Advertisement

‘ನಾಗರಿಕರಲ್ಲಿಯೂ ಪೊಲೀಸಿಂಗ್‌ ಜಾಗೃತಿ ಅಗತ್ಯ’

02:55 AM Dec 19, 2018 | Karthik A |

ಪಡುಬಿದ್ರಿ: ಯಾವುದೇ ಪ್ರಕರಣಗಳು ನಡೆದಾಗ ಪೊಲೀಸರತ್ತ ಬೆಟ್ಟು ಮಾಡುವುದು ಸರಿಯಲ್ಲ. ನಾಗರಿಕರಲ್ಲಿಯೂ ಜಾಗೃತಿ ಮೂಡಬೇಕು, ಪ್ರತಿಯೊಬ್ಬನೂ ಪೊಲೀಸರಾಗಬೇಕು ಎಂದು ಪಡುಬಿದ್ರಿ ಠಾಣೆ ಪಿಎಸ್‌ಐ ಸತೀಶ್‌ ಎಂ. ಪಿ. ಸಲಹೆ ನೀಡಿದರು. ಅವರು ಡಿ. 18ರಂದು ಪಡುಬಿದ್ರಿ ಪೊಲೀಸ್‌ ಠಾಣೆ ವತಿಯಿಂದ ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘದ ಸಹಯೋಗದಲ್ಲಿ ಪಡುಬಿದ್ರಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ  ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಠಾಣೆಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ಸೂಕ್ತ ಸಾಕ್ಷ್ಯಾಧಾರವಿಲ್ಲದೆ ನಿಜವಾದ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಈ ರೀತಿಯಾಗದಂತೆ ಯುವಜನತೆ ಎಚ್ಚೆತ್ತುಕೊಳ್ಳಬೇಕು. ಅಪರಾಧಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಗಳು ನಡೆದಾಗ ಅದನ್ನು ಪಾಲಕರು ಅಥವಾ ಪೊಲೀಸರ ಗಮನಕ್ಕೆ ತರಲು ಹಿಂಜರಿಯದಿರಿ ಎಂದು ಪಿಎಸ್‌ಐ ಹೇಳಿದರು.

ವಿದ್ಯಾರ್ಥಿಗಳು ಹದಿಹರೆಯದಲ್ಲಿ ನಿರ್ದಿಷ್ಟ ಗುರಿಯಿಲ್ಲದೆ ಹುಡುಗಾಟ ಶೋಕಿಯಿಂದ ಕಳೆಯದಿರಿ. ಜೀವನದಲ್ಲಿ ಸಾಧನೆ ಮಾಡುವ ಛಲದೊಂದಿಗೆ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಬೇಕು. ವರ್ತಮಾನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವ್ಯವಹಾರಿಕಾ ಭಾಷೆಗಳ ಮೇಲೆ ಪ್ರಭುತ್ವ ಸಾದಿಸಬೇಕು. ದುಶ್ಚಟಗಳಿಂದ ದೂರವಿದ್ದು ಭವಿಷ್ಯದ ಬಗ್ಗೆ ಯೋಚಿಸಿ. ಸಾಮಾಜಿಕ ಜಾಲತಾಣಗಳನ್ನು ಸದುದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಿ ಎಂಬ ಕಿವಿ ಮಾತನ್ನೂ ಸತೀಶ್‌ ಹೇಳಿದರು. ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್‌ಕುಮಾರ್‌ ಅಪರಾಧ ತಡೆ ಜಾಗೃತಿ ಕರಪತ್ರವನ್ನು ಬಿಡುಗಡೆ ಮಾಡಿದರು. ಉಪಾಧ್ಯಕ್ಷ ಗುರುರಾಜ ಪೂಜಾರಿ, ಪಡುಬಿದ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲೆ ಯಶೋದಾ ಕೆ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next