Advertisement

ಅಥಣಿಯಲ್ಲಿ ಮತ್ತೆ ರಾಜಕೀಯ ಲೆಕ್ಕಾಚಾರ

10:57 AM Jul 28, 2019 | Team Udayavani |

ಅಥಣಿ: ಅಥಣಿ ಶಾಸಕ ಮಹೇಶ ಕುಮಟಳ್ಳಿ ಅನರ್ಹಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಕಂಡು ಬರುತ್ತಿವೆ.

Advertisement

ಬರಿದಾಗಿರುವ ಶಾಸಕ ಸ್ಥಾನ ತುಂಬಲು ಅಥಣಿ ಕಾಂಗ್ರೆಸ್‌ ಮುಂದಾಗಿದ್ದು, ಮುಖಂಡರಲ್ಲಿ ಪೈಪೋಟಿ ಕೂಡ ಶುರುವಾಗಿದೆ. ರವಿವಾರ ನಗರಕ್ಕೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಮತ್ತು ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಅಥಣಿಗೆ ಭೇಟಿ ನೀಡಿ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರ ವಿರುದ್ಧ ಕಾರ್ಯಕರ್ತರ ಆಕ್ರೋಶ ಭುಗಿಲೇಳುವ ಸಂಭವ ಹೆಚ್ಚಿದೆ.

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿದಿರುವುದು ಬಿಜೆಪಿ ಪಾಳಯದಲ್ಲಿ ಖುಷಿ ತಂದರೆ ಇನ್ನೊಂದೆಡೆ ಮಹೇಶ ಕುಮಟಳ್ಳಿ ಬಿಜೆಪಿಗೆ ಬರುತ್ತಿರುವುದು ಕಳವಳದ ಸಂಗತಿಯಾಗಿದೆ.

ಒಟ್ಟಾರೆ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿರುವುದಂತೂ ಸತ್ಯ. ಒಂದೆಡೆ ಮಹೇಶ ಕುಮಟಳ್ಳಿ ತಾವು ಬಿಜೆಪಿ ಟಿಕೆಟ್ ಪಡೆದರೆ ಹೇಗೆ ಎಂದು ಕಾಂಗ್ರೆಸಿನ ತಮ್ಮ ಹಿತೈಷಿಗಳಿಗೆ ಕರೆ ಮಾಡಿ ಕೇಳುತ್ತಿದ್ದರೆ ಅತ್ತ ಬಿಜೆಪಿಯ ಲಕ್ಷ್ಮ್ಮಣ ಸವದಿ ಕೂಡಾ ಮಹೇಶ ಕುಮಟಳ್ಳಿ ಪಕ್ಷಕ್ಕೆ ಬಂದರೆ ಮುಂದಿನ ನಡೆ ಏನು ಎಂಬ ಕುರಿತು ತಮ್ಮ ಆಪ್ತರೊಂದಿಗೆ ಗೌಪ್ಯವಾಗಿ ಚರ್ಚೆ ನಡೆಸಿರುವುದು ಕೇಳಿ ಬರುತ್ತಿದೆ.

ಇತ್ತ ತಮ್ಮ ಗೆಲುವಿಗೆ ಕಾರಣಕರ್ತ, ತಮಗೊಂದು ಸ್ಥಾನಮಾನ ಕಲ್ಪಿಸಿಕೊಟ್ಟ ಗೋಕಾಕಿನ ಸಾಹುಕಾರ ರಮೇಶ ಜಾರಕಿಹೊಳಿ ಅವರ ಉಪಕಾರವನ್ನು ಮರೆಯಬಾರದು ಎಂಬ ನಿಷ್ಠೆಯಿಂದ ತಮ್ಮ ಶಾಸಕ ಸ್ಥಾನ ಬಿಟ್ಟು ಕೊಟ್ಟು ಅನರ್ಹಗೊಂಡು ಅಜ್ಞಾತ ವಾಸದಲ್ಲಿದ್ದರೂ ಕುಮಟಳ್ಳಿ ರಮೇಶ ಜಾರಕಿಹೊಳಿ ಅವರ ಬೆನ್ನ ಹಿಂದೆಯೇ ನಿಂತಿದ್ದು ಶ್ಲಾಘನೀಯ ಎನ್ನುವುದು ಸಾರ್ವಜನಿಕರ ಮಾತು.

Advertisement

ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಮಹಾಲಕ್ಷ್ಮ್ಮಿ ದೇವಸ್ಥಾನಕ್ಕೆ ದರ್ಶನ ಪಡೆಯಲು ಬಂದಾಗ ಅವರೊಂದಿಗೆ ಕಾಂಗ್ರೆಸಿನ ಕೆಪಿಸಿಸಿ ಸದಸ್ಯ ಕಿರಣಗೌಡ ಪಾಟೀಲ ಹಾಗೂ ಅಥಣಿ ಬ್ಲಾಕ್‌ ಅಧ್ಯಕ್ಷ ಅರ್ಷದ ಗದ್ಯಾಳ ಇರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಈ ಇಬ್ಬರ ನಾಯಕರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವರಿಗೆ ಸಾಥ್‌ ಕೊಟ್ಟ ಮತ್ತೂಬ್ಬ ಮುಖಂಡ ಎಸ್‌.ಎಂ.ನಾಯಿಕ ಅವರ ಮೇಲೆ ಕೂಡಾ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.

ಹದಿನೈದು ವರ್ಷಗಳ ನಂತರ ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಮಹೇಶ ಕುಮಟಳ್ಳಿ ಅವರನ್ನು ಆಯ್ಕೆ ಮಾಡಿ ಅಭಿವೃದ್ಧಿ ಅಪೇಕ್ಷಿಸಿದ ಕ್ಷೇತ್ರದ ಜನತೆಗೆ ನಿರಾಶೆಯಾಗಿದೆ. ಮಹೇಶ ಕುಮಟಳ್ಳಿ ಪಕ್ಷದ ಯಾವುದೇ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾರದೇ ಹಠಾತ್‌ ನಿರ್ಧಾರ ತೆಗೆದುಕೊಂಡಿರುವುದು ಕಾಂಗ್ರೆಸ್‌ ಪಕ್ಷದಲ್ಲೆ ಆಕ್ರೋಶ ಭುಗಿಲೆದ್ದಿದೆ. ಕಾಂಗ್ರೆಸ್‌ ಪಕ್ಷದಿಂದ ಅನರ್ಹಗೊಂಡು ಅಥಣಿ ಕ್ಷೇತ್ರದಲ್ಲಿ ಕುಮಟಳ್ಳಿ ಇತಿಹಾಸ ನಿರ್ಮಿಸಿದರು ಎಂದು ಮುಖಂಡ ಗಜಾನನ ಮಂಗಸೂಳಿ ಆರೋಪಿಸಿದ್ದಾರೆ.

 

•ವಿಜಯಕುಮಾರ ಅಡಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next