Advertisement

ಅತ್ಯಾಚಾರ ಆರೋಪಿ, ಜೈಲಿನಿಂದ ತಪ್ಪಿಸಿಕೊಂಡವನಿಗೆ 7 ವರ್ಷ ಸಜೆ

01:15 AM Jul 09, 2017 | Team Udayavani |

ಮಂಗಳೂರು:  ಮಾರ್ಚ್‌ ತಿಂಗಳಲ್ಲಿ ಮಂಗಳೂರು ಜೈಲಿನಿಂದ ಪರಾರಿಯಾಗಿ ಬಳಿಕ ಐದು ದಿನಗಳಲ್ಲಿ ಸಿಕ್ಕಿ ಬಿದ್ದ ವಿಚಾರಣಾಧೀನ ಕೈದಿ ಅತ್ಯಾಚಾರ ಪ್ರಕರಣದ ಆರೋಪಿ ಬೆಳ್ತಂಗಡಿ ತಾಲೂಕು ಪಡಂಗಡಿ ಗರ್ಡಾಡಿ ಗ್ರಾಮದ ಬೋಳ್ಕಲ್ಲುಗುಡ್ಡದ ಜಿನ್ನಪ್ಪ ಪರವ (44) ನಿಗೆ ಮಂಗಳೂರಿನ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 7 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. 

Advertisement

ಘಟನೆಯ ವಿವರ: ಜಿನ್ನಪ್ಪ ಪರವ ಮನೆಯಲ್ಲಿ ಒಬ್ಬನೇ ಇದ್ದು, 2015 ರಲ್ಲಿ  21 ವರ್ಷ ಪ್ರಾಯದ ಯುವತಿಗೆ ಮಿಸ್ಡ್ ಕಾಲ್‌ ನೀಡಿದ್ದು, ಈ ಮೂಲಕ ಯುವತಿಗೆ ಆತನ ಪರಿಚಯವಾಗಿತ್ತು. ಆಕೆಗೆ ಗೇರು ಬೀಜ ಕಾರ್ಖಾನೆಯಲ್ಲಿ  ಉದ್ಯೋಗ ತೆಗೆಸಿ ಕೊಡುವ ಭರವಸೆ ನೀಡಿದ್ದ ಆತ 2015 ಆಗಸ್ಟ್‌  19 ರಂದು ಆಟೋ ರಿಕ್ಷಾದಲ್ಲಿ  ಆಕೆಯನ್ನು ಕರೆದೊಯ್ದಿದ್ದ. ಹಾಗೆ ಗೇರು ಬೀಜ ಕಾರ್ಖಾನೆಗೆ ಹೋಗುವ ದಾರಿಯಲ್ಲಿ  ಆತ ಆಕೆಯನ್ನು ತನ್ನ ಮನೆಗೆ ಕರೆದೊಯ್ದು  ರಾತ್ರಿ ವೇಳೆ ಮನೆಯಲ್ಲಿ ಉಳಿಸಿಕೊಂಡಿದ್ದ ಹಾಗೂ ಆಕೆಗೆ ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದನು. ಮರುದಿನ ಆಕೆಯನ್ನು ಮನೆಗೆ ಕಳುಹಿಸಿ ಕೊಟ್ಟಿದ್ದನು ಎಂದು ಆರೋಪಿಸಲಾಗಿತ್ತು. 

ಯುವತಿ ಎರಡು ದಿನಗಳ ಬಳಿಕ ವಿಷಯವನ್ನು ಮನೆ ಮಂದಿಗೆ ತಿಳಿಸಿದ್ದು, ಅದರಂತೆ ಆಗಸ್ಟ್‌  24 ರಂದು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿದ್ದ ಪೊಲೀಸರು ಆಗಸ್ಟ್‌  26ರಂದು ಆತನನ್ನು ಬಂಧಿಸಿದ್ದರು.

ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅನಿಲ್‌ ಕುಲಕರ್ಣಿ ಅವರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ನಕಲಿ ಹೆಸರು ನೀಡಿದ್ದ
ಆರೋಪಿಯು ಪ್ರಾರಂಭದಲ್ಲಿ  ಯುವತಿಗೆ ತನ್ನ ಹೆಸರು ದಿಲೀಪ್‌ ಎಂದೇ ಪರಿಚಯಿಸಿದ್ದನು. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕವವಷ್ಟೇ ಆತನ ನಿಜ ಹೆಸರು ಜಿನ್ನಪ ಪರವ ಎಂಬುದಾಗಿ ಆಕೆಗೆ ಗೊತ್ತಾಗಿತ್ತು. 
ಪ್ರಕರಣದ ವಿಚಾರಣೆಯನ್ನು  ಕೈಗೆತಿಕೊಂಡ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ  ಡಿ.ಟಿ. ಪುಟ್ಟರಂಗ ಸ್ವಾಮಿ ಅವರು ಶುಕ್ರವಾರ ಆರೋಪಿಗೆ ಅತ್ಯಾಚಾರ (ಐಪಿಸಿ ಸೆಕ್ಷನ್‌ 376) ಆರೋಪಕ್ಕಾಗಿ 7 ವರ್ಷ ಕಠಿನ ಸಜೆ ಹಾಗೂ ಜೀವ ಬೆದರಿಕೆ ಹಾಕಿದ (ಐಪಿಸಿ ಸೆಕ್ಷನ್‌ 506) ಆರೋಪಕ್ಕಾಗಿ 4 ತಿಂಗಳ ಸಜೆ ಮತ್ತು 500 ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ. 

Advertisement

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಓಲ್ಗಾ ಮಾರ್ಗರೆಟ್‌ ಕ್ರಾಸ್ತಾ ಅವರು ವಾದಿಸಿದ್ದರು. ಒಟ್ಟು  15 ಸಾಕ್ಷಿಗಳನ್ನು ವಿಚಾರಣೆಗೆ ಒಳ ಪಡಿಸಲಾಗಿತ್ತು. 

ಜೈಲಿನಿಂದ ತಪ್ಪಿಸಿಕೊಂಡಿದ್ದ
ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನಕ್ಕೊಳಗಾಗಿ ವಿಚಾರಣಾಧೀನ ಕೈದಿಯಾಗಿದ್ದ  ಜಿನ್ನಪ್ಪ ಪರವ ಮಂಗಳೂರೆ ಜಿಲ್ಲಾ  ಜೈಲಿನಲ್ಲಿ ಅಡುಗೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದನು. 

ಗ್ಯಾಸ್‌ ಸಿಲಿಂಡರ್‌ ಆನ್‌ ಮಾಡಿ ಸ್ಟವ್‌ ಉರಿಸುವುದು ಆತನ ಕಾಯಕವಾಗಿದ್ದು, ಕಳೆದ ಮಾ.  9ರಂದು ಗ್ಯಾಸ್‌ ಆನ್‌ ಮಾಡಲು ಮುಂಜಾನೆ 4 ಗಂಟೆ ವೇಳೆಗೆ ಹೋಗಿದ್ದವನು ಕಾವಲುಗಾರನ ಕಣ್ತಪ್ಪಿಸಿ ಜೈಲಿನ ಗೋಡೆ ಹತ್ತಿ ಪರಾರಿಯಾಗಿದ್ದನು. ಮಾ. 14ರಂದು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಲ್ಲಿ ಆತ ಮರು ಬಂಧಿತನಾಗಿದ್ದನು. 

ಉಡುಪಿಗೆ ಸ್ಥಳಾಂತರ 
ಮಂಗಳೂರು ಜೈಲಿನಿಂದ ತಪ್ಪಿಸಿಕೊಂಡ ಕಾರಣಕ್ಕಾಗಿ ಆತನ ಮೇಲೆ ಇನ್ನೊಂದು ಪ್ರಕರಣ ದಾಖಲಾಗಿದೆ ಮಾತ್ರವಲ್ಲದೆ ಇದೀಗ ಒಂದು ತಿಂಗಳ ಹಿಂದ ಆತನನ್ನು ಉಡುಪಿಯ ಜೈಲಿಗೆ ಸ್ಥಳಾಂತರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next