Advertisement
ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ ಎಂಬ ಮಾತು ಕೇವಲ ಮಾತಿಗೆ ಸೀಮಿತವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲವೂ ಹೈಕಮಾಂಡ್ ಅಥವಾ ವರಿಷ್ಠರದೇ ತೀರ್ಮಾನ ಇದರಲ್ಲಿ ಯಾವ ಪಕ್ಷವೂ ಹೊರತಲ್ಲ.
Related Articles
Advertisement
ಹರಸಾಹಸದ ನಡುವೆ ರಚನೆಯಾದ ಬಿಜೆಪಿ ಸರಕಾರಕ್ಕೆ ಎರಡು ವರ್ಷ ಪ್ರವಾಹ, ಕೊರೊನಾ ಸವಾಲಾಗಿ ಪರಿಣಮಿಸಿತು. ಜತೆಗೆ ಆಂತರಿಕ ಸಂಘರ್ಷದಿಂದ ಮುಖ್ಯಮಂತ್ರಿ ಬದಲಾವಣೆಯೂ ಆಯಿತು. ಇದೀಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು ಮತ್ತೆ ಅದೇ ವರ್ತನೆಗಳು ಪುನರಾವರ್ತನೆಯಾಗುತ್ತಿವೆ.ಅತೃಪ್ತ ಶಾಸಕರ ಬಹಿರಂಗ ಹೇಳಿಕೆ, ರಹಸ್ಯ ಮಾತುಕತೆ, ಖಾತೆ ಹಂಚಿಕೆ ಬಗ್ಗೆ ಆಕ್ರೋಶ, ರಾಜೀನಾಮೆ ನೀಡಲು ಮುಂದಾಗುವುದು ಇವೆಲ್ಲವೂ ಯಾವುದೇ ಸರಕಾರಕ್ಕೆ ಶೋಭೆ ತರುವ ವಿಷಯವಲ್ಲ. ಪಕ್ಷದ ಹಿರಿಯರು ಸಮಸ್ಯೆ ಬಗೆಹರಿಸಿ ಸುಸೂತ್ರವಾಗಿ ಆಡಳಿತ ಯಂತ್ರ ನಡೆಯುವಂತೆ ನೋಡಿಕೊಳ್ಳಬೇಕು.
ವಿಧಾನಸಭೆ ಚುನಾವಣೆಗೆ 21 ತಿಂಗಳು ಬಾಕಿ ಇದ್ದು ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ನಿವಾರಣೆ ಮಾಡಿ ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಗಮನಹರಿಸಬೇಕು. ಇಲ್ಲವಾದರೆ ಈ ಸರಕಾರವು ಎಷ್ಟು ದಿನವೋ ಎಂಬ ತೂಗುಗತ್ತಿ ನೇತಾಡುವಂತಾದರೆ ಅಭಿವೃದ್ಧಿ ಮರೀಚಿಕೆಯಾಗುತ್ತದೆ.
ಇದಷ್ಟೇ ಅಲ್ಲ, ಸದ್ಯ ರಾಜ್ಯ ಕೊರೊನಾ ಮೂರನೇ ಅಲೆಯ ಅಪಾಯ ಎದುರಿಸುತ್ತಿದೆ. ಇದಕ್ಕೆ ಈಗಿನಿಂದಲೇ ಸಜ್ಜಾಗಬೇಕಿದೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಎರಡನೇ ಅಲೆಯಲ್ಲಿ ಆದ ಆಪಾಯವೇ ಮರುಕಳಿಸುವ ಸಾಧ್ಯತೆಯೂ ಇದೆ. ಹಾಗೆಯೇ ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ತಲೆದೋರಿತ್ತು. ಈಗಷ್ಟೇ ಅಲ್ಲಿನ ಜನ ಚೇತರಿಸಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರಾಜಕೀಯ ಮೇಲಾಟಗಳು ನಡೆದು, ಸರಕಾರವೇ ಅಪಾಯದಲ್ಲಿದೆ ಎಂಬ ಭಾವನೆ ಬರಬಾರದು. ಇದಕ್ಕೆ ಸರಕಾರವೂ ಆಸ್ಪದ ಕೊಡಬಾರದು.