ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪಾದರಾಯನಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಎಲ್ಲೆಡೆಯೂ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ನಿಯೋಜಿಸಿದೆ. ಕಿಡಿಗೇಡಿಗಳು ಧ್ವಂಸಗೊಳಿಸಿದ್ದ ರಸ್ತೆಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದ್ದು, ಪ್ರತಿ ರಸ್ತೆಯಲ್ಲಿ ಇಬ್ಬರು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅಗತ್ಯ ವಸ್ತುಗಳ ಕೊಂಡೊಯ್ಯಲು ಮನೆಗೆ ಒಬ್ಬರಂತೆ ನಿಗದಿತ ಸಮಯದಲ್ಲಿ ಹೊರಗಡೆ ಹೋಗಲು ಅವಕಾಶ ನೀಡಲಾಗಿದೆ.
ಬುಧವಾರ ಕೂಡ ಪೊಲೀಸರು ಮೂರು ಸುತ್ತು ಪಥ ಸಂಚಲನ ನಡೆಸಿದರು. ಒಂದು ಕ್ಷಣ ಪರಿಸ್ಥಿತಿ ಸಡಿಲಗೊಳ್ಳಲು ಬಿಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ನಗರ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿ ಪ್ರತೀ ದಿನ ಮೂರು ಸುತ್ತು ಸೀಲ್‌ಡೌನ್ ವಾರ್ಡ್ ಗಳಿಗೆ ಭೇಟಿ ನೀಡುತ್ತಿದ್ದಾರೆ. ಎಸಿಪಿ ಜತೆಗೆ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದು ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಈ ಮಧ್ಯೆಯೂ ಕೆಲವರು ಹಾಕಲಾಗಿದ್ದ ಬ್ಯಾರಿಕೇಡ್ ಹಾಗೂ ಶೀಟ್ ಗಳನ್ನು ಹತ್ತಿ ಓಡಾಡಲು ಯತ್ನಿಸುತ್ತಿರುವುದು ಕಂಡು
ಬಂತು. ಬಳಿಕ ಸ್ಥಳದಲ್ಲಿದ್ದ ಪೊಲೀಸರು ಎಚ್ಚರಿಕೆ ನೀಡಿದರು.
ಠಾಣೆ ಮುಂದೆ ಹೈಡ್ರಾಮಾ: ಜೆ.ಜೆ.ನಗರ ಠಾಣೆ ಮುಂದೆ ಬಂಧಿತರ ಪತ್ನಿ ಮತ್ತು ತಾಯಂದಿರು ದೊಡ್ಡ ಹೈಡ್ರಾಮಾವನ್ನೇ ಮಾಡಿದರು. ತಮ್ಮ ಪತಿ ಮತ್ತು ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ವಿನಾಕಾರಣ ಎಳೆದುತಂದಿದ್ದಾರೆ. ನಿರಪರಾಧಿಗಳು ಎಂದು ಗೋಗರೆಯುತ್ತಿದ್ದರು. ಅವರಿಂದಲೇ ತಮ್ಮ ಜೀವನ ನಡೆಯಬೇಕಿದೆ. ದಯವಿಟ್ಟು ಬಿಟ್ಟುಬಿಡುವಂತೆ ಕೇಳಿಕೊಳ್ಳುತ್ತಿದ್ದರು. ಬಳಿಕ ಹಿರಿಯ ಅಧಿಕಾರಿಗಳು ಮನವರಿಕೆ ಮಾಡಿ ಸ್ಥಳದಿಂದ ಕಳುಹಿಸಿದರು.
10 ಮಂದಿ ವಶಕ್ಕೆ
ಪಾದರಾಯನಪುರ ಪ್ರಕರಣ ಸಂಬಂಧ ಇದುವರೆಗೂ 150 ಮಂದಿಯನ್ನು ಬಂಧಿಸಲಾಗಿದೆ. ಬುಧವಾರ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ಇರ್ಫಾನ್ ಗಾಗಿ
ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.