Advertisement

ಗಡಿ ಪ್ರದೇಶಗಳಲ್ಲಿ ಪೊಲೀಸರ ಹದ್ದಿನ ಕಣ್ಣು!

12:23 PM Mar 30, 2020 | Suhan S |

ಶಿವಮೊಗ್ಗ: ನಗರದಿಂದ 20 ಕಿಲೋ ಮೀಟರ್‌ ದೂರದಲ್ಲಿರುವ ಶಿವಮೊಗ್ಗ ತಾಲೂಕಿನ ಗಡಿ ಪ್ರದೇಶ ಸವಳಂಗ ರಸ್ತೆಯ ಸುತ್ತುಕೋಟೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು, ಜಿಲ್ಲಾಡಳಿತದಿಂದ ಚೆಕ್‌ ಪೋಸ್ಟ್‌ ನಿರ್ಮಿಸಿದ್ದಾರೆ. ಎಲ್ಲಾ ವಾಹನಗಳ ತಪಾಸಣೆ ನಡೆಸಿ ಅಗತ್ಯ ವಸ್ತು ಸೇವೆಗೆ ಮಾತ್ರ ಬಳಕೆಯಾಗುವ ವಾಹನಗಳಿಗೆ ಪ್ರವೇಶ ನೀಡಲಾಗುತ್ತಿದೆ.

Advertisement

ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ವಾಹನವನ್ನು ತಪಾಸಣೆ ಮಾಡಿ ಅದರಲ್ಲಿರುವ ವ್ಯಕ್ತಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವ ಮೂಲಕ ಅವರ ಬಳಿ ಓಡಾಡಲು ದಾಖಲೆ ಇದ್ದಲ್ಲಿ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಇದೇ ಸಮಯದಲ್ಲಿ ನೂರಾರು ವಾಹನಗಳು ತಪಾಸಣಾ ಕೇಂದ್ರದ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ಹಾಲಿನ ವಾಹನಗಳು, ತರಕಾರಿ ವಾಹನಗಳನ್ನು ದಾಖಲೆಗಳ ಪರಿಶೀಲನೆ ಮಾಡಿ ಬಿಡಲಾಗುತ್ತಿದೆ. ಗ್ರಾಮಸ್ಥರು ಕೂಡ ಅನಗತ್ಯವಾಗಿ ಸಂಚರಿಸುತ್ತಿರುವುದು ಕಂಡು ಬಂದಿದೆ.

ಅನಗತ್ಯವಾಗಿ ಓಡಾಡುವ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದು, ತುರ್ತು ಸೇವೆಯ ವಾಹನಗಳಿಗೆ ಇದರಿಂದ ತೊಂದರೆಯಾಗಿದೆ. ರೋಗಿಗಳು ಕೂಡ ತೆರಳಲು ತೊಂದರೆಯಾಗಿದ್ದು, ಜಿಲ್ಲಾಡಳಿತ ಅಗತ್ಯ ಸೇವೆಯ ವಾಹನಗಳಿಗೆ ತುರ್ತಾಗಿ ಅನುಮತಿ ನೀಡುವ ಅಗತ್ಯವಿದೆ. ಚೆಕ್‌ಪೋಸ್ಟ್‌ ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು ಪ್ರತಿ ವಾಹನ ಸವಾರನೂ ಚೆಕ್‌ಪೋಸ್ಟ್‌ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿರುವುದು ಕಂಡು ಬಂದಿದೆ.  ಕೋವಿಡ್ 19 ಸೋಂಕು ಹರಡುತ್ತಿರುವ ಗಂಭೀರತೆಯ ಅರಿವನ್ನು ನಾಗರಿಕರು ಇನ್ನೂ ತಿಳಿದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಬಗೆ ಬಗೆ ಕಾರಣ: ನಗರ ಸುತ್ತುತ್ತಿರುವ ಅನೇಕರು ಮನೆಯಲ್ಲಿದ್ದ ಹಳೇ ಔಷಧ ಬಿಲ್‌ಗ‌ಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಕೆಲವರು 2018, 2019ರ ಬಿಲ್‌ ಗಳನ್ನು ಕಂಡು ದಂಗಾಗಿದ್ದಾರೆ. ಇನ್ನೂ ಕೆಲವರು ಅವರಿಗೆ ಹುಷಾರಿಲ್ಲ, ಇವರಿಗೆ ಹುಷಾರಿಲ್ಲ, ತರಕಾರಿ, ಹಾಲು ಇತರೆ ಕಾರಣ ಹೇಳುತ್ತಿದ್ದಾರೆ. ಮನೆಯಲ್ಲಿ ಕೂರಲು ಆಗದ ಯುವಕರು ಡಬಲ್‌, ತ್ರಿಬಲ್‌ ರೈಡಿಂಗ್‌ ಮಾಡಿಕೊಂಡು ಮುಖ್ಯ ರಸ್ತೆಗಳಲ್ಲಿ ಅಲೆಯುತ್ತಿದ್ದಾರೆ. ಇಂತವರಿಗೆ ಲಾಠಿ ರುಚಿ ತೋರಿಸಿ ಸುಸ್ತಾದ ಪೊಲೀಸರು ಈಗ ಬೈಕ್‌ಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

ಮಾಂಸಕ್ಕೆ ಕ್ಯೂ: ಮೀನು, ಮೊಟ್ಟೆ, ಮಾಂಸ ಸಿಗದೇ ಸಿಗದೇ ಕಂಗಾಲಾಗಿರುವ ಸಾರ್ವಜನಿಕರು ಭಾನುವಾರ ಕೂಡ ಮುಗಿಬಿದ್ದಿದ್ದರು. ಮಾಂಸ ಮಾರಾಟಕ್ಕೆ ಅವಕಾಶವಿದ್ದರೂ ಬಹುತೇಕ ಅಂಗಡಿಗಳು ಓಪನ್‌ ಆಗಿಲ್ಲ. ಇರುವ ಒಂದೆರಡು ಕಡೆಯೇ ಜನ ಕಿಕ್ಕಿರಿದು ಖರೀದಿ ಮಾಡುತಿದ್ದಾರೆ. ಕೆಲವೆಡೆ ಅಂತರ ಕಾಯ್ದುಕೊಂಡು ಜನ ತಮಗೆ ಬೇಕಾದಷ್ಟು ಮಾಂಸ ಖರೀದಿ ಮಾಡಿದರು. ಸಾಕಷ್ಟು ಡಿಮ್ಯಾಂಡ್‌ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪ್ರತಿ ಕೆಜಿ ಕುರಿ ಮಾಂಸ 600 ಹಾಗೂ ಅದಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರ ಜತೆಗೆ ಎಂದಿಗಿಂತ ದುಪ್ಪಟ್ಟು ಬೆಲೆಗೆ ಮೀನು ಮಾರಾಟವಾಗುತ್ತಿತ್ತು. ಗ್ರಾಹಕರು ದುಪ್ಪಟ್ಟು ಬೆಲೆ ಕೊಡಬೇಕಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next