ಕುಂದಗೋಳ: ಇಲ್ಲಿನ ಪಟ್ಟಣ ಪಂಚಾಯ್ತಿ ಚುನಾವಣೆ ನಿಗದಿಗೊಳ್ಳುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಕಾಂಕ್ಷಿಗಳು ಪಕ್ಷಗಳ ಬಿ ಫಾರ್ಮ್ಗಾಗಿ ಜೋರು ಲಾಬಿ ನಡೆಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿತರ ಪಟ್ಟಿ ದೊಡ್ಡದಿದ್ದು, ದೀಪಾವಳಿ ನಂತರ ಚುನಾವಣೆ ಕಾವು ರಂಗೇರಲಿದೆ.
ಕಳೆದ ಅವ ಧಿಯಲ್ಲಿ 15 ವಾರ್ಡ್‌ಗಳನ್ನು ಹೊಂದಿದ್ದ ಪಂಚಾಯ್ತಿ ಪುನರ್ ವಿಂಗಡಣೆ ನಂತರ 19 ವಾಡ್‌ಗಳಾಗಿದ್ದು, ಈಗಾಗಲೇ ಮೀಸಲಾತಿ ಪ್ರಕಟಗೊಂಡಿದೆ. 1ನೇ ವಾರ್ಡ್ ಹಿಂದುಳಿದ ಅ ಮಹಿಳೆ, 2ನೇ ವಾರ್ಡ್ ಸಾಮಾನ್ಯ ಮಹಿಳೆ, 3ನೇ ವಾರ್ಡ್ ಪರಿಶಿಷ್ಟ ಜಾತಿ, 4ನೇ ವಾರ್ಡ್ ಸಾಮಾನ್ಯ, 5ನೇ ವಾರ್ಡ್ ಹಿಂದುಳಿದ ಅ, 6ನೇ ವಾರ್ಡ್ ಸಾಮಾನ್ಯ ಮಹಿಳೆ, 7ನೇ ವಾರ್ಡ್ ಹಿಂದುಳಿದ ಬ, 8ನೇ ವಾರ್ಡ್ ಹಿಂದುಳಿದ ಅ ಮಹಿಳೆ, 9ನೇ ವಾರ್ಡ್ ಸಾಮಾನ್ಯ, 10ನೇ ವಾರ್ಡ್ ಸಾಮಾನ್ಯ, 11ನೇ ವಾರ್ಡ್ ಸಾಮಾನ್ಯ ಮಹಿಳೆ, 12ನೇ ವಾರ್ಡ್ ಸಾಮಾನ್ಯ, 13ನೇ ವಾರ್ಡ್ ಹಿಂದುಳಿದ ಅ, 14ನೇ ವಾರ್ಡ್ ಹಿಂದುಳಿದ ಅ, 15ನೇ ವಾರ್ಡ್ ಸಾಮಾನ್ಯ, 16ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ, 17ನೇ ವಾರ್ಡ್ ಪರಿಶಿಷ್ಟ ಪಂಗಡ, 18ನೇ ವಾರ್ಡ್ ಸಾಮಾನ್ಯ ಮಹಿಳೆ ಹಾಗೂ 19ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 24ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಇದುವರೆಗೂ ಒಂದು ನಾಮಪತ್ರವೂ ಸಲ್ಲಿಕೆಯಾಗಿಲ್ಲ. ಅ. 31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನ. 4ರಂದು ನಾಮಪತ್ರ ಹಿಂಪಡೆಯುವ ಕೊನೆದಿನವಾಗಿದೆ. ನ. 12ರಂದು ಚುನಾವಣೆ ಜರುಗಲಿದೆ.
ಮೂರೂ ಪಕ್ಷಗಳಿಗೆ ಅಧಿಕಾರ: ಕಳೆದ ಅವಧಿಯಲ್ಲಿ ಬಿಜೆಪಿಯ 6, ಕಾಂಗ್ರೆಸ್‌ನ 6 ಹಾಗೂ ಜೆಡಿಎಸ್‌ನ 3 ಜನ ಆಯ್ಕೆಗೊಂಡಿದ್ದರು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೆ ಮೈತ್ರಿಯೊಂದಿಗೆ ಆಡಳಿತ ಚುಕ್ಕಾಣಿ ಹಿಡಿಯುವುದು ಅನಿವಾರ್ಯವಾಗಿತ್ತು. ಮೊದಲನೇ ಅವ ಧಿಗೆ ಅಧ್ಯಕ್ಷ ಸ್ಥಾನಕ್ಕೆಪರಿಶಿಷ್ಟ ಜಾತಿ ಮೀಸಲಾಗಿದ್ದರಿಂದ ಬಿಜೆಪಿ ಸದಸ್ಯರಾಗಿದ್ದ ಯಲ್ಲವ್ವ ಭಜಂತ್ರಿಗೆ ಯಾರೂ ಎದುರಾಳಿ ಇಲ್ಲದೆ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಉಪಾಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ ಹೋಗಿತ್ತು. 30 ತಿಂಗಳ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದುಬಿದ್ದಿತ್ತು.ಬಳಿಕ ಜೆಡಿಎಸ್-ಕಾಂಗ್ರೆಸ್‌ಮೈತ್ರಿ ಆರಂಭಗೊಂಡು, ಮೊದಲ ಅವಧಿಗೆ ಜೆಡಿಎಸ್‌ನ ಮಲ್ಲಿಕಾರ್ಜುನ ಕಿರೇಸೂರ ಅಧಿಕಾರಕ್ಕೇರಿದರು. ನಂತರ ಕಾಂಗ್ರೆಸ್‌ನ ಅಜೀಜ ಕ್ಯಾಲಕೊಂಡ ಹಾಗೂ ಹಾಸಂಬಿ ಛಡ್ಡಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು ಈಗ ಇತಿಹಾಸ.
ಅಭಿವೃದ್ಧಿ ಅಷ್ಟಕ್ಕಷ್ಟೆ: ಕಳೆದ ಐದು ವರ್ಷದ ಆಡಳಿತದಲ್ಲಿ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಮಾತ್ರ ಅಷ್ಟಕ್ಕಷ್ಟೆ. ಕೆಲವೆಡೆ ಹದಿನೈದು ದಿನಕ್ಕೊಮ್ಮೆ ನೀರು ಬರುತ್ತಿದ್ದು, ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಹಗಲಲ್ಲೇ
ಸೊಳ್ಳೆಗಳ ಭರಾಟೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಈಗ ಮತ್ತೂಂದು ಚುನಾವಣೆ ಬಂದಿದ್ದು ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳು ಹೊಸ ಹೊಸ ಬಣ್ಣದ ಆಮಿಷ ನೀಡುತ್ತಾ ಮತ್ತೆ ಮತ ಭಿಕ್ಷೆಗೆಸಜ್ಜಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿಯವರು ಅಷ್ಟೊಂದು ಹಿಡಿತ ಇಲ್ಲದಿರುವುದರಿಂದ ಬಿ ಫಾರ್ಮ್ ಹಂಚುವುದೇ ತಲೆಬಿಸಿಯಾಗಿದೆ. ಇನ್ನು ಬಿಜೆಪಿಯಲ್ಲಿ ಮಾಜಿ ಶಾಸಕ
ಎಸ್.ಐ. ಚಿಕ್ಕನಗೌಡ್ರ ಹಾಗೂ ಮುಖಂಡ ಎಂ.ಆರ್. ಪಾಟೀಲ ಬೆಂಬಲಿಗರ ಗುಂಪಿದೆ. ಇಲ್ಲೂ ಸಹ ಬಿ ಫಾರ್ಮ್ ಹಂಚಲು ಸಚಿವರ- ಸಂಸದರ ಶಿಫಾರಸನ್ನು ತರುತ್ತಿರುವುದು ಕೇಳಿಬರುತ್ತಿದೆ. ಎರಡೂ ಪಕ್ಷಗಳ ಬಿ ಫಾರ್ಮ್ ವಂಚಿತರು ಜೆಡಿಎಸ್ ಕಡೆಗೆ ವಾಲುತ್ತಾರೆ ಎಂಬ ಮಾತು ದಟ್ಟವಾಗಿದೆ.
-ಶೀತಲ ಎಸ್. ಮುರಗಿ