Advertisement

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪ್ರಕರಣ: ರಾಜಕೀಯ ಲಾಭದ ಕೊಯ್ಲಿಗೆ ‘ಬಿತ್ತನೆ’

03:34 AM Aug 17, 2020 | Hari Prasad |

ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಒಂದು ವಿದ್ಯಮಾನ ಮೇಲ್ನೋಟಕ್ಕೆ ಅಪರಾಧ ಕೃತ್ಯವಾದರೂ ರಾಜ್ಯದ ಮಟ್ಟಿಗೆ ರಾಜಕೀಯವಾಗಿ ಭವಿಷ್ಯದಲ್ಲಿ ಮೂರೂ ಪಕ್ಷಗಳ ಲಾಭ-ನಷ್ಟದ ಲೆಕ್ಕಾಚಾರಗಳಿಗೂ ಮುನ್ನುಡಿ ಬರೆದಂತಿದೆ.

Advertisement

ಕಾಂಗ್ರೆಸ್‌ ಶಾಸಕರೊಬ್ಬರ ನಿವಾಸ ಹಾಗೂ ಏಕಕಾಲದಲ್ಲಿ ಎರಡು ಪೊಲೀಸ್‌ ಠಾಣೆಗಳ ಮೇಲೆ ನಡೆದ ದಾಳಿಯನ್ನು ಕೇವಲ ಅಪರಾಧ ಪ್ರಕರಣದ ದೃಷ್ಟಿಕೋನದಲ್ಲಿ ನೋಡಲು ಆಗುವುದಿಲ್ಲ.

ಈ ಘಟನೆಯು ಕಾಂಗ್ರೆಸ್‌ ಹಾಗೂ ಎಸ್‌ಡಿಪಿಐ ನಡುವಿನ ರಾಜಕೀಯ ಸಂಘರ್ಷದ ಹಿನ್ನೆಲೆಯಲ್ಲಿ ಪೂರ್ವ ನಿಯೋಜಿತ, ವ್ಯವಸ್ಥಿತ ಸಂಚಿನ ಭಾಗವಾಗಿ ನಡೆದ ಕೃತ್ಯ ಎಂಬುದು ಬಿಜೆಪಿ ಹಾಗೂ ಸರಕಾರದ ಸಚಿವರ ನೇರ ಆರೋಪ ರಾಜಕೀಯ ದಿಕ್ಸೂಚಿಯನ್ನೇ ಬದಲಿಸಿದೆ.

ರಾಜಕೀಯವಾಗಿ ಲಾಭ ಮಾಡಿಕೊಳ್ಳುವ ಹಾಗೂ ಪ್ರತ್ಯಕ್ಷ- ಪರೋಕ್ಷವಾಗಿ ಮತ್ತೊಬ್ಬರಿಗೆ ನಷ್ಟವುಂಟು ಮಾಡುವ ‘ಬಿತ್ತನೆ’ ಪ್ರಾರಂಭವಾಗಿದೆ. ಮುಂದಿನ ವಿಧಾನಸಭೆ ಚುನಾವಣೆ ಅದಕ್ಕೆ ಮುಂಚೆ ನಡೆಯ ಬಹುದಾದ ಬಿಬಿಎಂಪಿ ಚುನಾವಣೆಯಲ್ಲಿ ಖಂಡಿತವಾಗಿಯೂ ಇದರ ‘ಔಟ್‌ಕಮ್‌’ ಕಾಣಲಿದೆ.

ಸರಕಾರ ಇಂತಹ ಸಂದರ್ಭ ಏನು ಮಾಡಬಹುದೋ ಅದನ್ನು ಮಾಡುತ್ತಿದೆ. ಜೆಡಿಎಸ್‌ ಖಡಕ್‌ ನಿಲುವು ಪ್ರದರ್ಶಿಸಿದೆ. ಆದರೆ ಕಾಂಗ್ರೆಸ್‌ನ ಸ್ಥಿತಿ ಮಾತ್ರ ಗೊಂದಲಮಯವಾಗಿದೆ. ರಾಜಕೀಯ ಸಂಘಟನೆಯನ್ನು ದೂರಬೇಕಾ? ಕೃತ್ಯ ಎಸಗಿದವರನ್ನು ಮಾತ್ರ ಟಾರ್ಗೆಟ್‌ ಮಾಡಬೇಕಾ? ಒಂದೊಮ್ಮೆ ಹಾಗೆ ಮಾಡಿದರೂ ಒಂದು ಸಮುದಾಯ ಮುನಿಸಿಕೊಳ್ಳಬಹುದಾ? ಎಂಬ ಆತಂಕ ಕಾಂಗ್ರೆಸ್‌ಗೆ ಇದ್ದಂತಿದೆ.

Advertisement

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಕಾಂಗ್ರೆಸ್‌ ಪಕ್ಷವು ಘಟನೆಯನ್ನು ಖಂಡಿಸುತ್ತಿದೆ. ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೂ ಒತ್ತಾಯಿಸುತ್ತಿದೆ. ಆದರೆ ತಮ್ಮದೇ ಶಾಸಕನ ನಿವಾಸದ ಮೇಲೆ ನಡೆದ ದಾಳಿ ಹಾಗೂ ಕೃತ್ಯದ ತೀವ್ರತೆಗೆ ತಕ್ಕಂತೆ ಯಾವ ಪ್ರಮಾಣದಲ್ಲಿ ಆಕ್ರಮಣಕಾರಿ ಆಗಬೇಕಿತ್ತೋ ಅಷ್ಟು ಆಗುತ್ತಿಲ್ಲ. ಎಲ್ಲೋ ಒಂದು ಕಡೆ ಸಾಫ್ಟ್ ಆಗಿದೆ ಎಂಬಂತೆ ಕಂಡು ಬರುತ್ತಿದೆ.

ಗೋಲಿಬಾರ್‌ಗೆ ಬಲಿಯಾದವರು ಅಮಾಯಕರು ಎಂಬ ಅರ್ಥದಲ್ಲಿ ಆ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆಗಳು ಪಕ್ಷಕ್ಕೆ ಬೇರೆ ರೀತಿಯ ಡ್ಯಾಮೇಜ್‌ ಮಾಡುತ್ತಿವೆ. ಏನೇ ಮಾತನಾಡಿದರೂ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗ ಬಹುದಾ? ಎಂಬ ಆತಂಕವೂ ಇದೆ. ಆದರೆ ಅದೇ ಸಮುದಾಯದ ಮತ ಬ್ಯಾಂಕ್‌ ತನ್ನತ್ತ ಸೆಳೆಯಲು ಮತ್ತೊಂದು ರಾಜಕೀಯ ಸಂಘಟನೆಗೆ ಅವಕಾಶ ಕೊಡಲು ಕಾಂಗ್ರೆಸ್‌ ಗೆ ಇಷ್ಟವಿಲ್ಲ. ಹೀಗಾಗಿ ಒಂದು ರೀತಿಯಲ್ಲಿ ಇಕ್ಕಟ್ಟಿಗೂ ಸಿಲುಕಿದೆ.

ಇದರ ಮಧ್ಯೆಯೂ ಮಾಜಿ ಗೃಹ ಸಚಿವರೂ ಆಗಿರುವ ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿಯ ವರು ಎಸ್‌ಡಿಪಿಐಯನ್ನು ಮೊದಲು ನಿಷೇಧ ಮಾಡಿ. ಅವರಿಂದ ನಮ್ಮ ಓಟ್‌ಬ್ಯಾಂಕ್‌ ವಿಭಜನೆ ಆಗುತ್ತಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆ ಧೈರ್ಯ ಪ್ರಮುಖ ನಾಯಕರು ತೋರುತ್ತಿಲ್ಲ.

ಆದರೆ ಜೆಡಿಎಸ್‌ ಈ ವಿಚಾರದಲ್ಲಿ ಖಡಕ್‌ ನಿಲುವು ಹೊಂದಿದೆ. ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ, ‘ಧರ್ಮದ ಹೆಸರಿನಲ್ಲಿ ಯಾರೇ ಗೂಂಡಾಗಿರಿ ಮಾಡಿ ಕಾನೂನು ಕೈಗೆತ್ತಿಕೊಂಡರೂ ಮುಲಾಜಿಲ್ಲದೆ ಮಟ್ಟ ಹಾಕಬೇಕು. ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು’ ಎಂದು ಟ್ವೀಟ್‌ ಮಾಡಿದ್ದರು.

ಮನೆಯ ಮೇಲಿನ ದಾಳಿ ವಿಚಾರದಲ್ಲಿ ಖುದ್ದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಉಗ್ರವಾಗಿ ಮಾತನಾಡುವ ಧೈರ್ಯ ತೋರಲು ಆಗದಂತಾಗಿದೆ. ಯಾವುದೋ ಕೈಗಳು ಕಟ್ಟಿ ಹಾಕಿದಂತಿದೆ.

ರಾಜಕೀಯ ಲಾಭದ ಗುರಿ
ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪ್ರಕರಣಗಳಲ್ಲಿ ಮೂರೂ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪ, ವಾಕ್ಸಮರ ನೋಡಿದರೆ ಇನ್ನೇನು ಚುನಾವಣೆ ಬಂದೇ ಬಿಡ್ತಾ ಎಂಬ ಅನುಮಾನ ಕಾಡದೇ ಇರದು. ಆದರೆ, ಬಿಜೆಪಿ ಮಾತ್ರ ಪ್ರತಿ ವಿದ್ಯಮಾನ ಅದರ ಪ್ರತ್ಯಕ್ಷ- ಪರೋಕ್ಷ ಪರಿಣಾಮಗಳನ್ನು ಸಮರ್ಥವಾಗಿ ಬಳಸಿ ಕೊಳ್ಳುವ ಜಾಣ್ಮೆ ತೋರುತ್ತಿದೆ. ಕಳೆದ ನವೆಂಬರ್‌ನಲ್ಲಿ ಮೈಸೂರಿನ ನರಸಿಂಹ ರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ, ಇದೀಗ ಬೆಂಗಳೂರಿನ ಪುಲಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲಿನ ದಾಳಿ ಎರಡಕ್ಕೂ ಎಸ್‌ಡಿಪಿಐ ನಂಟಿರುವುದಾಗಿ ಬಿಜೆಪಿ ಆರೋಪಿಸಿದೆ.

ಇದೀಗ ಶ್ರೀನಿವಾಸಮೂರ್ತಿ ಅವರ ನಿವಾಸದ ಮೇಲಿನ ದಾಳಿ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಎಸ್‌ಡಿಪಿಐಗೆ ಸೇರಿದವರು ಇರುವ ಆರೋಪ ಇದೆ. ಕಾಂಗ್ರೆಸ್‌ ಶಾಸಕರು ಇರುವ ಕಡೆಯೇ ಇಂತಹ ಘಟನೆಗಳು ನಡೆಯುತ್ತಿರುವುದನ್ನು ಆಡಳಿತಾರೂಢ ಬಿಜೆಪಿ ಬೆಟ್ಟು ಮಾಡಿ ತೋರಿಸುತ್ತಿದೆ. ಜತೆಗೆ, ಹಿಂದೆ ರಾಜ್ಯದಲ್ಲಿ ನಡೆದಿರುವ 17 ಪ್ರಕರಣಗಳಲ್ಲಿಯೂ ಎಸ್‌ಡಿಪಿಐಗೆ ಸೇರಿದವರ ಕೈವಾಡ ಇತ್ತು ಎಂಬ ನೇರ ಆರೋಪವನ್ನೂ ಮಾಡುತ್ತಿದೆ. ಈ ಮೂಲಕ ಹೊಸ ಹಾಗೂ ಹಳೆಯ ಘಟನೆ ಮೆಲುಕು -ತಳುಕು ಹಾಕಿ ಒಂದೇ ಕಲ್ಲಿನಲ್ಲಿ ಎರಡು ಬೇಟೆಯ ಗುರಿ ಇಟ್ಟಿದೆ.

ಅಚ್ಚರಿಯ ಬೆಳವಣಿಗೆ
ರಾಜ್ಯದಲ್ಲಿ ಎಸ್‌ಡಿಪಿಐ ರಾಜಕೀಯ ಹಾದಿ ನೋಡುವುದಾದರೆ, 2013ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಸರ್ವಜ್ಞ ನಗರದಲ್ಲಿ 11,161, ಪುಲಕೇಶಿನಗರದಲ್ಲಿ 5,431 ಹಾಗೂ 2013ರಲ್ಲಿ ಚಿಕ್ಕಪೇಟೆಯಲ್ಲಿ 4,821, 2018ರಲ್ಲಿ 11,700 ಮತಗಳನ್ನು ಎಸ್‌ಡಿಪಿಐ ಅಭ್ಯರ್ಥಿ ಗಳಿಸಿದ್ದರು. ಕುತೂಹಲದ ವಿಚಾರ ಎಂದರೆ 2013-2018ರಲ್ಲಿ ಶಿವಾಜಿನಗರ, ಶಾಂತಿನಗರ, ಸರ್ವಜ್ಞ ನಗರ, ಚಾಮರಾಜಪೇಟೆ ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ಸ್ಪರ್ಧೆ ಮಾಡಿರಲಿಲ್ಲ.

ಕಾಂಗ್ರೆಸ್‌ನ ಕೆಲವು ನಾಯಕರು ವ್ಯವಸ್ಥಿತವಾಗಿ ಎಸ್‌ಡಿಪಿಐ ಅಭ್ಯರ್ಥಿಗಳು ಕಣದಲ್ಲಿ ಇಲ್ಲದಂತೆ ನೋಡಿಕೊಂಡಿದ್ದರು ಎಂಬ ಮಾತುಗಳು ಇವೆ. ಎಸ್‌ಡಿಪಿಐ ಚುನಾವಣೆ ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದಂತೆ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಮತ ಬ್ಯಾಂಕ್‌ ಆಗಿದ್ದ ಆನಂತರ ಜನತಾಪಕ್ಷ, ಜನತಾದಳ, ಜೆಡಿಎಸ್‌ಗೂ ಸ್ವಲ್ಪ ಮಟ್ಟಿಗೆ ಕಾಲಕ್ಕೆ ತಕ್ಕಂತೆ ಹಂಚಿಕೆಯಾಗುತ್ತಿದ್ದ ಅಲ್ಪಸಂಖ್ಯಾಕರ ಮತಗಳು ‘ಮಾರ್ಗ ಬದಲಾವಣೆ’ಯಾದವು.
ಹತ್ತು ವರ್ಷಗಳಲ್ಲಿ ಕರ್ನಾಟಕದ ಮಟ್ಟಿಗೆ ಎಸ್‌ಡಿಪಿಐ ಬೆಳವಣಿಗೆ ಅಚ್ಚರಿಯೂ ಹೌದು.

ಒಂದು ಹಂತದಲ್ಲಿ ಬಿಎಸ್‌ಪಿ ಹಾಗೂ ಎಸ್‌ಡಿಪಿಐ ಕಾಂಗ್ರೆಸ್‌ನ ನಿದ್ದೆಗೆಡಿಸಿದ್ದೂ ಇದೆ. ಮುಂದಿನ ಬಿಬಿಎಂಪಿ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗೂ ತಯಾರಿ ಮಾಡಿಕೊಳ್ಳುತ್ತಿದೆ. ಈ ನಡುವೆಯೇ ಪುಲಕೇಶಿ ನಗರದ ಘಟನೆ ಸಂಭವಿಸಿದೆ. ಹೀಗಾಗಿ ಪುಲಕೇಶಿನಗರ ಹಾಗೂ ನರಸಿಂಹರಾಜ ಕ್ಷೇತ್ರಗಳಲ್ಲಿನ ಘಟನೆಗಳು ಮುಂದೆ ನಡೆಯುವ ಯಾವುದೇ ಚುನಾವಣೆ ಅಖಾಡದಲ್ಲಿ ಪ್ರಸ್ತಾವಆಗುವುದಂತೂ ಹೌದು.

ಮತಬುಟ್ಟಿಗೆ ಲಗ್ಗೆ ಇಟ್ಟರೂ ಕೈ ‘ಸಾಫ್ಟ್’
ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ರಾಜಕೀಯ ವಿಭಾಗವಾಗಿ 2009 ಜೂನ್‌ 21ರಂದು ದಿಲ್ಲಿಯಲ್ಲಿ ಸ್ಥಾಪನೆಯಾದ ಎಸ್‌ಡಿಪಿಐ, 2010 ಎಪ್ರಿಲ್‌ 13 ರಂದು ರಾಜಕೀಯ ಪಕ್ಷವಾಗಿ ಚುನಾವಣ ಆಯೋಗದಲ್ಲೂ ನೋಂದಣಿ ಮಾಡಿಸಿತು. ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಮಂಗಳೂರಿನಿಂದ ಹಿಡಿದು ಚಾಮರಾಜನಗರದವರೆಗೆ ಬಿಬಿಎಂಪಿ ಸೇರಿದಂತೆ ಕೋಲಾರ, ಕಲಬುರಗಿ, ಮೈಸೂರು, ಶಿವಮೊಗ್ಗ ಯಾದಗಿರಿ ಜಿಲ್ಲೆಗಳಲ್ಲೂ ನಗರ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಗ್ರಾಮ ಪಂಚಾಯತ್‌ವರೆಗೂ ತಮ್ಮ ಪ್ರತಿನಿಧಿಗಳನ್ನು ಹೊಂದಿದೆ.

ಕೆಲವೆಡೆ ಕಾಂಗ್ರೆಸ್‌ ಜತೆಗೂಡಿ ಅಧಿಕಾರ ಸಹ ಹಂಚಿಕೊಂಡಿದೆ. ವಿಧಾನಸಭೆಯಿಂದ ಪಂಚಾಯತ್‌ ವರೆಗೆ ಸ್ಪರ್ಧೆ ಮಾಡಿದ ಚುನಾವಣೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್‌ನ ಮತಗಳನ್ನೇ ಕಸಿದಿದೆ.
ಎಸ್‌ಡಿಪಿಐ ರಾಜಕೀಯವಾಗಿ ಯಾರ ಬುಡಕ್ಕೆ ಕೊಡಲಿ ಪೆಟ್ಟುಕೊಟ್ಟು, ಯಾರನ್ನು ಮುಳುಗಿಸುತ್ತಿದೆ ಎಂಬುದು ಜಗಜ್ಜಾಹೀರಾಗಿದೆ. ಇಷ್ಟಾದರೂ ಕಾಂಗ್ರೆಸ್‌ ‘ಸಾಫ್ಟ್’ ಯಾಕೆ ಎಂಬುದು ರಾಜಕೀಯ ಚಾಣಾಕ್ಷರಿಗೆ ಗೊತ್ತಿಲ್ಲದ್ದೇನೂ ಅಲ್ಲ.

– ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next