ಬೆಂಗಳೂರು: ಕರ್ತವ್ಯಲೋಪ ಹಾಗೂ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಸಂಘಟಿತ ಅಪರಾಧ ದಳದ ಇನ್‌ಸ್ಪೆಕ್ಟರ್ ಹಾಗೂ ಮುಖ್ಯಪೇದೆಯನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಇನ್‌ಸ್ಪೆಕ್ಟರ್ ಆರ್. ಪ್ರಕಾಶ್ ಹಾಗೂ ಮುಖ್ಯಪೇದೆ ಸತೀಶ್ ಅಮಾನತುಗೊಂಡವರು. ಅಧಿಕ ಬಡ್ಡಿ ನೀಡುವುದಾಗಿ ಸಾರ್ವಜನಿಕರಿಂದ ನೂರಾರು ಕೋಟಿ ರೂ. ಹಣ ಹೂಡಿಕೆ ಮಾಡಿಸಿದ್ದ ಜಯನಗರದ ಎಐಎಂಎಂಎಸ್ ಎಂಬ ಕಂಪನಿ ನೂರಾರು ಮಂದಿಗೆ ವಂಚಿಸಿತ್ತು. ಈ ಸಂಬಂಧ ಅಧಿಕೃತವಾಗಿ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿರಲಿಲ್ಲ. ಜತೆಗೆ ಹಿರಿಯ ಅಧಿಕಾರಿಗಳಿಗೂ ಈ ವಿಚಾರ ತಿಳಿದಿರಲಿಲ್ಲ.
ಆದರೂ ಇನ್‌ಸ್ಪೆಕ್ಟರ್ ಆರ್.ಪ್ರಕಾಶ್ ಮತ್ತು ಹೆಡ್‌ಕಾನ್‌ಸ್ಟೆಬಲ್ ಸತೀಶ್ ಕೆಲ ದಿನಗಳ ಹಿಂದೆ ವಂಚಿತ ಕಂಪನಿ ಕಚೇರಿಗೆ ತೆರಳಿ, ತಾನು ಸಿಸಿಬಿ ಎಸಿಪಿ ಎಂದು ಪರಿಚಯ ಮಾಡಿಕೊಂಡಿದಲ್ಲದೆ, ನಿಮ್ಮ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣ ಮುಚ್ಚಿ ಹಾಕಲು ಒಂದು ಕೋಟಿ ರೂ. ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಕಂಪನಿ ಮಾಲೀಕರು ನೇರವಾಗಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕಾಶ್ ಹಾಗೂ ಹೆಡ್‌ಕಾನ್‌ಸ್ಟೆಬಲ್ ಸತೀಶ್ ವಿರುದ್ಧ ಆಂತರಿಕ ತನಿಖೆ ನಡೆಸಿದ ಸಿಸಿಬಿಯ ಹಿರಿಯ ಅಧಿಕಾರಿಗಳು, ಆರೋಪ ಸಾಬೀತಾಗಿರುವುದಾಗಿ ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಇಬ್ಬರನ್ನು ನಗರ ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ಹೇಳಿದರು.
ಆರೋಪಿ ರಕ್ಷಣೆ ಸಂಚು: ಬಹುಕೋಟಿ ವಂಚನೆ ಮಾಡಿದ ಅಜ್ಮಿàರಾ ಕಂಪನಿ ಮುಖ್ಯಸ್ಥ ತಬ್ರೇಜ್‌ಗಾಗಿ ಇಡೀ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ, ನೇರವಾಗಿ ಆರೋಪಿಯ ಜತೆ ನಿರಂತರ ಸಂಪರ್ಕದಲ್ಲಿದ್ದ ಪ್ರಕಾಶ್ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಆತನನ್ನು ರಕ್ಷಿಸಲು ಮುಂದಾಗಿದ್ದರು.
ಜತೆಗೆ ಕೆಲ ತಿಂಗಳ ಹಿಂದೆ ಲಕ್ಕಸಂದ್ರ ವಿಜಯ್ ಅಲಿಯಾಸ್ ಕೇಬಲ್ ವಿಜಿ ಕೊಲೆ ಪ್ರಕರಣದ ಆರೋಪಿಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಿಳಿಸದೆ ಬಂಧಿಸಿದ್ದರು. ಈ ಮೂಲಕ ಕರ್ತವ್ಯ ಲೋಪ ಎಸಗಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ಹೇಳಿದರು.
ಒಂದು ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟು ಸಿಸಿಬಿ ಇನ್ಸ್‌ಪೆಕ್ಟರ್ ಅಮಾನತುಗೊಂಡಿರುವ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಮಾತನಾಡುವೆ. ಇತ್ತೀಚೆಗೆ ನಡೆದ ಪೊಲೀಸ್ ಇಲಾಖೆ ಪ್ರಗತಿ ಪರಿಸೀಲನೆ ಸಭೆಯಲ್ಲೂ ಇಂತಹ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಬಹಳ ದೊಡ್ಡ ಬದಲಾವಣೆ ತರುತ್ತೇವೆ
-ಎಂ.ಬಿ.ಪಾಟೀಲ್, ಗೃಹ ಸಚಿವ