Advertisement

ಸೋಲಾರ್‌ ಬಳಕೆಯತ್ತ ಪಾಲಿಕೆ, ಪುರಭವನ

12:11 AM Feb 25, 2020 | mahesh |

ಮಹಾನಗರ: ಲಾಲ್‌ಬಾಗ್‌ನಲ್ಲಿರುವ ಮಹಾನಗರ ಪಾಲಿಕೆ ಹಾಗೂ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ಸೋಲಾರ್‌ ಉತ್ಪಾದನೆ ನಡೆಯಲಿದೆ. ಆ ಮೂಲಕ, ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಉತ್ತೇಜನ ನೀಡಲಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ರೂಫ್‌ಟಾಪ್‌ ಸೋಲಾರ್‌ ಪರಿಕಲ್ಪನೆಯಡಿಯಲ್ಲಿ ಸರಕಾರಿ ಕಟ್ಟಡಗಳಿಗೆ ಪಿಪಿಪಿ ಮಾದರಿ ಯಲ್ಲಿ ಸೋಲಾರ್‌ ಅಳವಡಿಕೆ ಮಾಡಲು ಉದ್ದೇಶಿಸಲಾಗಿದ್ದು, ಇದರಂತೆ ನಗರದ ಪುರಭವನ, ಮಹಾನಗರ ಪಾಲಿಕೆ ಯಲ್ಲಿ ಸೋಲಾರ್‌ ಅಳವಡಿಕೆ ಸದ್ಯ ನಡೆಯುತ್ತಿದೆ.

ನಗರದ ಶಿವಬಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆ, ಹೊಗೆಬಜಾರ್‌ನ ಕೆಎಫ್‌ಡಿಸಿ ಯಲ್ಲಿ ಈಗಾಗಲೇ ಸೋಲಾರ್‌ ಅಳವಡಿಕೆ ಮಾಡಲಾಗಿದ್ದು, ಕಾರ್ಯ ನಿರ್ವಹಿಸುತ್ತಿದೆ. ಇದೀಗ ಮುಂದುವರಿದ ಭಾಗವೆಂಬಂತೆ ಪಾಲಿಕೆ, ಪುರಭವನ, ಅದರ ಪಕ್ಕದ ವಾಣಿಜ್ಯ ಕಟ್ಟಡಕ್ಕೆ ಸೋಲಾರ್‌ ಅಳವಡಿಕೆ ನಡೆಸಲಾಗುತ್ತಿದೆ.

ಒಟ್ಟು 1,220 ಕಿಲೋ ವ್ಯಾಟ್‌ ಸಾಮರ್ಥ್ಯದ 7.08 ಕೋ.ರೂ. ವೆಚ್ಚದಲ್ಲಿ ಈ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊ ಳ್ಳಲಾಗಿದೆ. ಸೋಲಾರ್‌ ಅಳವಡಿಕೆ ಆದ ಬಳಿಕ ಅದರ ವಿದ್ಯುತ್‌ ಅನ್ನು ಸಂಬಂಧಿತ ಕಟ್ಟಡದವರೇ ಬಳಸಿಕೊಂಡು ಉಳಿದದ್ದನ್ನು ಮೆಸ್ಕಾಂ ಗ್ರಿಡ್‌ಗೆ ಕಳುಹಿಸಲಾಗುತ್ತದೆ.

ಅನುಷ್ಠಾನ-ನಿರ್ವಹಣೆ ಹೇಗೆ ?
ಪಿಪಿಪಿ ಮಾದರಿಯಲ್ಲಿ ಸರಕಾರಿ ಕಟ್ಟಡಕ್ಕೆ ಸೋಲಾರ್‌ ಅನ್ನು ಖಾಸಗಿ ಸಂಸ್ಥೆ/ಕಂಪೆನಿಯವರು ಅಳವಡಿಕೆ ಮಾಡುತ್ತಾರೆ. ಈ ಸಂದರ್ಭ ಸ್ಮಾರ್ಟ್‌ ಸಿಟಿ ಅಥವಾ ಪಾಲಿಕೆ ಬಂಡವಾಳ ಹಾಕುವುದಿಲ್ಲ. ಇದರ ನಿರ್ವಹಣೆ ಜವಾಬ್ದಾರಿ ಆ ಕಂಪೆನಿಗೆ 25 ವರ್ಷಗಳ ಕಾಲಕ್ಕೆ ನೀಡಲಾಗುತ್ತದೆ. ಸೋಲಾರ್‌ನಲ್ಲಿ ವಿದ್ಯುತ್‌ ಉತ್ಪಾದನೆ ಆದ ಬಳಿಕ ಅದನ್ನು ಸಂಬಂಧಪಟ್ಟ ಕಟ್ಟಡದ (ಪಾಲಿಕೆ, ಪುರಭವನ)ಬಳಕೆಗೆ ನೀಡಲಾಗುತ್ತದೆ. ತಿಂಗಳಿಗೆ ಅವರು ಬಳಸಿದ ಒಟ್ಟು ವಿದ್ಯುತ್‌ಗೆ ಕಂಪೆನಿ ಬಿಲ್‌ ನೀಡುತ್ತದೆ. ಅದರಲ್ಲಿ ಶೇ.40ರಷ್ಟು ರಿಯಾಯಿತಿಯನ್ನು ಕಂಪೆನಿ ಪ್ರಕಟಿಸಿ ಉಳಿದ ಶೇ.60ರಷ್ಟನ್ನು ಮಾತ್ರ ಸಂಬಂಧಪಟ್ಟ ಕಟ್ಟಡದವರು ಪಾವತಿಸಬೇಕಾಗುತ್ತದೆ. ಹೀಗಾಗಿ ಸರಕಾರಿ ಕಟ್ಟಡದ ವಿದ್ಯುತ್‌ ಬಿಲ್‌ನಲ್ಲಿ ಉಳಿತಾಯ ಮಾಡಬಹುದು.

Advertisement

ಎಂಆರ್‌ಪಿಎಲ್‌, ಎನ್‌ಎಂಪಿಟಿಇ-ಸೋಲಾರ್‌ ಯಶಸ್ವಿ
ಸೋಲಾರ್‌ ಪವರ್‌ ಅನ್ನು ಈಗಾಗಲೇ ಪ್ರತಿಷ್ಠಿತ ಸಂಸ್ಥೆಗಳು ಮಂಗಳೂರಿನಲ್ಲಿ ಮಾಡಿಕೊಂಡಿವೆ. ತಮ್ಮದೇ ಕಂಪೆನಿಯ ವೆಚ್ಚದಲ್ಲಿ ಸೋಲಾರ್‌ ಅಳವಡಿಸಿ ಈಗಾಗಲೇ ಹಲವು ಕಂಪೆನಿಗಳು ಸಕ್ಸಸ್‌ ಆಗಿವೆ. ಈ ಪೈಕಿ ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ (ಎಂಆರ್‌ಪಿಎಲ್‌)ಸಂಸ್ಥೆಯು ಪ್ರಸ್ತುತ ಸೋಲಾರ್‌ ಉತ್ಪಾದನೆ ಮೂಲಕ ಸಾಧನೆ ತೋರಿದೆ. ವಾರ್ಷಿಕ 88 ಲಕ್ಷ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿರುವ ಸೋಲಾರ್‌ ಘಟಕವನ್ನು ಕುತ್ತೆತ್ತೂರಿನಲ್ಲಿ ನಿರ್ಮಿಸಿದೆ. 27 ಕೋ.ರೂ. ವೆಚ್ಚದಲ್ಲಿ ಸ್ಥಾಪನೆಯಾಗಿರುವ 6,063 ಮೆ.ವ್ಯಾಟ್‌ ಸಾಮರ್ಥ್ಯದ ಈ ಘಟಕ 24,000 ಯೂನಿಟ್‌ ವಿದ್ಯುತ್‌ ಉತ್ಪಾದಿ ಸುವ ಗುರಿ ಹೊಂದಿದೆ.

ನವಮಂಗಳೂರು ಬಂದರು (ಎನ್‌ಎಂಪಿಟಿ) ಕೂಡ ಒಟ್ಟು ನಿರ್ವಹಣೆಗಾಗಿ ಸೋಲಾರ್‌ ಮೂಲಕವೇ 20,000 ಯೂನಿಟ್‌ ವಿದ್ಯುತ್‌ ಉತ್ಪಾದಿಸಲಾಗು ತ್ತಿದೆ. ಕೂಳೂರಿನಲ್ಲಿರುವ ಕುದುರೆಮುಖ ಕಂಪೆನಿಯ ಬ್ಲಾಸ್ಟ್‌ ಫರ್ನೆಸ್‌ ಘಟಕದ ಆವರಣದಲ್ಲಿ 6.7 ಕೋ.ರೂ. ವೆಚ್ಚದಲ್ಲಿ 1.3 ಮೆಗಾವ್ಯಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ.

ಪಿಲಿಕುಳ-ಜಿಲ್ಲಾ ಪಂಚಾಯತ್‌ಗೂ ಸೋಲಾರ್‌
ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆದಿಟ್ಟ ಪಿಲಿಕುಳದ ಉದ್ಯಾನವನಕ್ಕೂ ಸೋಲಾರ್‌ ಅಳವಡಿಕೆಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಉದ್ದೇಶಿಸಲಾಗಿದೆ. ಈ ಮೂಲಕ ಪಿಲಿಕುಳದ ಒಟ್ಟು ವಿದ್ಯುತ್‌ ಬಳಕೆ ಎಷ್ಟಿದೆ, ಎಷ್ಟು ಪ್ರಮಾಣದ ಸೋಲಾರ್‌ ಅಗತ್ಯವಿದೆ ಎಂಬ ವಿಚಾರಗಳ ಬಗ್ಗೆ ಅಧ್ಯಯನ ಸದ್ಯ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಸೋಲಾರ್‌ ಅಳವಡಿಕೆ ನಡೆಯಲಿದೆ. ಜತೆಗೆ, ಉರ್ವಸ್ಟೋರ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ಗೂ ಸೋಲಾರ್‌ ಪವರ್‌ ದೊರೆಯಲಿದೆ. ಈ ಕಟ್ಟಡದ ಒಟ್ಟು ನಿರ್ವಹಣೆಗೆ ತಕ್ಕುದಾದ ಪ್ರಮಾಣದಲ್ಲಿ ಸೋಲಾರ್‌ ಬಳಕೆ ಮಾಡಲು ನಿರ್ಧರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಈ ಕುರಿತಾದ ಅಂತಿಮ ತೀರ್ಮಾನವಾಗಲಿದೆ.

ಸರಕಾರಿ ಕಟ್ಟಡಗಳಿಗೆ ಸೋಲಾರ್‌
ಸರಕಾರಿ ಕಟ್ಟಡಗಳಿಗೆ ರೂಫ್‌ಟಾಪ್‌ ಸೋಲಾರ್‌ ಅಳವಡಿಕೆಗೆ ಉದ್ದೇಶಿಸಲಾಗಿದ್ದು, ಪಾಲಿಕೆ, ಪುರಭವನಕ್ಕೆ ಅಳವಡಿಕೆ ಮಾಡುವ ಕಾರ್ಯ ನಡೆಯುತ್ತಿದೆ. ಆ ಬಳಿಕ ಪಿಲಿಕುಳ ಹಾಗೂ ದ.ಕ. ಜಿಲ್ಲಾ ಪಂಚಾಯತ್‌ಗೂ ಸೋಲಾರ್‌ ಅಳವಡಿಕೆ ಮಾಡಲಾಗುತ್ತದೆ.
 - ಮೊಹಮ್ಮದ್‌ ನಝೀರ್‌, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್‌ಸಿಟಿ, ಮಂಗಳೂರು

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next