ಶಾಸಕರು ಹೊಸ ಪಕ್ಷ ಸ್ಥಾಪಿಸಬಹುದು.
-ಬಿಜೆಪಿಗೆ ಬೆಂಬಲ ಘೋಷಿಸಿ, ಬಿಜೆಪಿ ಸಂಖ್ಯಾಬಲ 150ಕ್ಕೇರುವಂತೆ ಮಾಡಬಹುದು
-ಬಿಜೆಪಿ, ಮಿತ್ರಪಕ್ಷಗಳು ಬಹುಮತ ಪಡೆದು ಎಂವಿಎ ಸರಕಾರ ಪತನಗೊಳ್ಳಬಹುದು

2. ಬಂಡಾಯ ನಾಯಕರಿಂದ ವಿಪ್‌ ಉಲ್ಲಂಘನೆ
-ಶಿಂಧೆ ಜತೆಗಿನ ಶಾಸಕರು ವಿಪ್‌ ಉಲ್ಲಂ ಸಿ, ಎಂವಿಎ ವಿರುದ್ಧ ಮತ ಚಲಾಯಿಸಬಹುದು
-ಬಂಡಾಯ ನಾಯಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗ ದಿಂದ, ಮರು ಚುನಾವಣೆಯ ಅಗತ್ಯ ಎದುರಾಗಬಹುದು
-ಅನರ್ಹರಾಗುವ ಶಾಸಕರ ಸಂಖ್ಯೆ ಮೇಲೆ ಎಂವಿಎ ಸರಕಾರದ ಭವಿಷ್ಯ ನಿರ್ಣಯವಾಗುತ್ತದೆ

3.ಬಂಡಾಯ ಶಾಸಕರ ರಾಜೀನಾಮೆ
-ಅಗತ್ಯವಿರುವ 37 ಶಾಸಕರ ಬೆಂಬಲ ಪಡೆಯುವಲ್ಲಿ ಶಿಂಧೆ ವಿಫ‌ಲರಾಗಬಹುದು
-ಇತರ ಬಂಡಾಯ ಶಾಸಕರೊಂದಿಗೆ ಶಿಂಧೆಯೂ ರಾಜೀನಾಮೆ ನೀಡಬಹುದು.
-ವಿಧಾನಸಭೆಯ ಸಂಖ್ಯಾಬಲ ಕುಸಿತ; ರಾಜೀನಾಮೆ ನೀಡಿದವರ ಸಂಖ್ಯೆ ಮೇಲೆ ಸರಕಾರದ ಭವಿಷ್ಯ ನಿರ್ಧಾರವಾಗುತ್ತದೆ.

4. ಬಿಜೆಪಿ ಬೆಂಬಲದೊಂದಿಗೆ ಶಿಂಧೆ ಸಿಎಂ
-ಅನರ್ಹತೆಯ ಭೀತಿಯಿಂದ ಮುಕ್ತರಾಗಿ ಶಿಂಧೆಗೆ ಅಗತ್ಯವಿರುವ 37 ಶಾಸಕರ ಬೆಂಬಲ ಸಿಗಬಹುದು
-ಅವರು ಸ್ವಂತ ಪಕ್ಷ ಸ್ಥಾಪಿಸಬಹುದು ಅಥವಾ ಬಿಜೆಪಿ ಜತೆ ವಿಲೀನ ಮಾಡಿಕೊಳ್ಳಬಹುದು
-ನೂತನ ಮುಖ್ಯಮಂತ್ರಿಯಾಗಿ ಶಿಂಧೆ ಅಧಿಕಾರ ಸ್ವೀಕರಿಸಬಹುದು

5. ಶಿಂಧೆಯ ಬಂಡಾಯ ವಿಫ‌ಲ
-ಅನರ್ಹತೆಯ ಭೀತಿಯಿಂದ ಮುಕ್ತರಾಗಲು ಅಗತ್ಯವಿರುವ 37 ಶಾಸಕರ ಬೆಂಬಲ ಪಡೆಯುವಲ್ಲಿ ವಿಫ‌ಲರಾಗಬಹುದು
-ಬಂಡಾಯ ಸಾರಿರುವ ಕೆಲವು ಶಾಸಕರು ಮತ್ತೆ ಶಿವಸೇನೆಗೆ ಮರಳಬಹುದು
-ಹೀಗಾದರೆ ಎಂವಿಎ ಸರಕಾರಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ

6. ರಾಷ್ಟ್ರಪತಿ ಆಡಳಿತ ಹೇರಿಕೆ
-ರಾಜಕೀಯ ಅಸ್ಥಿರತೆ ಕುರಿತು ಕೇಂದ್ರ ಸರಕಾರಕ್ಕೆ ರಾಜ್ಯಪಾಲರಿಂದ ವರದಿ ಸಲ್ಲಿಕೆಯಾಗಬಹುದು
-ಕೇಂದ್ರ ಸರಕಾರವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬಹುದು.

ಪುಣೆಯ ಪ್ರಭಾವಿ ನಾಯಕ ಏಕನಾಥ ಶಿಂಧೆ
ಈಗ ಎಲ್ಲರ ಕಣ್ಣು ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ್‌ ಅಘಾಡಿ ಸರಕಾರವನ್ನು ಅಲುಗಾಡಿಸುತ್ತಿರುವ ಶಿವಸೇನೆಯ ಹಿರಿಯ ನಾಯಕ ಏಕನಾಥ ಶಿಂಧೆ ಕಡೆ ನೆಟ್ಟಿದೆ.

ಥಾಣೆ ಭಾಗದಲ್ಲಿ ಶಿವಸೇನೆಯನ್ನು ಬಲಪಡಿಸಿದ ಹೆಗ್ಗಳಿಕೆ ಯಿರುವ ಶಿಂಧೆ ಈಗ ಬಂಡಾಯ ನಾಯಕನಾಗಿ ಗುರುತಿಸಿ ಕೊಂಡಿದ್ದಾರೆ. ಥಾಣೆ ಭಾಗದಲ್ಲಿ ಪಕ್ಷದ ಬಲವರ್ಧನೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದ ನಾಯಕ ಇವರು.

2004, 2009, 2014 ಮತ್ತು 2019ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. 2014ರಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಮೈತ್ರಿ ಮುರಿದು ಬಿದ್ದ ಬಳಿಕ ಶಿಂಧೆಯವರನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿನ ವಿಪಕ್ಷ ನಾಯಕನ ಸ್ಥಾನಕ್ಕೆ ನೇಮಿಸಲಾಗಿತ್ತು. ಸದ್ಯ ಇರುವ ಸರಕಾರದಲ್ಲಿ ಅವರು ಸಂಪುಟ ದರ್ಜೆ ಸಚಿವರೂ ಹೌದು. ಲೋಕೋಪಯೋಗಿ (ಸಾರ್ವಜನಿಕ ಉದ್ದಿಮೆ) ಮತ್ತು ನಗರಾಭಿವೃದ್ಧಿಯ ಸಚಿವರೂ ಆಗಿದ್ದಾರೆ.

1997ರಲ್ಲಿ ಅವರು ಥಾಣೆ ಮಹಾನಗರ ಪಾಲಿಕೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಅವರು ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್‌ ಠಾಕ್ರೆ ಅವರ ಕಟ್ಟಾ ಬೆಂಬಲಿಗ. ಅವರ ಪುತ್ರ ಶ್ರೀಕಾಂತ ಶಿಂಧೆ ಎಲುಬು ತಜ್ಞರಾಗಿದ್ದು, ಕಲ್ಯಾಣ್‌ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ. ಅವರ ಸಹೋದರ ಪ್ರಕಾಶ್‌ ಶಿಂಧೆ ಕೂಡ ರಾಜಕೀಯದಲ್ಲಿ ದ್ದಾರೆ ಮತ್ತು ಪಾಲಿಕೆ ಸದಸ್ಯರಾಗಿದ್ದಾರೆ.

ಅಸಮಾಧಾನ ಏಕೆ?: ಏಕನಾಥ ಶಿಂಧೆಯವರಿಗೆ ಹೆಚ್ಚಾ ಕಡಿಮೆ ಮಹಾರಾಷ್ಟ್ರದ ಎಲ್ಲ ರಾಜಕೀಯ ಪಕ್ಷಗಳ ಜತೆಗೆ ಉತ್ತಮ ಬಾಂಧವ್ಯ ಇದೆ. ಇತ್ತೀಚಿನ ದಿನಗಳಲ್ಲಿ ಶಿವಸೇನೆಯ ಹಾಲಿ ನಾಯಕತ್ವ ಅವರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದೆ ಎಂಬ ಕೋಪ ಇದೆ ಎಂದು ಅವರ ಆಪ್ತ ವಲಯ ಪ್ರತಿಪಾದಿಸುತ್ತಿದೆ. ಅವರಿಗೆ ಶಿವಸೇನೆಯ ಕೆಲವು ಶಾಸಕರ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next