Advertisement

ಟೆಕ್ಕಿ ಕೊಂದವನ ಕಾಲಿಗೆ ಪೊಲೀಸರ ಗುಂಡೇಟು

11:21 AM Oct 11, 2017 | |

ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಟೆಕ್ಕಿಯೊಬ್ಬನನ್ನು ನಡು ರಸ್ತೆಯಲ್ಲಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಪೊಲೀಸರು ಗುಂಡು ಹಾರಿಸಿ ದೊಡ್ಡ ನಾಗಮಂಗಲ ಸಮೀಪ ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

Advertisement

ಮಡಿವಾಳದ ಜೈ ಭೀಮಾನಗರದ ನಿವಾಸಿ ಕಾರ್ತಿಕ್‌ (26) ಬಂಧಿತ. ಆರೋಪಿಯ ಕಾಲಿಗೆ ಗುಂಡು ತಗುಲಿದ್ದು, ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪಿಎಎಸ್‌ಐ ರವಿ ಹೊಟ್ಟೆ ಮತ್ತು ಕೋರಮಂಗಲ ಪಿಐ ಮಂಜುನಾಥ್‌ ತಲೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ದುಗುಂಟೆ ಪಾಳ್ಯದ ಕ್ಯಾಶಿಯರ್‌ ಲೇಔಟ್‌ನ ಚಾಕೋಲೇಟ್‌ ಕಾರ್ಖಾನೆ ಬಳಿ ಸೋಮವಾರ ನಸುಕಿನಲ್ಲಿ ಟೆಕ್ಕಿ ಪ್ರಣಯ್‌ ಮಿಶ್ರಾ ಎಂಬಾತನನ್ನು ಬೈಕ್‌ ತಗುಲಿದ ವಿಚಾರವಾಗಿ ಆರೋಪಿಗಳು ಮಾರಾಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಆರೋಪಿ ಕಾರ್ತಿಕ್‌ ಮಡಿವಾಳ, ಪರಪ್ಪನ ಅಗ್ರಹಾರ ಹಾಗೂ ಮೈಕೋ ಲೇಔಟ್‌ ಠಾಣೆಗಳಲ್ಲಿ ರೌಡಿಶೀಟರ್‌ ಆಗಿದ್ದು, ಈತನ ವಿರುದ್ಧ ದರೋಡೆ, ರಾಬರಿ ಸೇರಿದಂತೆ ಹತ್ತಾರು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಜೈಲು ಸೇರಿದ್ದ ಆರೋಪಿ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದ. ಇದೀಗ ಮತ್ತೆ ಕೃತ್ಯವೆಸಗಿದ್ದಾನೆ.

ಪೊಲೀಸರ ಮೇಲೆ ಹಲ್ಲೆ: ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಲಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಹೊಸೂರು ರಸ್ತೆಯಲ್ಲಿ ಸ್ನೇಹಿತರೊಂದಿಗೆ ಇರುವ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ್ದರು. ಇತ್ತ ಪೊಲೀಸರನ್ನು ಕಂಡ ಕಾರ್ತಿಕ್‌ ಮತ್ತು ಸಹಚರರು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ.

Advertisement

ಕೂಡಲೇ ಹಿಂಬಾಲಿಸಿದ ಪೊಲೀಸರು ಬೈಕ್‌ ಅನ್ನು ಅಡ್ಡಗಟ್ಟಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಕಾರ್ತಿಕ್‌ ಸಹಚರರು ನಾಪತ್ತೆಯಾಗಿದ್ದು, ಕಾರ್ತಿಕ್‌ ತಪ್ಪಿಸಿಕೊಳ್ಳುವ ಭರದಲ್ಲಿ ಚಾಕುವಿನಿಂದ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪಿಎಎಸ್‌ಐ ರವಿ ಮತ್ತು ಪಿಐ ಮಂಜುನಾಥ್‌ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಈ ವೇಳೆ ಪಿಐ ಮಂಜುನಾಥ್‌, ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಆದರೂ ಕೇಳದ ಆರೋಪಿ ಮತ್ತೂಮ್ಮೆ ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಿಲಾಯಿತು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.

500 ರೂ.ಗೆ ಕೊಲೆ!:  ಭಾನುವಾರ ರಾತ್ರಿ ಬೇಗೂರಿನಲ್ಲಿರುವ ಸ್ನೇಹಿತರ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ತಡರಾತ್ರಿ 3 ಗಂಟೆ ಸುಮಾರಿಗೆ ಮದ್ಯದ ಅಮಲಿನಲ್ಲಿ ಬಿಟಿಎಂ ಲೇಔಟ್‌ ಸಮೀಪವಿರುವ ಉಡುಪಿ ಗಾರ್ಡ್‌ನ್‌ನಲ್ಲಿ ನೆಲೆಸಿರುವ ಪ್ರೇಯಸಿಯ ಮನೆಗೆ ಹೋಗುತ್ತಿದ್ದ ಪ್ರಣಯ್‌ ಶರ್ಮಾ, ಎದುರು ಬರುತ್ತಿದ್ದ ಕಾರ್ತಿಕ್‌ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್‌ನ ಮಡ್‌ಗಾರ್ಡ್‌ ಮುರಿದಿದೆ.

ಇದೇ ವಿಚಾರವಾಗಿ ಕಾರ್ತಿಕ್‌ ಮತ್ತು ಶರ್ಮಾ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ 500 ರೂಪಾಯಿ ಕೊಡುವಂತೆ ಕಾರ್ತಿಕ್‌ ಮತ್ತು ಸ್ನೇಹಿತರು ಬೇಡಿಕೆ ಇಟ್ಟಿದ್ದಾರೆ. ಆದರೆ, ಶರ್ಮಾ ಹಣ ನೀಡಲು ನಿರಾಕರಿಸಿ ಸ್ಥಳದಿಂದ ವೇಗವಾಗಿ ಬೈಕ್‌ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಹಿಂಬಾಲಿಸಿದ ಆರೋಪಿಗಳು ಚಾಕೋಲೇಟ್‌ ಕಾರ್ಖಾನೆ ಬಳಿ ಶರ್ಮಾನನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿದಲ್ಲದೇ, ಮಾರಕಾಸ್ತ್ರಗಳಿಂದ ಕೊಲೆಗೈದು ಹಣ ಕಿತ್ತುಕೊಂಡು ಪರಾರಿಯಾಗಿದ್ದರು.

ಬೈಕ್‌ನ ಸುಳಿವು ಕೊಟ್ಟ ಸಿಸಿಟಿವಿ: ಇನ್ನು ಘಟನೆ ನಡೆದ ದಿನ ಶರ್ಮಾನ ಮೊಬೈಲ್‌ ಹಾಗೂ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಆರೋಪಿ ಬೈಕ್‌ನಲ್ಲಿ ಹೋಗಿರುವ ದೃಶ್ಯ ಸೆರೆಯಾಗಿತ್ತು. ಅಲ್ಲದೇ ಬೈಕ್‌ನ ನೊಂದಣಿ ಸಂಖ್ಯೆ ಕೂಡ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹೊಸೂರು ರಸ್ತೆಯಲ್ಲಿ ಸ್ನೇಹಿತರೊಂದಿಗೆ ಇದ್ದ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next