Advertisement

ಪೊಲೀಸರು ಜನಸ್ನೇಹಿಯಾಗಿರಬೇಕು: ಯಡಿಯೂರಪ್ಪ

08:04 AM Nov 21, 2020 | mahesh |

ಬೆಂಗಳೂರು: ನಮ್ಮ ಪೊಲೀಸರು ವಿಶ್ವಾಸಾರ್ಹತೆ ಹಾಗೂ ದಕ್ಷತೆಗೆ ಖ್ಯಾತರಾದವರು. ಅಪರಾಧ ನಿಯಂತ್ರಣ, ಸಂಚಾರ ಸುರಕ್ಷೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಿ ಜನರಿಗೆ ಅತ್ಯುತ್ತಮ ಸೇವೆ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯವರ ಪದಕ ವಿಜೇತ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿಗೆ ಪದಕ ಪ್ರದಾನಿಸಿ ಅವರು ಮಾತನಾಡಿದರು.

ಪೊಲೀಸ್‌ ಠಾಣೆಗಳಿಗೆ ಬರಲು ಸಾರ್ವಜನಿಕರು ಹೆದರುವ ವಾತಾವರಣ ಇರಬಾರದು. ಅಲ್ಲಿ ಬಂದರೆ ತಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡಿಸಬೇಕು. ಪೊಲೀಸರಿಗೆ ಅಗತ್ಯ ಸೌಕರ್ಯ ಒದಗಿಸಲು ಸರಕಾರ ಬದ್ಧವಾಗಿದೆ. ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದ ದೂರು ಗಳನ್ನು ಸ್ವೀಕರಿಸಲು ಹಾಗೂ ಮುಂದಿನ ಕ್ರಮಕ್ಕಾಗಿ ಒನ್‌ ಸ್ಟಾಪ್‌ ವ್ಯವಸ್ಥೆ ರೂಪಿಸಲಾಗಿದೆ. ಇಲಾಖೆಯಲ್ಲಿ ಇನ್ನಷ್ಟು ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ಸಿಬಂದಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಸಮಾಜದ ಶಾಂತಿಯನ್ನು ಕದಡುವ ಶಕ್ತಿಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಆನ್‌ಲೈನ್‌ ಗೇಮ್ಸ್‌ ನಿಷೇಧಕ್ಕೆ ಕಾನೂನು
ಆನ್‌ಲೈನ್‌ ಗೇಮ್ಸ್‌ ನಿಷೇಧಿಸಲು ಹೊಸ ಕಾನೂನು ಜಾರಿಗೊಳಿಸ ಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿಯವರ ಪೊಲೀಸ್‌ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಯುವ ಸಮೂಹವು ಆನ್‌ಲೈನ್‌ ಗೇಮ್ಸ್‌ನಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇದರಿಂದ ಹಲವಾರು ಕುಟುಂಬಗಳಲ್ಲಿ ಸಂಕಷ್ಟ ಎದುರಾಗುತ್ತಿದೆ. ಹೀಗಾಗಿ, ಆನ್‌ಲೈನ್‌ ಗೇಮ್ಸ್‌ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಆನ್‌ಲೈನ್‌ ಗೇಮ್ಸ್‌ ನಿಷೇಧಿಸಲಾಗಿದೆ. ಅಲ್ಲಿನ ಕಾನೂನು ಕುರಿತು ಅಧ್ಯಯನ ನಡೆಸಿ ರಾಜ್ಯದಲ್ಲೂ ಹೊಸ ಕಾನೂನು ಜಾರಿಗೊಳಿಸಲಾಗುವುದು. ಈ ಕುರಿತು ಅಧಿಕಾರಿಗಳು ಹಾಗೂ ಮುಖ್ಯ ಮಂತ್ರಿಯವರ ಜತೆ ಈ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.

16 ಸಾವಿರ ಪೊಲೀಸರ ನೇಮಕ
ರಾಜ್ಯದಲ್ಲಿ 16 ಸಾವಿರ ಪೊಲೀಸ್‌ ಪೇದೆಗಳ ನೇಮಕಾತಿಗೆ ಮುಖ್ಯಮಂತ್ರಿಯವರು ಅನುಮತಿ ನೀಡಿದ್ದು ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

ಹತ್ತು ಸಾ. ರೂ. ಬಹುಮಾನ
ಮುಖ್ಯಮಂತ್ರಿ ಪದಕ ಪಡೆಯುವ ಪೊಲೀಸ್‌ ಸಿಬಂದಿಗೆ 10 ಸಾ. ರೂ. ಅನ್ನು ಸರಕಾರದ ವತಿಯಿಂದ ಪ್ರೋತ್ಸಾಹ ಧನ ವಾಗಿ ನೀಡಲಾಗುವುದು ಎಂದು ಸಿಎಂ ಘೋಷಿಸಿದರು. ಕಾರ್ಯ ಕ್ರಮದಲ್ಲಿ 237 ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿಗೆ ಪದಕ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next