Advertisement

64,85,980 ಮಕ್ಕಳಿಗೆ ಪೋಲಿಯೋ ಲಸಿಕೆ ಗುರಿ

12:29 AM Mar 11, 2019 | |

ಬೆಂಗಳೂರು : ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಮಕ್ಕಳಿಗೆ ಪೋಲಿಯೋ
ಲಸಿಕೆ ಹಾಕುವ ಮೂಲಕ ರಾಜ್ಯದಲ್ಲಿ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮ ದೇಶಾದ್ಯಂತ ನಡೆಯುತ್ತಿದೆ. ಮುಂದೆ ಮಕ್ಕಳಿಗೆ ಅಂಗವೈಕಲ್ಯದಂತಹ ಯಾವುದೇ ತೊಂದರೆ ಆಗಬಾರದು. ಈ ಬಾರಿ ರಾಜ್ಯದಲ್ಲಿ ಒಟ್ಟು 64,85,980 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 32,571 ಬೂತ್‌, 51,918 ತಂಡ, 1,10,351 ಕಾರ್ಯಕರ್ತರು, 7,827 ಮೇಲ್ವಿಚಾರಕರು, 2,481 ಸಂಚಾರಿ ತಂಡ, 4,300 ಟ್ರಾನ್ಸಿಟ್‌ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸೋಮವಾರದಿಂದ ಮನೆಮನೆಗೆ ತೆರಳಿ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು. ಮಂಗನ ಕಾಯಿಲೆ ಬಗ್ಗೆ ಭಯ ಬೇಡ: ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚಾಗುತ್ತಿರುವ ಕುರಿತು ಆರೋಗ್ಯ ಇಲಾಖೆ ಬಳಿ ಚರ್ಚೆ ನಡೆಸಲಾಗಿದೆ.

Advertisement

ಈಗಾಗಲೇ ಉಚಿತ ವ್ಯಾಕ್ಸಿನೇಷನ್‌ ಹಂಚಲಾಗುತ್ತಿದ್ದು ಕೆಲವೆಡೆ ವ್ಯಾಕ್ಸಿನೇಷನ್‌ ಕೊರತೆ ಇದೆ ಎಂದು ಸುಳ್ಳು ವದಂತಿ ಹಬ್ಬಿಸಲಾಗಿದೆ. ಬೆಂಗಳೂರಿನ ಹೆಬ್ಟಾಳದಲ್ಲಿ ಮಾತ್ರ ಈ ವ್ಯಾಕ್ಸಿನೇಷನ್‌ ತಯಾರಿಸಲಾಗುತ್ತಿದ್ದು, ಒಂದು ವ್ಯಾಕ್ಸಿನೇಷನ್‌ ತಯಾರಿಗೆ 70 ದಿನ ಕಾಲಾವಕಾಶಬೇಕು. ಈ ಬಾರಿ 1ಲಕ್ಷದ 20 ಸಾವಿರ ವ್ಯಾಕ್ಸಿನೇಷನ್‌ ಪಡೆದು 60 ಸಾವಿರ ಮಂದಿಗೆ ನೀಡಲಾಗಿದೆ. ಮುಂದಿನ ವರ್ಷಕ್ಕೆ 4.5 ಲಕ್ಷ ವ್ಯಾಕ್ಸಿನೇಷನ್‌ಗೆ ಆರ್ಡ್‌ರ್‌ ಮಾಡಲಾಗಿದೆ ಎಂದರು.

ಮಂಗನ ಕಾಯಿಲೆ ಮುಂಜಾಗ್ರತೆಗೆ 10 ಕೋಟಿ ರೂ. ಅನುದಾನ ಇಡಲಾಗಿದ್ದು, ಇದನ್ನು ಸಂಶೋಧನೆ ಸೇರಿ ಇತರೆ ಕೆಲಸಕ್ಕೆ ಬಳಕೆ ಮಾಡಲಾಗುತ್ತದೆ. ಮಲೆನಾಡಿನ ಸ್ಥಳೀಯ ಶಾಸಕರು ಸಾವನ್ನಪ್ಪಿದವರಿಗೆ ಪರಿಹಾರ ಕೊಡಿ ಎಂದು ಕೇಳುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಪರಿಹಾರ ಕೊಡಲು ಬರಲ್ಲ. ಆದರೆ, ಮಾನವೀಯತೆ ದೃಷ್ಟಿಯಿಂದ ಕುಟುಂಬದ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ಪರಿಹಾರ ನೀಡಲು ಕ್ರಮವಹಿಸುತ್ತೇವೆ ಎಂದರು.

ಹಣ ಬಿಡುಗಡೆ ಆಗಿಲ್ಲ

ಮುಂಗಾರು- ಹಿಂಗಾರು ಮಳೆ ಕೊರತೆಯಿಂದ ರೈತರಿಗೆ ಆದ ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮೊದಲ ಹಂತದಲ್ಲಿ 2,000 ಕೋಟಿ ರೂ. ಪರಿಹಾರ ಕೇಳಿದ್ದೇವೆ. ಅದರಲ್ಲಿ 949 ಕೋಟಿ ರೂ. ಕೇಂದ್ರ ಪರಿಹಾರ ಘೋಷಣೆ ಮಾಡಿದ್ದರೂ ರಾಜ್ಯಕ್ಕೆ ಬಂದಿರುವುದು 400 ಕೋಟಿ ರೂ.ಮಾತ್ರ. ಇನ್ನು ನರೇಗಾ ಯೋಜನೆ ಹಣ ರಾಜ್ಯಕ್ಕೆ ಕೇಂದ್ರ ಬಿಡುಗಡೆ ಮಾಡಿಲ್ಲ. ತಕ್ಷಣ ಬಿಡುಗಡೆ ಮಾಡುವಂತೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮನವಿ ಮಾಡಿದ್ದೇನೆಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next