Advertisement

ಪಾಲಿಕೆ ಮೀಸಲಾತಿ ತೀರ್ಪು: ಮತ್ತೆ ಕೋರ್ಟ್‌ ಮೆಟ್ಟಿಲೇರಿದ ಅರ್ಜಿದಾರರು

10:53 PM Jul 28, 2019 | Team Udayavani |

ಮಹಾನಗರ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಪತನವಾಗಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಮಂಗಳೂರು ಮಹಾನಗರ ಪಾಲಿಕೆಯ ಮೀಸಲಾತಿ ವಿಚಾರವೂ ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ಪಾಲಿಕೆಗೆ ಸಂಬಂಧಿಸಿದಂತೆ ಸರಕಾರ ಹೊರಡಿಸಿದ ಮೀಸಲು ಪಟ್ಟಿಯಲ್ಲಿ ಆವ ರ್ತನ ಪದ್ಧತಿ (ರೊಟೇಶನ್‌ ಪದ್ಧತಿ)ಯನ್ನು ಸರಿಯಾಗಿ ಅನುಸರಿಸಿಲ್ಲ ಎಂದು ಪ್ರಶ್ನಿಸಿ ಕೆಲವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ಮೇ 31ರಂದು ವಜಾ ಮಾಡಿತ್ತು. ಇದರ ಮರುಪರಿಶೀಲನೆಗೆ ಕೋರಿ ಅರ್ಜಿದಾರರು ಮತ್ತೆ ಕೋರ್ಟ್‌ ಮೊರೆ ಹೋಗಿದ್ದಾರೆ.

ಈ ಮಧ್ಯೆ, ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರ ಸಮಯದಲ್ಲಿ ಹೊರಡಿಸಿದ ಮೀಸಲಾತಿ ರಾಜಕೀಯ ಪ್ರೇರಿತ ಎಂಬ ಕಾರಣ ನೀಡಿ ಪ್ರತ್ಯೇಕವಾಗಿ ಹೊಸ ಮೀಸಲಾತಿ ಘೋಷಣೆಗೆ ಕಾನೂನಿನಲ್ಲಿ ಅವಕಾಶ ಇದೆಯೇ? ಎಂಬ ಬಗ್ಗೆ ಬಿಜೆಪಿ ಸರಕಾರವು ಕಾನೂನು ತಜ್ಞರ ಸಲಹೆ ಕೋರುವ ಸಾಧ್ಯತೆಯಿದೆ. ಇದಕ್ಕೆ ಅವಕಾಶ ಇಲ್ಲ ಎಂದು ಕಾಂಗ್ರೆಸ್‌ ವಾದಿಸುತ್ತಿದೆ.

ಜತೆಗೆ, ಹೈಕೋರ್ಟ್‌ ದ್ವಿಸದಸ್ಯ ಪೀಠದಲ್ಲಿ ಸಲ್ಲಿಕೆಯಾಗಿರುವ ಮರುಪರಿಶೀಲನೆ ಅರ್ಜಿ ಕುರಿತಾದ ತೀರ್ಪು ಪರಿಗಣಿಸಿ ಮುಂದಿನ ನಡೆ ಏನಾಗಿರಬಹುದು ಎಂಬ ಕುತೂಹಲವೂ ಇದೆ. ಹಿಂದಿನ ತೀರ್ಪನ್ನೇ ಹೈಕೋರ್ಟ್‌ ಮತ್ತೆ ಎತ್ತಿ ಹಿಡಿದರೆ, ಅರ್ಜಿದಾರರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.

ಕಾನೂನು ಸಮರ
ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿ ದ್ದಾಗ ರಾಜ್ಯ ನಗರಾಭಿವೃದ್ಧಿ ಇಲಾಖೆ ಸಲ್ಲಿಸಿದ್ದ ಪಾಲಿಕೆಯ ಅಂತಿಮ ಮೀಸಲು ಪಟ್ಟಿ ವಿರುದ್ಧ ಕೆಲವರು ಹೈಕೋರ್ಟ್‌ನಲ್ಲಿ ರಿಟ್‌ ಸಲ್ಲಿಸಿದ್ದರು. ಅದರಂತೆ ಏಕಸದಸ್ಯ ಪೀಠ ಹೊಸ ಮೀಸಲು ಪಟ್ಟಿ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿತ್ತು. ಆದರೆ, ಈ ತೀರ್ಪಿನ ವಿರುದ್ಧ ರಾಜ್ಯ ಸರಕಾರ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಬಳಿಕ ಮೇ 31ರಂದು ತೀರ್ಪು ವಜಾ ಮಾಡಿದ್ದು, ಮರುಪರಿಶೀಲನೆಗೆ ಕೆಲ ವರು ಹೈಕೋರ್ಟ್‌ ಕದ ತಟ್ಟಿದ್ದಾರೆ.

Advertisement

ರಾಜ್ಯದಲ್ಲಿ ಹೊಸ ಸರಕಾರ ಆಡಳಿತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಗೆ ಸಂಬಂಧಿಸಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಲಿದೆ. ಮಾಜಿ ಕಾರ್ಪೊರೇಟರ್‌ಗಳು ತಮ್ಮ ವಾರ್ಡ್‌ ಮೀಸಲಾತಿ ಆಧಾರದಲ್ಲಿ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದಾರೆ. ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೆ ಎದುರಿಸಲು ಕಾಂಗ್ರೆಸ್‌ ಹಾಗೂ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.

ಮಾ.7ಕ್ಕೆ ಮನಪಾ ಆಡಳಿತ ಕೊನೆ
ಮನಪಾ ಪರಿಷತ್ತಿನ ಈ ಅವಧಿಯ ಆಡಳಿತ ಮಾ.7ರಂದು ಕೊನೆಗೊಂಡಿದ್ದು, ನೂತನ ಅವಧಿಗೆ ನಿಗದಿಪಡಿಸಿರುವ ಮೀಸಲಾತಿಯನ್ನು ಪ್ರಶ್ನಿಸಿ ಕೆಲವು ಮಂದಿ ನ್ಯಾಯಾಲಯದ ಮೇಟ್ಟಲೇರಿದ್ದರು. ಇದಕ್ಕೆ ಹೈಕೋರ್ಟ್‌ ತಡೆ ನೀಡಿದ್ದು, ಸರಕಾರ ಮೇಲ್ಮನವಿ ಸಲ್ಲಿಸಿದ್ದರಿಂದ ಚುನಾವಣೆ ಮುಂದಕ್ಕೆ ಹೋಗಿತ್ತು. ಪ್ರಸ್ತುತ ಪಾಲಿಕೆಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.

 ಚುನಾವಣೆಗೆ ಕಾಂಗ್ರೆಸ್‌ ಸಿದ್ಧ
ಈಗಾಗಲೇ ಮೀಸಲಾತಿ ವಿಚಾರದಲ್ಲಿ ಸರಕಾರವು ಘೋಷಿಸಿದ ಮೀಸಲಾತಿ ವಿಚಾರವು ಸರಿ ಇದೆ ಎಂದು ನ್ಯಾಯಾಲಯವು ಈಗಾಗಲೇ ತೀರ್ಪು ನೀಡಿದೆ. ಈಗ ಅದನ್ನು ಮರುಪರಿಶೀಲಿಸುವಂತೆ ಕೋರಿ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಪಾಲಿಕೆಗೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಅದನ್ನು ಎದುರಿಸಲು ಕಾಂಗ್ರೆಸ್‌ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
 - ಎಂ.ಶಶಿಧರ ಹೆಗ್ಡೆ, ಮಾಜಿ ಮೇಯರ್‌, ಮನಪಾ

ಆದೇಶದ ನಿರೀಕ್ಷೆಯಲ್ಲಿ
ನಗರ ವ್ಯಾಪ್ತಿಯಲ್ಲಿ ಸ್ಥಳೀಯ ಕೆಲವು ಸಮಸ್ಯೆಯಿರುವ ಹಿನ್ನೆಲೆ ಯಲ್ಲಿ ಎರಡು ತಿಂಗಳವರೆಗೆ ಪಾಲಿಕೆ ಚುನಾವಣೆ ನಡೆಯಲು ಕಷ್ಟವಿದೆ. ಇದನ್ನು ಚುನಾವಣಾ ಆಯೋಗ ಗಮನಿಸಬೇಕು. ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರ ಮರುಪರಿಶೀಲನೆ ಹಂತದಲ್ಲಿದ್ದು, ಆದೇಶದ ನಿರೀಕ್ಷೆಯಲ್ಲಿದ್ದೇವೆ. ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿದೆ.
 - ಪ್ರೇಮಾನಂದ ಶೆಟ್ಟಿ,
ಮಾಜಿ ಪ್ರತಿಪಕ್ಷ ನಾಯಕ, ಮನಪಾ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next