Advertisement

ಐಟಿ ಕಚೇರಿಗೆ ಪೊಲೀಸ್‌ ಬಿಗಿ ಭದ್ರತೆ

11:48 AM Mar 29, 2019 | Lakshmi GovindaRaju |

ಬೆಂಗಳೂರು: ಮೈತ್ರಿ ಸರ್ಕಾರದ ಶಾಸಕರು, ಮಂತ್ರಿಗಳು ಹಾಗೂ ಪಕ್ಷಗಳ ಮುಖಂಡರು, ಬೆಂಬಲಿಗರ ಮೇಲಿನ ಐಟಿ ದಾಳಿ ಖಂಡಿಸಿ, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ವಿರುದ್ಧ ಮುಖ್ಯಮಂತ್ರಿ ನೇತೃತ್ವದಲ್ಲಿ ಇಡೀ ಸರ್ಕಾರವೇ ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿತು.

Advertisement

ಮುಖ್ಯಮಂತ್ರಿ ಸೇರಿ ಇಡೀ ಸರ್ಕಾರವೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಕ್ವೀನ್ಸ್‌ ರಸ್ತೆಯಲ್ಲಿರುವ ಐಟಿ ಕಚೇರಿಗೆ ಭಾರೀ ಭದ್ರತೆ ಒದಗಿಸಲಾಗಿತ್ತು. ಮಧ್ಯಾಹ್ನ 2ಗಂಟೆಯಿಂದಲೇ ಕಚೇರಿ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ಬ್ಯಾರಿಕೇಡ್‌ಗಳನ್ನು ಹಾಕಿ ಸುತ್ತಲು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.

ಇಬ್ಬರು ಡಿಸಿಪಿ ನೇತೃತ್ವದಲ್ಲಿ ಆರು ಮಂದಿ ಎಸಿಪಿ, 20 ಮಂದಿ ಇನ್ಸ್‌ಪೆಕ್ಟರ್‌ ಐದಕ್ಕೂ ಹೆಚ್ಚು ಕೆಎಸ್‌ಆರ್‌ಪಿ ತುಕಡಿಗಳು ಸೇರಿ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಸಂಚಾರ ದಟ್ಟಣೆ: ಮಧ್ಯಾಹ್ನ ಎರಡು ಗಂಟೆಯಿಂದಲೇ ಕ್ವೀನ್ಸ್‌ ರಸ್ತೆ ಹಾಗೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಕಡೆಯಿಂದ ಕಬ್ಬನ್‌ಪಾರ್ಕ್‌ ಮೆಟ್ರೋ ನಿಲ್ದಾಣ ಕಡೆ ಹೋಗುವ ಎಲ್ಲ ವಾಹನಗಳನ್ನು ಶಿವಾಜಿನಗರ ಕಡೆಗೆ ಚಲಿಸಲು ಸೂಚಿಸಲಾಗಿತ್ತು.

ಮಧ್ಯಾಹ್ನ 3.30ರ ಸುಮಾರಿಗೆ ಮುಖ್ಯಮಂತ್ರಿಗಳು ಹಾಗೂ ಇತರೆ ನಾಯಕರು ಆಗಮಿಸುತ್ತಿದ್ದಂತೆ ಐಟಿ ಕಚೇರಿ ಸುತ್ತಲು ಎಲ್ಲೆಡೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಹೀಗಾಗಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ವಿಧಾನಸೌಧ, ಇಂಡಿಯನ್‌ ಎಕ್ಸ್‌ಪ್ರೆಸ್‌ ವೃತ್ತ ಸುತ್ತ-ಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸಂಜೆ ಐದು ಗಂಟೆ ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Advertisement

ಕಾರ್ಯಕರ್ತರ ಬಂಧನ: ಸಂಜೆ ಐದು ಗಂಟೆ ಸುಮಾರಿಗೆ ಪ್ರತಿಭಟನೆ ಮುಕ್ತಾಯಗೊಳಿಸಿ ಹೊರಡುತ್ತಿದ್ದಂತೆ ಆದಾಯ ತೆರಿಗೆ ಇಲಾಖೆ ನಾಮಫ‌ಲಕ ಕಂಡ ಕಾಂಗ್ರೆಸ್‌ ಹಾಗೂ ಎನ್‌ಎಸ್‌ಯುಐನ ಕೆಲ ಕಾರ್ಯಕರ್ತರು ಆಕ್ರೋಶಗೊಂಡು ಕಪ್ಪು ಮಸಿ ಬಳಿಯಲು ಮುಂದಾದರು.

ಐಟಿ ಕಚೇರಿ, ಪೊಲೀಸ್‌, ಭದ್ರತೆ, IT office, police, securityಐಟಿ ಕಚೇರಿಯ ಕಾಂಪೌಂಡ್‌ ಏರಿದ ಕಾರ್ಯಕರ್ತನೊಬ್ಬ ಕಪ್ಪು ಬಣ್ಣದ ಸ್ಪ್ರೆ ಸಿಂಪಡಿಸಲು ಯತ್ನಿಸಿದ. ಇದನ್ನು ಕಂಡ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದರು. ಆತನ ನೆರವಿಗೆ ಧಾವಿಸಿದ ಇತರೆ ಕಾರ್ಯಕರ್ತರು ಪೊಲೀಸರ ಜತೆ ವಾಗ್ವಾದಕ್ಕೀಳಿದರು. ಕೂಡಲೇ ಎಲ್ಲರನ್ನು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ಲಘುಲಾಠಿ ಪ್ರಹಾರ ಕೂಡ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next