ಬಜಪೆ: ಬಜಪೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಇಬ್ಬರು ಬಂಧಿತ ಆರೋಪಿಗಳಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಪೊಲೀಸರಿಗೆ ಯಾವುದೇ ತೊಂದರೆಯಾಗದಂತೆ ಸುವ್ಯವಸ್ಥೆ ಹಾಗೂ ಪರಾರಿಯಾದ ಇತರ ಆರೋಪಿಗಳನ್ನು ಸಹ ಕೋವಿಡ್ ಪರೀಕ್ಷೆಗೊಳಪಡಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಬಜಪೆಯ ಪೊಲೀಸ್ ಠಾಣೆ ಸೀಲ್‌ಡೌನ್ ಆದ ಹಿನ್ನೆಲೆಯಲ್ಲಿ ಪೊಲೀಸರಿಗೆ ಒದಗಿಸಲಾದ ವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ಪೊಲೀಸ್ ವಠಾರ ಮತ್ತು ಶಾಸಕರ ಕಚೇರಿಗೆ ಭೇಟಿ ನೀಡಿ ಬಳಿಕ ಮಾತನಾಡಿದರು.
ಬಜಪೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಆರ್. ನಾಯ್ಕ ಹಾಗೂ ಸಿಬಂದಿ, ಜಿ.ಪಂ. ಸದಸ್ಯೆ ವಸಂತಿ ಕಿಶೋರ್, ತಾ.ಪಂ. ಸದಸ್ಯೆ ಉಷಾ ಸುವರ್ಣ, ಬಜಪೆ ಗ್ರಾ.ಪಂ. ಅಧ್ಯಕ್ಷೆ ರೋಜಿ ಮಥಾಯಸ್, ಜಿ.ಪಂ. ಮಾಜಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಭೂ ನ್ಯಾಯಮಂಡಳಿ ಸದಸ್ಯ ಜಯಂತ್ ಸಾಲ್ಯಾನ್ ತೋಕೂರು, ಮಳವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್ ಅರ್ಬಿ, ಬಜಪೆ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸುಧಾಕರ ಕಾಮತ್, ಪೆರ್ಮುದೆ ಗ್ರಾ.ಪಂ. ಉಪಾಧ್ಯಕ್ಷ ಕಿಶೋರ್, ಮೂಡುಬಿದಿರೆ ಬಿಜೆಪಿ ಮಂಡಲದ ಹಿಂದುಳಿದ ವರ್ಗದ ಅಧ್ಯಕ್ಷ ರಾಜೇಶ್ ಅಮೀನ್ ಆರ್.ಕೆ., ಲೋಕೇಶ್ ಪೂಜಾರಿ, ಸುಮಾ ಶೆಟ್ಟಿ, ಬಜಪೆ ಪಿಡಿಒ ಸಾಯೀಶ್ ಚೌಟ, ಚಿತ್ರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸ್ಯಾನಿಟೈಸ್ ಮಾಡಲಾಗಿದೆ
ಈಗಾಗಲೇ 8 ಮಂದಿ ಪೊಲೀಸರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 54 ಮಂದಿ ಪೊಲೀಸರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕೊರತೆ ಇಲ್ಲದಂತೆ ನೋಡಬೇಕಾಗಿದೆ. ಈ ಬಗ್ಗೆ ಗ್ರಾ.ಪಂ., ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕರ್ತವ್ಯದ ಬಗ್ಗೆ ಚರ್ಚಿಸಲಾಗಿದೆ. ಬಜಪೆ ಪೊಲೀಸ್ ಠಾಣೆ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಗ್ರಾ.ಪಂ.ಕಚೇರಿಯನ್ನು, ಪೊಲೀಸ್ ವಸತಿಗೃಹಗಳನ್ನು ಈಗಾಗಲೇ ಸ್ಯಾನಿಟೈ ಸೇಶನ್ ಮಾಡಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.