Advertisement

ಲಿಂಗಸುಗೂರಿನಲ್ಲಿ ಪೊಲೀಸ್‌ ಕಣ್ಗಾವಲು

02:45 PM Aug 27, 2019 | Team Udayavani |

ಲಿಂಗಸುಗೂರು: ಫೇಸ್‌ಬುಕ್‌ ಹಾಗೂ ವ್ಯಾಟ್ಸಪ್‌ನಲ್ಲಿ ಹಿಂದೂ ನಾಯಕರನ್ನು ಅವಮಾನಿಸುವ ರೀತಿ ಫೋಟೋ ಮತ್ತು ಸಂದೇಶ ಹಾಕಿದ್ದರಿಂದಾಗಿ ರವಿವಾರ ನಡೆದ ಗಲಭೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ 144 ಕಲಂನಡಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪೊಲೀಸರು ಬೀಡು ಬಿಟ್ಟಿದ್ದಾರೆ.

Advertisement

ಶಾಂತಿಗೆ ಹೆಸರುವಾಸಿಯಾಗಿದ್ದ ಪಟ್ಟಣದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಕಿಡಿಗೇಡಿ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಶಿವಾಜಿ, ವಾಲ್ಮೀಕಿ ಹಾಗೂ ಸಂಗೊಳ್ಳಿ ರಾಯಣ್ಣ ಭಾವಚಿತ್ರಗಳಿಗೆ ಅವಮಾನ ಮಾಡಿದ ಪೋಸ್ಟ್‌ ಹಾಕಿದ್ದು ಪಟ್ಟಣದಲ್ಲಿ ಗಲಭೆಯಾಗಲು ಕಾರಣವಾಗಿದೆ. ಈ ಪ್ರಕರಣಕ್ಕೆ ಕಾರಣನಾದ ಕಿಡಿಗೇಡಿ ಯುವಕ ಸೈಯದ್‌ ಬಿನ್‌ ಅಹಮ್ಮದ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಪರ ಮಾತನಾಡಿದ್ದ ಮಂಜುನಾಥನ ಮೇಲೆ ಹಲ್ಲೆ ಹಾಗೂ ದಾಂಧಲೆ ನಡೆಸಿದ್ದ 11 ಜನರನ್ನು ರವಿವಾರ ಬಂಧಿಸಿದ್ದ ಪೊಲೀಸರು ಸೋಮವಾರ ಬಿಡುಗಡೆ ಮಾಡಿದ್ದಾರೆ.

ಬಿಗಿ ಭದ್ರತೆ: ಪಟ್ಟಣದಲ್ಲಿ ರವಿವಾರ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳ, ರಸ್ತೆ, ಮಸೀದಿಗಳಿಗೆ ಪೊಲೀಸರು ಬಿಗಿ ಬಂದೋಬಸ್ತ್ಗೆ ಕ್ರಮ ವಹಿಸಿದ್ದಾರೆ.

ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಡಿವೈಎಸ್‌ಪಿ 3, ಸಿಪಿಐ 9, ಪಿಎಸ್‌ಐ 11, ಡಿಆರ್‌ ಎರಡು ವಾಹನಗಳು ಸೇರಿ ಸುಮಾರು 400 ಜನ ಪೊಲೀಸರು ಪಟ್ಟಣದ ಬಸ್‌ ನಿಲ್ದಾಣ, ವಿವಿಧೆಡೆಯಲ್ಲಿರುವ ದರ್ಗಾ, ಮಸೀದಿಗಳಿಗೆ ಹಾಗೂ ತಾಲೂಕಿನ ಆನೆಹೊಸೂರು, ಯರಡೋಣಾ, ಕರಡಕಲ್, ಕಸಬಾಲಿಂಗಸುಗೂರು ಸೇರಿ ಇತರ ಕಡೆಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಇದಲ್ಲದೆ ಆರೋಪಿ ಮನೆಯವರಿಗೆ ಸೇರಿದ್ದ ಸಾಮಿಲ್ಗೂ ಪೊಲೀಸ್‌ ಕಾವಲು ಹಾಕಲಾಗಿತ್ತು. ಪೊಲೀಸ್‌ ಅಧಿಕಾರಿಗಳು ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next