ಉಡುಪಿ: ಮದುವೆ, ಉಪನಯನ ಇತ್ಯಾದಿಗಳ ಆಮಂತ್ರಣ ಪತ್ರಿಕೆಯನ್ನು ವಿತರಿಸಿದ ಬಳಿಕ ಅದು ಸೀದಾ ಕಸದ ಬುಟ್ಟಿಗೆ ಹೋಗುವುದು ಸಹಜ. ಹೀಗಾಗಿ ಆಮಂತ್ರಣ ಪತ್ರಿಕೆ ನೆಪದಲ್ಲಿ ಒಂದು ನೀತಿ ಬೋಧಕ ಪುಸ್ತಕವನ್ನೇ ವಿತರಿಸಲಾಗುತ್ತಿದೆ.
ಕೊಡವೂರಿನ ಭಾರತೀ ಮತ್ತು ಕೆ. ಪ್ರಸಾದ ಭಟ್ ಅವರ ಪುತ್ರ ಶ್ರೀವತ್ಸನ ಉಪನಯನ ಸಮಾರಂಭಕ್ಕಾಗಿ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಧ್ಯಾಪಕ ಡಾ| ಶ್ರೀಕಾಂತ ಬಾಯರಿಯವರು ಬರೆದ “ತಿಳಿದು ಆಚರಿಸೋಣ’ ಕೃತಿಯನ್ನು ಮುದ್ರಿಸಲಾಗಿದೆ. ಮುಖಪುಟದಲ್ಲಿ ಉಡುಪಿ ಶ್ರೀಕೃಷ್ಣನ ಚಿತ್ರ, ಎರಡನೆಯ ಪುಟದಲ್ಲಿ ಪೇಜಾವರ ಉಭಯ ಶ್ರೀಪಾದರ ಚಿತ್ರದೊಂದಿಗೆ, ಕವನ ರೂಪದಲ್ಲಿ ಆಮಂತ್ರಣ, ಕೊನೆಯ ಪುಟದಲ್ಲಿ ಕೊಡವೂರು ಶಂಕರನಾರಾಯಣ ದೇವರ ಚಿತ್ರದೊಂದಿಗೆ ಧ್ಯಾನಶ್ಲೋಕ, ಕೊನೆಯ ಒಳಪುಟದಲ್ಲಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಒಟ್ಟು 80 ಪುಟದ ಆಮಂತ್ರಣ ಪತ್ರಿಕೆ ಇದು.
ಜೀವನವೆಂದರೆ ಏನು ಎಂಬುದರಿಂದ ಹಿಡಿದು ಸಾಧನೆ, ಉಪನಯನ, ಯಜ್ಞೊàಪವೀತ, ಸಂಧ್ಯಾವಂದನೆ, ಆಚಮನ, ಪ್ರಾಣಾಯಾಮ, ಸೂರ್ಯಾಘÂì, ತರ್ಪಣ, ಗಾಯತ್ರೀ ಮಂತ್ರ, ದೇವಪೂಜೆ, ಶಂಖಪೂಜೆ, ಕಲಶಪೂಜೆ, ಪೀಠಪೂಜೆ, ಅಭಿಷೇಕ, ಆವರಣಪೂಜೆ, ಧೂಪ-ದೀಪ, ನೈವೇದ್ಯ, ಮಂಗಳಾರತಿ, ತೀರ್ಥ, ಭೋಜನ ಇತ್ಯಾದಿಗಳು, ರಂಗೋಲಿ, ಕುಂಕುಮಧಾರಣೆ, ಹೊಸ್ತಿಲುಪೂಜೆ, ಹರಿದ್ರಾಸ್ನಾನ ಇತ್ಯಾದಿ ಸ್ತ್ರೀಯರಿಗೆ ಬೇಕಾದ ವಿಚಾರಗಳನ್ನು ಬಾಯರಿಯವರು ವಿಶದವಾಗಿ ವಿವರಿಸಿದ್ದಾರೆ.
ಆಮಂತ್ರಣ ಪತ್ರಿಕೆಯನ್ನು ಕೊಡುವ ನೆಪದಲ್ಲಿ ಒಂದಿಷ್ಟು ಸದ್ವಿಚಾರಗಳನ್ನು ಕೊಡುವ ಪ್ರಯತ್ನವನ್ನು ಪ್ರಸಾದ ಭಟ್ ಮಾಡಿದ್ದಾರೆ. ಈ ಆಮಂತ್ರಣ ಪತ್ರವನ್ನು ಯಾರೂ ಬಿಸಾಡುವಂತಿಲ್ಲ.
ಪುಸ್ತಕ ಪ್ರೀತಿ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಎಲ್ಲರೂ ಸಾಮಾಜಿಕ ಜಾಲತಾಣಗಳ ಅಡಿಯಾಳಾಗುತ್ತಿದ್ದಾರೆ. ಆಮಂತ್ರಣ ಪತ್ರಿಕೆಗಳೂ ಸಾಮಾಜಿಕ ಜಾಲತಾಣಗಳ ಮೂಲಕವೇ ಹಂಚಲ್ಪಡುತ್ತಿವೆ. ಆದರೆ ಇಲ್ಲೊಬ್ಬರು ತಮ್ಮ ಮಗನ ಉಪನಯನದ ಆಮಂತ್ರಣ ಪತ್ರಿಕೆಯನ್ನು ಪುಸ್ತಕದ ರೂಪದಲ್ಲಿ ಮುದ್ರಿಸಿದ್ದಾರೆ.