Advertisement
ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಸಂಬಧಿಸಿ ರಾಜ್ಯದಲ್ಲಿ ಸೋಲಿನ ಭೀತಿಯಿಂದ ಈಗ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಪ್ರಸ್ತಾಪಿಸಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ.
Related Articles
Advertisement
ನಕಲಿ ಚುನಾವಣಾ ಗುರುತಿನ ಚೀಟಿ ತಯಾರಿಸಲಾಗುತ್ತಿದೆ ಎಂದು ಬಿಜೆಪಿಯವರು ಆರೋಪ ಮಾಡಿದ್ದಾರೆ. ಆದರೆ, ಚುನಾವಣಾ ಆಯೋಗ ಪರಿಶೀಲನೆ ನಡೆಸಿದಾಗ ಯಾವುದೇ ದಾಖಲೆ ದೊರೆತಿಲ್ಲ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ಹೆಸರು ಕೆಡಿಸಲು ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರು ಮೋದಿ ವಿರೋಧಿಸುವವರನ್ನು ಕೆಟ್ಟ ಉಪಮೆ ಬಳಸಿ ಶಬ್ದಬಳಕೆ ಮಾಡಿದ್ದಾರೆ. ಧರ್ಮ, ಸಂಸ್ಕೃತಿಯ ಬಗ್ಗೆ ಇವರಿಗೆ ಯಾವುದೇ ನೈತಿಕತೆಯಿಲ್ಲ.
ಬಿಜೆಪಿಯ ಸಿ.ಟಿ. ರವಿ, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್, ತೇಜಸ್ವಿ ಸೂರ್ಯ ಅವರು ಕೀಳು ಮಟ್ಟದ ಮಾತುಗಳನ್ನಾಡುತ್ತಾರೆ. ಚುನಾವಣಾ ಆಯೋಗ ಈ ಬಗ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಿ.ಟಿ. ರವಿಯಂತ ನಾಯಕರಿಗೆ ಚುನಾವಣಾ ಪ್ರಚಾರಕ್ಕೆ ನಿಬಂಧ ಹೇರಬೇಕು ಎಂದು ಮನವಿ ಮಾಡಿದರು.
ಯಡಿಯೂರಪ್ಪ ಅಸಲಿ ಡೈರಿ ತನಿಖೆಯಾಗಲಿ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಬರೆದಿದ್ದರು ಎನ್ನಲಾದ ಡೈರಿಯನ್ನು ಈಶ್ವರಪ್ಪ ಮಾಜಿ ಆಪ್ತ ಸಹಾಯಕ ವಿನಯ್ ಅವರು ಪೊಲೀಸರಿಗೆ ನೀಡಿದ್ದಾರೆ. ಈ ಡೈರಿಯಲ್ಲಿ ಗಂಭೀರ ಪರಿಣಾಮ ಬೀರುವ ಮಾಹಿತಿ ಇದೆ. ಯಡಿಯೂರಪ್ಪ ಪಕ್ಷದ ನಾಯಕರು, ಆರ್‌ಎಸ್‌ಎಸ್ ನಾಯಕರಿಗೆ ಎಷ್ಟು ಹಣ ನೀಡಿದ್ದಾರೆ ಎನ್ನುವ ಮಾಹಿತಿ ಇದೆ.
ಈ ಡೈರಿಯ ಬಗ್ಗೆ ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು. ಇತ್ತೀಚೆಗೆ ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿ ನಡೆಸಿ ಬಿಡುಗಡೆ ಮಾಡಿದ ದಾಖಲೆಗೂ, ವಿನಯ್ ಪೊಲೀಸರಿಗೆ ನೀಡಿರುವ ಡೈರಿಗೂ ಸಂಬಂಧ ಇದೆಯೋ ಗೊತ್ತಿಲ್ಲ. ಈ ಡೈರಿಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೆಕು ಎಂದು ಆಗ್ರಹಿಸಿದರು.
ಐಟಿ ಇಲಾಖೆ ಬಿಜೆಪಿ ಅಂಗ ಸಂಸ್ಥೆ: ಆದಾಯ ತೆರಿಗೆ ಇಲಾಖೆ ಬಿಜೆಪಿ ಅಧಿಕೃತ ಅಂಗ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ, ಅವರನ್ನು ನೈತಿಕವಾಗಿ ಕುಗ್ಗುವಂತೆ ಮಾಡುತ್ತಿದ್ದಾರೆ. ಐಟಿ ಅಧಿಕಾರಿಯನ್ನು ವರ್ಗಾಯಿಸುವಂತೆ ದೂರು ನೀಡಿದರೂ, ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ.
ಮೋದಿಯವರು ಚೌಕಿದಾರ ಎಂದು ದೇಶಾದ್ಯಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ರಾಜ್ಯದ ಬಿಜೆಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದ್ದರೂ. ಮೋದಿ ಯಾವುದೇ ಕ್ರಮ ಕೈಗೊಳ್ಳದಿರುವುದು. ಇದು ದೇಶಕ್ಕೆ ಗಂಡಾಂತರದ ವಿಷಯ ಎಂದು ಹೇಳಿದರು.