ಉಡುಪಿ: ತನ್ನ ಪತ್ನಿಯನ್ನು ಚುಡಾಯಿಸಿದ ವ್ಯಕ್ತಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಓರ್ವರನ್ನು ಅಮಾನತು ಮಾಡಿದ ಘಟನೆ ಸಂಭವಿಸಿದೆ.
ಹಲ್ಲೆಗೊಳಗಾದ ವ್ಯಕ್ತಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಪ್ರಕಾಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್‌ಪಿ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ. ಆದರೆ ಇಡೀ ಘಟನೆ ರಾಜಕೀಯ ಪ್ರೇರಿತ. ಜಿಲ್ಲಾ ಉಸ್ತುವಾರಿ ಸಚಿವರು ಒತ್ತಡ ತಂದು ನನ್ನನ್ನು ಅಮಾನತು ಮಾಡಿಸಿದ್ದಾರೆ ಎಂದು ಪೊಲೀಸ್ ಕಾನ್‌ಸ್ಟೆಬಲ್ ಪ್ರಕಾಶ್ ತಿಳಿಸಿದ್ದಾರೆ. ಸಚಿವರ ಫಿಶ್‌ಮೀಲ್ ಕಂಪೆನಿಯಲ್ಲಿರುವ ಕಾರ್ಮಿಕರಿಬ್ಬರು ತನ್ನ ಪತ್ನಿಯನ್ನು ಚುಡಾಯಿಸಿದ್ದು, ಅವರನ್ನು ರಕ್ಷಿಸಿ ತನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ವೈರಲ್ ಆದ ಆಡಿಯೋ: ಪೊಲೀಸ್ ಪ್ರಕಾಶ್ ಅವರು ಇಡೀ ಘಟನೆಯ ಕುರಿತಂತೆ ಸಮಗ್ರವಾಗಿ ವಿವರಿಸಿದ ಆಡಿಯೋ ಒಂದು ಶನಿವಾರ ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತನಗೆ ಅನ್ಯಾಯವಾಗಿದೆ ಎಂದು ಅಲವತ್ತುಕೊಂಡಿದ್ದಾರೆ.
ಆಡಿಯೋದಲ್ಲೇನಿದೆ: ಪ್ರಕಾಶ್ ಅವರು ಪೊಲೀಸ್ ಸಿಬಂದಿ ಸಂಘದ ರಾಜ್ಯ ನಾಯಕ ಶಶಿಧರ್ ಅವರೊಂದಿಗೆ ಮಾತನಾಡಿದ್ದು ಎನ್ನಲಾದ ಆಡಿಯೋ ಹರಿದಾಡುತ್ತಿದೆ. “ನಾನು ಮತ್ತು ಗರ್ಭಿಣಿ ಪತ್ನಿ ಔಷಧಕ್ಕೆಂದು ಆಸ್ಪತ್ರೆಗೆ ಹೋಗಿ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪತ್ನಿಯನ್ನು ಚುಡಾಯಿಸಿದರು. ಅವರು ಮತ್ತೆ ಮತ್ತೆ ಚುಡಾಯಿಸಿದಾಗ ಆಕ್ಷೇಪಿಸಿ ಕೈಯಿಂದ ಹಲ್ಲೆ ನಡೆಸಿದೆ. ಅನಂತರ ಪತ್ನಿಯ ಮೂಲಕ ದೂರು ನೀಡಿದೆ. ಆದರೆ ನನ್ನ ದೂರನ್ನು ಸ್ವೀಕರಿಸಲಿಲ್ಲ.
ಚುಡಾಯಿಸಿದ ವ್ಯಕ್ತಿಗಳು ಸಚಿವರ ಫಿಶ್‌ಮೀಲ್ ಕಂಪೆನಿಯ ಉದ್ಯೋಗಿಗಳಂತೆ. ಅವರು ಸಚಿವರ ಮೇಲೆ ಒತ್ತಡ ತಂದು ಕೇಸು ದಾಖಲಿಸದಂತೆ ಮಾಡಿ ಅನಂತರ ನನ್ನನ್ನು ಮತ್ತು ಎಸ್‌ಐ ಅವರನ್ನು ಕಂಪೆನಿಗೆ ಕರೆಸಿಕೊಂಡು ಅಲ್ಲಿ ನೂರಾರು ಉದ್ಯೋಗಿಗಳ ಸಮ್ಮುಖದಲ್ಲಿ ರಾಜಿಯಲ್ಲಿ ಇತ್ಯರ್ಥಪಡಿಸಲು ಒತ್ತಾಯ ಮಾಡಿದರು. ಎಸ್‌ಐ ಸೂಚನೆಯಂತೆ ಅದಕ್ಕೆ ಒಪ್ಪಿದ ಬಳಿಕ ಉದ್ಯೋಗಿಗೆ ಚಿಕಿತ್ಸೆ ಕೊಡಿಸುವಂತೆಯೂ ಆಗ್ರಹಿಸಿದರು. ಎಲ್ಲವೂ ಆದ ಬಳಿಕ ಮೇಲಧಿಕಾರಿಗಳ ಸೂಚನೆಯಂತೆ ನನ್ನನ್ನು ಅಮಾನತು ಮಾಡಲಾಗಿದೆ’ ಎಂದು ಆಡಿಯೋದಲ್ಲಿ ದೂರಿಕೊಂಡಿದ್ದಾರೆ.