Advertisement

ರಾಜಕೀಯ, ಆರ್ಥಿಕ ಅಸ್ಪೃಶ್ಯತೆ ಇಂದಿಗೂ ಜೀವಂತ: ಆಯನೂರು ಮಂಜುನಾಥ್‌

10:34 AM Mar 13, 2020 | Sriram |

ವಿಧಾನ ಪರಿಷತ್‌ : ಸಂವಿಧಾನ ಜಾರಿಗೆ ಬಂದು ಏಳು ದಶಕ ಕಳೆದರೂ ರಾಜಕೀಯ ಹಾಗೂ ಆರ್ಥಿಕ ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದೆ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌ ಕಳವಳ ವ್ಯಕ್ತಪಡಿಸಿದರು.

Advertisement

ಸಂವಿಧಾನದ ಮೇಲಿನ ಚರ್ಚೆಯ ವೇಳೆ ವಿಷಯ ಮಂಡಿಸಿದ ಅವರು, ರೂಢಿಯಾಗಿ ಬಂದಿರುವ ಅಸ್ಪೃಶ್ಯತೆ ಸಮಾಜಕ್ಕೆ ಮಾರಕವಾಗಿದೆ. ರಾಜಕೀಯ ಹಾಗೂ ಆರ್ಥಿಕ ರೂಪದಲ್ಲಿ ಇಂದಿಗೂ ಆಸ್ಪೃಶ್ಯತೆ ಆಚರಣೆ ನಡೆಯುತ್ತಿದೆ. ಹಣವಿದ್ದ ವ್ಯಕ್ತಿಗೆ ಗೌರವ ಸಿಗುತ್ತಿದೆ. ಬಡವ-ಶ್ರೀಮಂತನೆಂಬ ತಾರತಮ್ಯ ಮಿತಿ ಮೀರುತ್ತಿದೆ. ಹಣವಿದ್ದವರು ಗಾಂಧಿನಗರ, ಕೆಳವರ್ಗ ಅಥವಾ ಬಡವರಿಗೆ ಬಾಪೂಜಿ ನಗರ ಎಂದು ನಾವೇ ಪ್ರತ್ಯೇಕಿಸಿದ್ದೇವೆ. ರಾಜಕೀಯದಲ್ಲೂ ಇದು ಜೀವಂತವಾಗಿದೆ ಎಂದರು.

ಕಾನೂನನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದೇವೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವು ಕಾನೂನಿನ ಪುಸ್ತಕವಲ್ಲ, ಸಮಾಜ ಸುಧಾರಣೆಯ ಮಹನ್‌ ಗ್ರಂಥ. ಪ್ರತಿಯೊಬ್ಬ ವ್ಯಕ್ತಿಗೂ ಧರ್ಮಾಧಾರಿತವಾಗಿ ಅಥವಾ ಜಾತಿ ಆಧಾರಿತವಾಗಿ ಬದುಕ ಬಹುದು. ಆದರೆ, ಸರ್ಕಾರಗಳು ಧರ್ಮ, ಜಾತಿ ಮೀರಿ ನಡೆಯಬೇಕು ಎಂಬುದನ್ನು ಸ್ಪಷ್ಟ ಶಬ್ಧಗಳಲ್ಲಿ ಉಲ್ಲೇಖೀಸಲಾಗಿದೆ. ಅಂಬೇಡ್ಕರ್‌ ಅವರು ದಲಿತ ನಾಯಕರಲ್ಲ ಮತ್ತು ಕೇವಲ ದಲಿತರಿಗಾಗಿ ಸಂವಿಧಾನ ನೀಡಿಲ್ಲ. ಬದಲಾಗಿ ಸರ್ಕಾರಗಳು, ಜನ ಸಾಮಾನ್ಯರು ಹೇಗಿರಬೇಕು ಎಂಬುದನ್ನು ದೂರದೃಷ್ಟಿತ್ವ ಹೊಂದಿಕೊಂಡು ರೂಪಿಸಿದ್ದಾರೆ ಮತ್ತು ಸರ್ಕಾರಗಳನ್ನು ನಿಯಂತ್ರಿಸುವ ಶಕ್ತಿಯೂ ಇದಕ್ಕೆ ಇದೆ ಎಂದರು.

ಸ್ವಾಯತ್ತ ಸಂಸ್ಥೆಗಳ ಹಿತ ಕಾಪಾಡಿ :
ಸಿಬಿಐ, ಇಡಿ ಸಹಿತವಾಗಿ ಸ್ವಾಯುತ್ತ ಸಂಸ್ಥೆಗಳನ್ನು ಕಾಪಾಡದಿದ್ದರೆ ಪ್ರಜಾತಂತ್ರ ವ್ಯವಸ್ಥೆ ನಾಶವಾಗುತ್ತದೆ. ಪ್ರಜಾಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಒಂದಕ್ಕೊಂದು ಪೂರಕವಾಗಿವೆ. ಆದರೆ, ಒಂದು ಅಂಗದ ಅಧಿಕಾರವನ್ನು ಮತ್ತೂಂದು ಅಂಗ ಆಕ್ರಮಿಸಲು ಸಾಧ್ಯವಿಲ್ಲ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓಟ್‌ಗೆ ಮೌಲ್ಯ ಬಂದಿದೆ. ಮನುಷ್ಯರಿಗೆ ಮೌಲ್ಯ ಬಂದಿದೆಯಾ? ದಲಿತರ ಕೇರಿಗಳಿಗೆ ಲೋಟ ಹಿಡಿದುಕೊಂಡು ಹೋಗುವ ರಾಜಕಾರಣಿಗಳು ಇದ್ದಾರೆ. ಇದು ಸಂವಿಧಾನದ ಆಶಯ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ಗೆ ಮಾಡುವ ಅವಮಾನ ಎಂದು ವಿಷಾದಿಸಿದರು.

Advertisement

ಇತ್ತೀಚೆಗೆ ನ್ಯಾಯಾಂಗ ಲಕ್ಷ್ಮಣ ರೇಖೆ ದಾಟಿ ಅಧಿಕಾರ ಚಲಾಯಿಸುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸುತ್ತಿದ್ದೇವೆ. ಸಂವಿಧಾನ ರಚನೆಯಾಗಿ 70 ವರ್ಷ ಕಳೆದರೂ ಸಮರ್ಥವಾದ ಒಂದು ಕಾನೂನು ರೂಪಿಸಲು ಅಸಮರ್ಥರಾಗಿದ್ದೇವೆ. ಪ್ರತಿ ಬಾರಿ ಕಾನೂನಿಗೆ ತಿದ್ದುಪಡಿ ಮಾಡುತ್ತೇವೆ. ಆದರೆ, ಸಂವಿಧಾನವನ್ನು ಯಾವ ಮಾದರಿಯಲ್ಲಿ ರಚಿಸಿರಬಹುದು ಮತ್ತು ಅವರ ಜ್ಞಾನ ಎಂತಹದ್ದು ಎಂಬುದನ್ನು ಇದರಿಂದ ಊಹಿಸಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next